ಬೆಂಗಳೂರು:
ಹಣ ಡಬ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರನ್ಯಾ ರಾವ್ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ದೀಪಕ್ ಬಂಧಿತ ಆರೋಪಿ. ಚಿಕ್ಕಮಗಳೂರಿನ ಹೊಸಮನೆ ಬಡಾವಣೆಯ ನಿವಾಸಿ. ಈತ ಈ ಹಿಂದೆ ರನ್ಯಾ ರಾವ್ ಕಾರು ಚಾಲಕನಾಗಿದ್ದ ಎನ್ನಲಾಗಿದೆ.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹಣ ದುಪ್ಪಟ್ಟು ಮಾಡುವುದಾಗಿ ಹೇಳಿ ಹಲವರಿಗೆ ವಂಚಿಸಿದ್ದ ಆರೋಪ ದೀಪಕ್ ಮೇಲಿದೆ. ಹಲವರಿಂದ ಹಣ ಪಡೆದು ಈತ ನಾಪತ್ತೆಯಾಗಿದ್ದ. ಈ ಹಿನ್ನೆಲೆಯಲ್ಲಿ ದೀಪಕ್‌ನನ್ನು ಬಂಧಿಸಲಾಗಿದೆ. ಇನ್ನು ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟಿ ರನ್ಯಾ ರಾವ್ ಪ್ರಕರಣಕ್ಕೂ ದೀಪಕ್‌ಗೂ ಸಂಬಂಧವಿದೆಯಾ ಎಂಬುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧಿತಳಾಗಿರುವ ನಟಿ ರನ್ಯಾ ರಾವ್ ವಿರುದ್ಧ ಮಾಧ್ಯಮಗಳು ಯಾವುದೇ ತೆರನಾದ ಮಾನಹಾನಿ ಸುದ್ದಿ ಪ್ರಕಟಿಸದಂತೆ ಬೆಂಗಳೂರಿನ ವಿಚಾರಣಾ ನ್ಯಾಯಾಲಯ ಆದೇಶಿಸಿದೆ. ಅದೇ ರೀತಿ ಆಕೆಯ ಮಲ ತಂದೆ ಐಪಿಎಸ್ ಅಧಿಕಾರಿ ರಾಮಚಂದ್ರರಾವ್ ವಿರುದ್ಧ ಮಾಧ್ಯಮಗಳು ಯಾವುದೇ ತೆರನಾದ ಮಾನಹಾನಿ ಸುದ್ದಿ ಪ್ರಕಟಿಸದಂತೆ ಕರ್ನಾಟಕ ಹೈಕೋರ್ಟ್ ಏಕಪಕ್ಷೀಯ ಪ್ರತಿಬಂಧಕಾದೇಶ ಮಾಡಿವೆ.
ರನ್ಯಾ ರಾವ್ ತಾಯಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ 41ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಎನ್ ವೀಣಾ ಅವರು ಬುಧವಾರ 35 ಮಾಧ್ಯಮ ಸಂಸ್ಥೆಗಳಿಗೆ ರನ್ಯಾ ವಿರುದ್ಧ ಯಾವುದೇ ತೆರನಾದ ಮಾನಹಾನಿ ಮಾಡುವ ಸುದ್ದಿ ಪ್ರಸಾರ ಅಥವಾ ಪ್ರಕಟ ಮಾಡಬಾರದು ಎಂದು ನಿರ್ಬಂಧಿಸಿ ಆದೇಶಿಸಿದರು.
ಮಾಧ್ಯಮಗಳು ಪ್ರಕರಣದ ಸಂಬಂಧ ರಂಜನಾತ್ಮಕ ಸುದ್ದಿ ಪ್ರಕಟಿಸುವುದರಿಂದ ರನ್ಯಾ ಅವರಿಗೆ ಸಂವಿಧಾನದ 21ನೇ ವಿಧಿಯಡಿ ಲಭ್ಯವಾಗಿರುವ ಹಕ್ಕು ಉಲ್ಲಂಘನೆಯಾಗಲಿದೆ. ಮಾಧ್ಯಮಗಳ ವರದಿಗಾರಿಕೆಯಿಂದ ತಪ್ಪು ಭಾವನೆ ಸೃಷ್ಟಿಯಾಗಿದ್ದು, ರನ್ಯಾ ಮೇಲೆ ಸಾರ್ವಜನಿಕವಾಗಿ ಪೂರ್ವಾಗ್ರಹಪೀಡಿತ ಅಭಿಪ್ರಾಯ ರೂಪುಗೊಳ್ಳಲಿದೆ ಎಂದು ರನ್ಯಾ ತಾಯಿ ಆಕ್ಷೇಪಿಸಿದ್ದರು.
“ನ್ಯಾಯಾಲಯ ಮುಂದೆ ಇಟ್ಟಿರುವ ಮಾಧ್ಯಮ ವರದಿಗಳಲ್ಲಿ ಹಾಲಿ ನಡೆಯುತ್ತಿರುವ ತನಿಖೆ ಆಧರಿಸಿ ಪ್ರತಿವಾದಿ ಮಾಧ್ಯಮಗಳು ಪ್ರಸಾರ/ಪ್ರಕಟ ಮಾಡುತ್ತಿರುವ ವರದಿಗಳು ನ್ಯಾಯಾಲಯ ರೂಪಿಸಿರುವ ಮಾರ್ಗಸೂಚಿಗೆ ವಿರುದ್ಧವಾಗಿದ್ದು, ಈ ಮೂಲಕ ನ್ಯಾಯದಾನದಲ್ಲಿ ಮಧ್ಯಪ್ರವೇಶಿಕೆ ಮಾಡಿದಂತಾಗಿದೆ” ಎಂದು ಆದೇಶದಲ್ಲಿ ಹೇಳಲಾಗಿದೆ.
