ಬರಗೂರು :
ಶಿರಾ ತಾಲ್ಲೂಕು ಗೋಪಿಕುಂಟೆ ಗ್ರಾಮದ ಸುಮಾರು 30 ವರ್ಷದ ಯುವಕ ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಗ್ಗೆ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದು, ಇಲ್ಲಿತನಕ ತಾಲ್ಲೂಕಿನ ಹುಲಿಕುಂಟೆ ಹೋಬಳಿಯಲ್ಲಿ ಒಟ್ಟು ನಾಲ್ಕು ಮಂದಿ ಕೊರೊನಾ ಸೋಂಕು ತಗುಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಮೃತ ಯುವಕನಿಗೆ 2020 ನೇ ಸಾಲಿನ ಮೊದಲನೆ ಹಂತದ ಕೊರೊನಾ ಸಂದರ್ಭದಲ್ಲಿ ವಿವಾಹವಾಗಿತ್ತು. ಯುವಕ ಆರೋಗ್ಯದಿಂದಿದ್ದು, ಯಾವುದೇ ಕಾಯಿಲೆಗಳಿರಲಿಲ್ಲ ಎನ್ನಲಾಗಿದೆ. ಇತ್ತೀಚೆಗೆ ಕೆಮ್ಮು, ನೆಗಡಿ ಇದ್ದರಿಂದ ಬರಗೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರೀಕ್ಷಿಸಲಾಗಿತ್ತು. ದುರಾದೃಷ್ಟ ವಶಾತ್ ಕೊರೊನಾ ಪಾಸಿಟೀವ್ ಸೋಂಕು ಪತ್ತೆಯಾಗಿ, ಹೆಚ್ಚಿನ ಚಿಕಿತ್ಸೆಗಾಗಿ ಶಿರಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವನ್ನಪ್ಪಿದ್ದಾನೆ.
ಮೊದಲನೆ ಅಲೆಯ ಕೊರೊನಾಗೆ 66 ವರ್ಷದ ಬರಗೂರಿನ ಓರ್ವ ವ್ಯಕ್ತಿ ಮೃತಪಟ್ಟಿದ್ದರು. ಇತ್ತೀಚೆಗೆ ನಾಲ್ಕು ದಿನಗಳ ಹಿಂದೆ ಎರಡನೆ ಅಲೆಯಲ್ಲಿ ವೀರಬೊಮ್ಮನಹಳ್ಳಿಯ ಸುಮಾರು 56 ವರ್ಷದ ಓರ್ವ ವ್ಯಕ್ತಿ, ಬರಗೂರಿನ 65 ವರ್ಷದ ಓರ್ವ ಮಹಿಳೆ ಹಾಗೂ ಬುಧವಾರ 30 ವರ್ಷದ ಓರ್ವ ಯುವಕ ಸೇರಿದಂತೆ ಒಟ್ಟು ನಾಲ್ಕು ಮಂದಿ ಹುಲಿಕುಂಟೆ ಹೋಬಳಿಯಲ್ಲಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಬರಗೂರು ಸಮೀಪದ ಗೋಪಿಕುಂಟೆ ಗ್ರಾಮದ 30 ವರ್ಷದ ಯುವಕನೋರ್ವ ಭಾನುವಾರ ಬೆಳಿಗ್ಗೆ ಕೊರೊನಾದಿಂದ ಮೃತಪಟ್ಟಿದ್ದು ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಗ್ರಾಪಂ ಸಿಬ್ಬಂದಿ ಹಾಗೂ ಕುಟುಂಬಸ್ಥರ ಕೆಲವರ ಉಪಸ್ಥಿತಿಯಲ್ಲಿ ಗೋಪಿಕುಂಟೆ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಇತ್ತೀಚೆಗೆ ಹುಲಿಕುಂಟೆ ಹೋಬಳಿಯ ಬರಗೂರು ಸೇರಿದಂತೆ ಹಲವಾರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೊರೊನಾ ಸೊಂಕು ಹೆಚ್ಚು ಕಾಣಿಸಿಕೊಳ್ಳುತ್ತಿರುವ ಜೊತೆಗೆ ಸಾವಿನ ಪ್ರಮಾಣವೂ ಸಹ ಹೆಚ್ಚುತ್ತಿದೆ. ಇನ್ನಾದರೂ ಜನರು ಎಚ್ಚೆತ್ತುಕೊಂಡು ಅವಶ್ಯಕತೆ ಇದ್ದರೆ ಮಾತ್ರ ಹೊರಬಂದು ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕಿದೆ. ಆರೋಗ್ಯ ಸ್ವಲ್ಪ ಏರುಪೇರಾದರೂ ಡಾಕ್ಟರ್ ಸಲಹೆ ಪಡೆದು ಚಿಕಿತ್ಸೆ ಪಡೆಯುವುದರಿಂದ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಬಹುದು.
ಮೃತ ಯುವಕನ ಅಂತ್ಯಸಂಸ್ಕಾರದ ವೇಳೆ ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಗ್ರಾಮಪಂಚಾಯ್ತಿ ನೇತೃತ್ವದಲ್ಲಿ ಬ್ಲೀಚಿಂಗ್ ಪೌಡರ್ ಹಾಗೂ ಸ್ಯಾನಿಟೈಸರ್ ಮಾಡಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಕಂದಾಯ ತನಿಖಾಧಿಕಾರಿ ಹೊನ್ನಪ್ಪ, ಹೊಸಹಳ್ಳಿ ಗ್ರಾಮ ಪಂಚಾಯ್ತಿ ಪಿಡಿಓ ಸತೀಶ್, ಕಾರ್ಯದರ್ಶಿ ಹಾಲಪ್ಪ, ಕಿರಿಯ ಆರೋಗ್ಯ ಸಹಾಯಕ ಮನುಕಿರಣ್, ಆರೋಗ್ಯ ಸಹಾಯಕಿ ಲತಾ, ಗ್ರಾಮ ಲೆಕ್ಕಿಗ ಮಂಜು ಜಡೇದಾ, ಪೋಲೀಸ್ ಪೇದೆ ಸಂಜು, ಗ್ರಾಮ ಪಂಚಾಯ್ತಿ ಸದಸ್ಯ ಪ್ರಸನ್ನಕುಮಾರ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
