ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ಬ್ಯಾಂಕುಗಳು

ಭಾಗ-3
    ಬ್ಯಾಂಕ್ ನಿಯಮಗಳು, ಹಣ ಪಾವತಿ ವಿಧಾನಗಳು, ಉಳಿತಾಯ, ಹಣ ಪಡೆಯುವ ಬಗ್ಗೆ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಆಗಾಗ್ಗೆ ಬದಲಾವಣೆ ಆಗುತ್ತಲೇ ಇರುತ್ತವೆ. ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಮಾಹಿತಿಯನ್ನು ತಕ್ಷಣ ತಿಳಿದುಕೊಳ್ಳಬೇಕು.
ಗ್ರಾಹಕರಿಗೂ ಅದನ್ನು ತಿಳಿಸಲು ಮುಂದಾಗಬೇಕು.
    ತಾವಾಗಿಯೇ ತಿಳಿಸದೆ ಹೋದರೂ ಪರವಾಗಿಲ್ಲ. ಗ್ರಾಹಕರು ಮಾಹಿತಿ ಕೇಳಿದಾಗಲಾದರೂ ಆ ಬಗ್ಗೆ ಮಾಹಿತಿ ನೀಡುವುದಕ್ಕೆ ಮುಂದಾಗಬೇಕು. ಆದರೆ ಅದೇಕೋ ಕೆಲವು ರಾಷ್ಟೀಕೃತ ಬ್ಯಾಂಕುಗಳಲ್ಲಿ ಜನರನ್ನು ಕಂಡ ಕೂಡಲೇ ಮುಖ ಸಿಂಡರಿಸಿಕೊಳ್ಳುವ ಪ್ರವೃತ್ತಿ ಮೂಡಿಬಿಟ್ಟಿದೆ. ಅಲ್ಲಿ ಬೋರ್ಡ್‍ನಲ್ಲಿ ಹಾಕಿದ್ದೇವೆ. ನೋಡಿಕೊಳ್ಳಿ ಎಂದು ಹೇಳುತ್ತಾ ತಮ್ಮ ಕಾರ್ಯದಲ್ಲಿ ಮಗ್ನರಾಗುವವರೇ ಹೆಚ್ಚು. ಸಮಸ್ಯೆಗಳು ಎದುರಾದಾಗ, ಗ್ರಾಹಕರಿಗೆ ಅರ್ಥವಾಗದೇ ಹೋದಾಗ ಅವುಗಳನ್ನು ಬಗೆಹರಿಸುವ, ತಿಳಿ ಹೇಳುವ ವ್ಯಕ್ತಿಯೊಬ್ಬರು ಬ್ಯಾಂಕ್‍ನಲ್ಲಿ ಇರಬೇಕು. 
    ಇಂದಿನ ದಿನಗಳಲ್ಲಿ ಗ್ರಾಹಕರು ತಮ್ಮ ಕೆಲಸ ಕಾರ್ಯಗಳ ನಿಮಿತ್ತದಲ್ಲಿ ಒಂದಲ್ಲಾ ಒಂದು ಒತ್ತಡದಲ್ಲಿ ಸಿಲುಕುತ್ತಿದ್ದಾರೆ. ಹೀಗಾಗಿ ಎಲ್ಲರೂ ಬ್ಯುಸಿಯಾಗಿರುತ್ತಾರೆ. ಸಣ್ಣ ಪುಟ್ಟ ವಿಷಯಗಳಿಗೆಲ್ಲ ಗಂಟೆಗಟ್ಟಲೆ ಸಮಯ ವಿನಿಯೋಗಿಸಲು ಸಾಧ್ಯವಾಗದು. ಬೇಗ ಕೆಲಸವಾದರೆ ಸಾಕು ಎಂಬಂತೆ ಇರುತ್ತಾರೆ. ಹೀಗಾಗಿ ಹೆಚ್ಚು ಚರ್ಚೆ ಮಾಡಲು, ಅನಗತ್ಯ ವಾಗ್ವಾದಗಳಿಗೆ ಇಳಿಯುವುದಿಲ್ಲ. ಇಳಿದರೂ ಬ್ಯಾಂಕ್‍ಗಳಲ್ಲಿ ಸಮರ್ಪಕ ಉತ್ತರಗಳು ಸಿಗುವುದಿಲ್ಲ. ಇದನ್ನೆಲ್ಲಾ ಅರಿತೆ ಸಮಾಧಾನವಾಗಿ ಬ್ಯಾಂಕ್ ಸಿಬ್ಬಂದಿಗಳ ಮುಂದೆ ತಮ್ಮ ಬೇಡಿಕೆಯನ್ನು ಇಡುತ್ತಾರೆ. 
     ಗ್ರಾಹಕರ ಖಾತೆಗಳಲ್ಲಿ ಅವರಿಗೇ ತಿಳಿಯದಂತೆ ಕೆಲವೊಮ್ಮೆ ಹಣ ಕಡಿತವಾಗುತ್ತದೆ. ಹೀಗೆ ಕಡಿತವಾಗಿರುವ ಹಣ ಯಾವುದು ಎಂಬುದಕ್ಕೆ ಉತ್ತರವೂ ಸಿಗುವುದಿಲ್ಲ.  ಮಾಹಿತಿಯನ್ನು ಕೊಡುವುದಿಲ್ಲ. ನಿಮಗೆ ಮೆಸೇಜ್ ಬಂದಿರುತ್ತದೆ ನೋಡಿಕೊಳ್ಳಿ ಎಂತಲೋ, ನಾವು ಅದಕ್ಕೆ ಜವಾಬ್ದಾರರಲ್ಲ ಎಂತಲೋ ಹೇಳಿ ಗ್ರಾಹಕರ ಬಾಯಿ ಮುಚ್ಚಿಸುವ ನೈಪುಣ್ಯತೆಯೇ ಹೆಚ್ಚು. ಬ್ಯಾಂಕ್ ಸಿಬ್ಬಂದಿಯೂ ಕಾರ್ಯ ಒತ್ತಡದಲ್ಲಿ ಇರುತ್ತಾರೆಂಬುದು ಎಲ್ಲರಿಗೂ ಗೊತ್ತು.
 
      ಆದರೂ ಗ್ರಾಹಕರಿಗೆ ಮಾಹಿತಿ ಕೊಡುವುದು ಆದ್ಯತೆಯ ಕೆಲಸವಲ್ಲವೇ? ಖಾತೆಯಲ್ಲಿನ ಗೊಂದಲಗಳ ಬಗ್ಗೆ ಪ್ರಶ್ನೆ ಮಾಡಲು ಬ್ಯಾಂಕ್‍ಗೆ ಹೋದರೆ ಅಲ್ಲಿ ಅರ್ಜಿ ಬರೆದುಕೊಡಿ, ಪರಿಶೀಲನೆ ಮಾಡುತ್ತೇವೆ ಎಂಬ ಉತ್ತರಗಳು ಕೇಳಿಬರುತ್ತವೆ. ಬ್ಯಾಂಕ್ ಖಾತೆಯಲ್ಲಿ ಕಾರಣಾಂತರಗಳಿಂದ 10ರೂಪಾಯಿ ಕಡಿತವಾದರೆ ಅದನ್ನು ಪ್ರಶ್ನಿಸಲು ಹೋದರೆ ದಿನವಿಡೀ ಕಾಯುತ್ತಾ ಕುಳಿತುಕೊಳ್ಳಬೇಕು. ಅದಕ್ಕೆ ಮಾಹಿತಿ ನೀಡಲು ಹಿಂದೆ ಮುಂದೆ ನೋಡುತ್ತಾರೆ.
      ಬ್ಯಾಂಕ್‍ನಲ್ಲಿ ಗಂಟೆಗಟ್ಟಲೆ ಕುಳಿತು ಸಮಸ್ಯೆ ಪರಿಹರಿಸಿಕೊಳ್ಳುವಷ್ಟು ಸಮಯ ವ್ಯರ್ಥ ಮಾಡಿಕೊಳ್ಳಲು ಗ್ರಾಹಕರು ಮುಂದೆ ಬರುವುದಿಲ್ಲ. ಮೇಲೆ ಹೇಳಿದ್ದು 10 ರೂಪಾಯಿಯ ಒಂದು ಉದಾಹರಣೆ ಮಾತ್ರ. ಇಂತಹ ಹಲವಾರು ಪ್ರಸಂಗಗಳು ಬ್ಯಾಂಕ್ ಗ್ರಾಹಕರಿಗೆ ಎದುರಾಗುತ್ತಾ ಹೋಗುತ್ತವೆ. 
ಭಾಷೆ ಬಾರದ ಬ್ಯಾಂಕ್ ಸಿಬ್ಬಂದಿ
       ಈಗಿನ ಪರಿಸ್ಥಿತಿಯಲ್ಲಿ ಬ್ಯಾಂಕ್‍ಗಳಲ್ಲಿ ಕೆಲಸ ಮಾಡಲು ಬರುತ್ತಿರುವ ಸಿಬ್ಬಂದಿ ಬಹುತೇಕ ಮಂದಿ ಅಂತಾರಾಜ್ಯದವರಾಗಿದ್ದಾರೆ. ಅವರಿಗೆ ಇಲ್ಲಿನ ಸ್ಥಳೀಯ ಭಾಷೆ ಬಾರದು.  ಸ್ಥಳೀಯ ಗ್ರಾಹಕರ ಸಮಸ್ಯೆ ಅರ್ಥವಾಗದು. ಗ್ರಾಹಕರು ಯಾವುದಾದರೂ ಸಮಸ್ಯೆ ಹೇಳಿಕೊಂಡರೆ ಅವರು ಏನು ಅರ್ಥ ಮಾಡಿಕೊಳ್ಳುತ್ತಾರೋ ತಿಳಿಯದು.  ಹಿಂದಿ ಅಥವಾ ಇಂಗ್ಲಿಷ್‍ನಲ್ಲಿ ಮಾಹಿತಿ ನೀಡಲು ಅಥವಾ ಮರುಪ್ರಶ್ನೆ ಹಾಕಲು ಮುಂದಾಗುತ್ತಾರೆ. ಅವರ ಭಾಷೆ ಅರ್ಥವಾಗದ ಗ್ರಾಹಕರು ಇನ್ನಿಲ್ಲದ ಸಮಸ್ಯೆಗಳಿಗೆ ಸಿಲುಕಿಕೊಂಡವರಂತೆ ಅತ್ತಿಂದಿತ್ತ ನೋಡಿ ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ.
 
      ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‍ಗಳಲ್ಲಿ ನೇಮಕಗೊಳ್ಳುತ್ತಿರುವ ಸಿಬ್ಬಂದಿ ಹೆಚ್ಚಿನದಾಗಿ ಉತ್ತರ ಭಾರತ ಭಾಗದವರಾಗಿದ್ದು, ಅವರು ಕೇವಲ ಹಿಂದಿ ಹಾಗೂ ಇಂಗ್ಲಿಷ್ ಮಾತನಾಡಬಲ್ಲರು. ಕೆಲ ಖಾತೆದಾರರಿಗೆ ಸ್ಥಳೀಯ ಕನ್ನಡ ಭಾಷೆ ಬಿಟ್ಟರೆ ಇನ್ನೊಂದು ಭಾಷೆ ಬರುವುದಿಲ್ಲ. ಇದರಿಂದ ಬ್ಯಾಂಕ್‍ಗಳಲ್ಲಿ ಕೊಂಚ ಸಮಸ್ಯೆ ಉಂಟಾಗುತ್ತಿದೆ. ಅಲ್ಲಿರುವ ಇತರೆ ಸಿಬ್ಬಂದಿ ಅವರಿಗೆ ನೆರವಾಗಲು ಮುಂದೆ ಬರುವುದಿಲ್ಲ. ಸಮಸ್ಯೆಗಳನ್ನು ನಾವೇಕೆ ಮೈಮೇಲೆ ಎಳೆದುಕೊಳ್ಳಬೇಕು ಎಂಬಂತೆ ಇರುತ್ತದೆ ಅಲ್ಲಿರುವವರ ಮನಸ್ಥಿತಿ. 
ಗ್ರಾಹಕರ ಮೇಲೆ ಕೀಳು ಮನೋಭಾವ 
      ಬ್ಯಾಂಕುಗಳೆಂದ ಮೇಲೆ ಅಲ್ಲಿಗೆ ವಿದ್ಯಾವಂತರಂತೆಯೇ ಅವಿದ್ಯಾವಂತರೂ ಬರುತ್ತಾರೆ. ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳು ಹೀಗೆ ಬ್ಯಾಂಕ್‍ಗಳಲ್ಲಿ ಹೆಚ್ಚು ಹಣ ಇಡುವವರ ಚಹರೆಗಳು ಬ್ಯಾಂಕ್‍ನವರಿಗೆ ಸುಲಭವಾಗಿ ಅರ್ಥವಾಗುತ್ತದೆ. ಉತ್ತಮ ರೀತಿಯಲ್ಲಿ ಶರ್ಟ್, ಪ್ಯಾಂಟ್, ಶೂ ಧರಿಸಿ ಆಕರ್ಷಣೀಯವಾಗಿ ಬರುವವರಿಗೆ ನೀಡಿದಷ್ಟು ಗೌರವವನ್ನು ಬ್ಯಾಂಕ್‍ಗಳು ಇತರೆಯವರಿಗೆ ನೀಡುವುದಿಲ್ಲ. ಒಂದುವೇಳೆ ಒಬ್ಬ ಕೃಷಿಕಾರ್ಮಿಕ ಲಕ್ಷಾಂತರ ರೂಗಳ ವ್ಯವಹಾರ ಮಾಡಿದರೂ ಆತನಿಗೆ ಅಲ್ಲಿ ಸಿಗುವ ಗೌರವ ಅಷ್ಟಕ್ಕಷ್ಟೇ.
      ಅದೇ ಆಕರ್ಷಣೀಯ ಸೂಟುಬೂಟಿನ ವ್ಯಕ್ತಿಯೊಬ್ಬ ಕೇವಲ ಕೆಲವೇ ಸಾವಿರ ರೂಪಾಯಿಗಳ ವಹಿವಾಟು ನಡೆಸುತ್ತಾ ಬಂದರೂ ಅಂತಹವರಿಗೆ ವಿಶೇಷ ಮರ್ಯಾದೆ. ಬ್ಯಾಂಕ್‍ನಲ್ಲಿ ಎದುರಾಗುವ ಇಂತಹ ದೋರಣೆಗಳಿಂದ ಅನೇಕ ಗ್ರಾಹಕರು ಬೇಸತ್ತು ಹೋಗಿದ್ದಾರೆ. ನಾವು ಹಣ ಇಡುತ್ತೇವೆ, ನಮ್ಮಂತೆಯೇ ಅವರೂ ಹಣ ಇಟ್ಟಿದ್ದಾರೆ. ಆದರೆ ನಮ್ಮನ್ನೇಕೆ ಈರೀತಿ ನೋಡುತ್ತಾರೆ. ಎಂದು ಮನಸ್ಸಿನಲ್ಲಿ ನೊಂದುಕೊಳ್ಳುವ ಕೆಲವರು ಕೀಳು ಮನೋಭಾವನೆಗೆ ಒಳಗಾಗುತ್ತಾರೆ. 
      ಇಂತಹವರು ಸೂಕ್ತ ಮಾಹಿತಿ ಕೋರಿ ಏನಾದರೂ ಕೇಳಲು ಹೋದಾಗ ಅವರ ಮೇಲೆ ದಬ್ಬಾಳಿಕೆಯಂತೆ ವರ್ತನೆ ಮಾಡುವ ಪ್ರಸಂಗಗಳು ಉಂಟಾಗುತ್ತವೆ. ಅವರ ಆರ್ಭಟ ನೋಡಿಯೇ ಗ್ರಾಹಕರು ಇವರ ಸಹವಾಸವೇ ಬೇಡ ಎಂದು ವಾಪಸ್ ಆಗುತ್ತಾರೆ. ಹಣ ಇಡುವ, ಪಡೆಯುವ ಗ್ರಾಹಕರ ಮೇಲೆಯೇ ಏರುಧ್ವನಿಯಲ್ಲಿ ಮಾತನಾಡುವಂತಹ ಪ್ರವೃತ್ತಿ ಬ್ಯಾಂಕುಗಳಲ್ಲಿ ಬೆಳೆದಿದೆ ಎಂದರೆ ಹಿಂದಿನ ಕಾಲದ ಖಾಸಗಿ ಲೇವಾದೇವಿ ವ್ಯಾವಹಾರಸ್ಥರಿಗೂ ಇಂದಿನ ಬ್ಯಾಂಕ್ ವ್ಯವಸ್ಥೆಗೂ ಏನು ವ್ಯತ್ಯಾಸ. 
     ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕೇವಲ ಬೆರಳಣಿಕೆಯಷ್ಟು ಗ್ರಾಹಕರಿಗೆ ಮಾತ್ರ ಬೆಲೆ ಕೊಟ್ಟು ಮಾತನಾಡಿಸುತ್ತಾರೆ ಹೊರತು ಸಣ್ಣ ಖಾತೆದಾರರಿಗೆ, ಜೀರೋ ಬ್ಯಾಲೆನ್ಸ್ ಖಾತೆದಾರರಿಗೆ, ವಿದ್ಯಾರ್ಥಿ ಖಾತೆಗಳಿಗೆ ಬೆಲೆನೇ ಇಲ್ಲವೆಂಬಂತೆ ವರ್ತಿಸುತ್ತಿರುವುದು ಬ್ಯಾಂಕ್‍ಗಳ ಬಗ್ಗೆ ಸಾರ್ವಜನಿಕರಲ್ಲಿ ತಾತ್ಸಾರದ ಮನೋಭಾವ ಉಂಟಾಗಲು ಕಾರಣವಾಗಿದೆ. ಲಕ್ಷ ಲಕ್ಷ, ಕೋಟಿ ಕೋಟಿ ರೂಗಳನ್ನೇ ನೋಡುವ, ಅಂತಹ ವ್ಯವಹಾರ ಮಾಡುವವರಿಗೆ ಹೆಚ್ಚು ಮಣೆ ಹಾಕುವ, ಕಡಿಮೆ ಉಳಿತಾಯದ ಗ್ರಾಹಕರ ಬವಣೆಗಳಿಗೆ ಸರಿಯಾಗಿ ಸ್ಪಂದಿಸದ ಧೋರಣೆಗಳು ಅಲ್ಲಲ್ಲಿ ಕಂಡು ಬರುತ್ತಿರುವುದು ಇಡೀ ಬ್ಯಾಂಕ್ ವ್ಯವಸ್ಥೆಯ ಬಗ್ಗೆ ಅಸಹನೆ ಉಂಟಾಗಲು ಕಾರಣವಾಗುತ್ತಿದೆ.  
     ರಾಷ್ಟ್ರೀಕೃತ ಬ್ಯಾಂಕುಗಳು ಕೆಲವು ಖಾಸಗಿ ಕಂಪನಿಗಳಿಗೆ ಲಾಭದಾಯಕವಾಗುವಂತೆ ವರ್ತನೆ ಮಾಡುತ್ತಿರುವುದು ಈಗ ಗುಟ್ಟಾಗೇನು ಉಳಿದಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಇಂತಹ ಸುದ್ದಿಗಳು ಹೆಚ್ಚು ಪ್ರಚಲಿತದಲ್ಲಿವೆ. ಅಂತಹವರೊಂದಿಗೆ ಎಲ್ಲ ವಿಷಯಗಳನ್ನು ಬಹಿರಂಗ ಪಡಿಸುವ, ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಬ್ಯಾಂಕ್ ನಿಯಮಗಳನ್ನು ವ್ಯವಹರಿಸುವಂತೆ ಕೆಲವೊಮ್ಮೆ ಕಂಡು ಬರುತ್ತದೆ. ಹಿಡನ್ ಅಜೆಂಡಾ ಇಟ್ಟುಕೊಂಡಂತೆ ಕೆಲವರಿಗೆ ಅಷ್ಟೇ ಮಾಹಿತಿ ನೀಡಿ ಇನ್ನು ಕೆಲವು ಗ್ರಾಹಕರಿಗೆ ಯಾವುದೇ ಮಾಹಿತಿ ನೀಡದೆ, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು  ಹೆಚ್ಚಿನ ಶುಲ್ಕಗಳನ್ನು ವಿಧಿಸುತ್ತಿವೆ.
     ಜನರಿಗೆ ಅನುಕೂಲವಾಗಲೆಂದು ಇರುವ ಬ್ಯಾಂಕುಗಳಿಂದಲೇ ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳಬೇಕಾದರೆ ಇದೀಗ ಬ್ಯಾಂಕ್‍ಗಳಲ್ಲಿ ಖಾತೆ ತೆಗೆಯುವ ಅನಿವಾರ್ಯತೆ ಇದೆಯೇ..? ಬ್ಯಾಂಕ್‍ಗಳ ಸೇವೆ ಪಡೆದುಕೊಳ್ಳುವ ಅವಶ್ಯಕತೆ ಆದರೂ ಇದೆಯೇ..? ಎಂಬ ಕೆಲವು ಗ್ರಾಹಕರ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ.
      ರಾಷ್ಟ್ರದ ಮೂಲೆ ಮೂಲೆಯಲ್ಲೂ ಇರುವ ಪ್ರತಿಯೊಬ್ಬ ಪ್ರಜೆಯು ಬ್ಯಾಂಕ್ ಖಾತೆ ಹೊಂದಬೇಕು. ಈ ರಾಷ್ಟ್ರದ ಆರ್ಥಿಕ ವ್ಯವಸ್ಥೆಯೊಳಗೆ ಬರಬೇಕು ಎಂಬ ಇಂಗಿತ ಸರ್ಕಾರಗಳದ್ದು. ಅದಕ್ಕೆ ತಕ್ಕಂತೆ ಬ್ಯಾಂಕ್ ವಹಿವಾಟಿಗೆ ಉತ್ತೇಜನ ನೀಡಲಾಗುತ್ತಿದೆ. ಇದರ ಜೊತೆಗೆ ಗ್ರಾಹಕರು ಖಾತೆಗಳು ತೆರೆದರಷ್ಟೇ ಸಾಕೆ? ಅದಕ್ಕೆ ಪೂರಕವಾಗಿ ಬ್ಯಾಂಕ್‍ಗಳು ಸ್ಪಂದಿಸ ಬೇಡವೇ?… ಇದು ಸಾಮಾನ್ಯ ಜನರು ಕೇಳುವ ಪ್ರಶ್ನೆ. 
      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link