ಚನ್ನಪಟ್ಟಣ ಉಪಚುನಾವಣೆ: HDK ಮನವೊಲಿಸಲು ಯೋಗೇಶ್ವರ್ ಹೊಸ ತಂತ್ರ…!

ಬೆಂಗಳೂರು:

   ಮುಂಬರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಟಿಕೆಟ್‌ ಹಂಚಿಕೆ ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ಗೆ ‘ಅಗ್ನಿಪರೀಕ್ಷೆ’ಯಂತಾಗುವುದು ನಿಶ್ಚಿತವಾಗಿದೆ. ಈಗಾಗಲೇ ಸ್ಪರ್ಧೆಗಿಳಿಯುವುದು ಖಚಿತ ಎಂದು ಹೇಳಿರುವ ಟಿಕೆಟ್ ಆಕಾಂಕ್ಷಿಯೂ ಆಗಿರುವ ಬಿಜೆಪಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು, ಬಿಜೆಪಿ ಹೈಕಮಾಂಡ್ ಮೂಲಕ ಜೆಡಿಎಸ್ ನಾಯಕ ಹೆಚ್’ಡಿ.ಕುಮಾರಸ್ವಾಮಿ ಮನವೊಲಿಸಲು ಯತ್ನ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

    ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳಿರುವ ಯೋಗೇಶ್ವರ್ ಅವರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿ ಬಿಜೆಪಿ ಉನ್ನತ ನಾಯಕರನ್ನು ಭೇಟಿ ಮಾಡಿದ್ದು, ಭೇಟಿ ವೇಳೆ ಉನ್ನತ ನಾಯಕರು ಆಗಸ್ಟ್ 18 ಅಥವಾ ನಂತರದ ದಿನಗಳಲ್ಲಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ, ಮಾತುಕತೆ ನಡೆಸುವ ಭರವಸೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.

    ಇದೇ ವೇಳೆ ಕುಮಾರಸ್ವಾಮಿ ಅವರ ಒಪ್ಪಿಗೆಯಿಲ್ಲದೆ ಚನ್ನಪಟ್ಟಣ ಉಪಚುನಾವಣೆ ಕುರಿತು ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆನ್ನಲಾಗಿದೆ.ಏತನ್ಮಧ್ಯೆ, ಬಿಜೆಪಿ ಚಿಹ್ನೆಯಿಟ್ಟುಕೊಂಡು ಸ್ಪರ್ಧಿಸುತ್ತೇನೆಯೇ ವಿನಃ ಜೆಡಿಎಸ್ ಚಿಹ್ನೆಯಿಂದ ಸ್ಪರ್ಧಿಸುವುದಿಲ್ಲ ಎಂದು ಯೋಗೇಶ್ವರ್ ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.

   ಆದರೆ, ಕುಮಾರಸ್ವಾಮಿ ಆ ಬೇಡಿಕೆಗೆ ಮಣಿಯುವ ಸಾಧ್ಯತೆಯಿಲ್ಲ ಎನ್ನಲಾಗಿದ್ದು, ಹೀಗಾಗಿ ಚುನಾವಣೆಗೆ ಪತ್ನಿ ಅನಿತಾ ಕುಮಾರಸ್ವಾಮಿ ಅಥವಾ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಚಿಂತನೆಯಲ್ಲಿದ್ದಾರೆಂದು ಹೇಳಲಾಗುತ್ತಿದೆ.ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ಯೋಗೇಶ್ವರ್ ಅವರು, ಪಕ್ಷ ಟಿಕೆಟ್ ನೀಡದಿದ್ದಲ್ಲಿ, ಬೆಂಬಲಿಗರ ಸಲಹೆಯಂತೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.

   ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೈಸೂರಿನ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಕುಮಾರಸ್ವಾಮಿ ಅವರಿಗೆ ಮನವರಿಕೆ ಮಾಡಿಕೊಡುವಲ್ಲಿ ಬಿಜೆಪಿ ಕೇಂದ್ರ ನಾಯಕತ್ವ ಅದರಲ್ಲೂ ಜೋಶಿ ಯಶಸ್ವಿಯಾಗಿದ್ದರು, ಆದರೆ, ಚನ್ನಪಟ್ಟಣ ಉಪಚುನಾವಣೆ ವಿಚಾರದಲ್ಲಿಯೂ ಮನವೊಲಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

   ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದೆ ಸುಮಲತಾ ಅಂಬರೀಷ್ ಅವರಿಗೆ ಕೇಂದ್ರ ಬಿಜೆಪಿ ನಾಯಕತ್ವ ಮನವರಿಕೆ ಮಾಡಿಕೊಟ್ಟಿತ್ತು. ಕುಮಾರಸ್ವಾಮಿ ಅವರಿಗೆ ಕ್ಷೇತ್ಪ ಬಿಟ್ಟುಕೊಡುವಂತೆ ಸೂಚಿಸಿತ್ತು. ಚನ್ನಪಟ್ಟಣ ಕ್ಷೇತ್ರಕ್ಕೆ ಸಂಬಂಧಿಸಿದಂತೆಯೂ ಕುಮಾರಸ್ವಾಮಿಯವರೇ ನಿರ್ಧಾರಕ್ಕೆ ಬದ್ಧವಾಗಿರಲಿದೆ ಎಂದು ಬಿಜೆಪಿ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ. ಆದರೆ, ಏನೇ ಆದರೂ ಅಂತಿಮ ನಿರ್ಧಾರಕ್ಕೂ ಮುನ್ನ ಎರಡೂ ಪಕ್ಷಗಳ ನಾಯಕರು ಸಭೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link
Powered by Social Snap