ಮಂಡ್ಯ:
ಕುಟುಂಬ ರಾಜಕಾರಣ ಎಲ್ಲಿಲ್ಲ.. ನಮ್ಮದು ಕುಟುಂಬ ರಾಜಕಾರಣ ಎನ್ನಲು ಯಾರಿಗೂ ಹಕ್ಕು ಇಲ್ಲ ಎಂದು ಸಿಎಂ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.
ಮದ್ದೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು, ಕುಟುಂಬ ರಾಜಕಾರಣ ಎಲ್ಲಾ ಪಕ್ಷಗಳಲ್ಲೂ ಇದೆ. ಯಡಿಯೂರಪ್ಪ, ಸಿದ್ದರಾಮಯ್ಯ ಮಕ್ಕಳು ರಾಜಕೀಯದಲ್ಲಿ ಇಲ್ಲವೇ..? ನಮ್ಮದು ಕುಟುಂಬ ರಾಜಕೀಯ ಎಂದು ಹೇಳಲು ಯಾರಿಗೂ ಹಕ್ಕಿಲ್ಲ ಎಂದು ಟಾಂಗ್ ನೀಡಿದರು.
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಾವೇನು ಹಿಂಬಾಗಿಲ ಮೂಲಕ ರಾಜಕಾರಣ ಮಾಡುತ್ತಿಲ್ಲ. ಜನರ ಬಳಿ ತೆರಳಿ ಮತ ಹಾಕಿಸಿಕೊಂಡೇ ನಾವು ಕೂಡ ರಾಜಕೀಯ ಮಾಡುತ್ತಿದ್ದೇವೆ. ಹಾಗೊಂದು ವೇಳೆ ಇದನ್ನು ಟೀಕೆ ಮಾಡಿದರೆ ಅವರದ್ದು ವಿಕೃತ ಮನಸ್ಸು ಎಂದು ಹೇಳಬೇಕಾಗುತ್ತದೆ. ನಾವು ನಮ್ಮ ಕುಟುಂಬಸ್ಥರು ಬದ್ಧತೆಯನ್ನಿಟ್ಟಿಕೊಂಡು ರಾಜಕೀಯ ಮಾಡುತ್ತೇವೆ ಎಂದರು.
ಇನ್ನು ಇದೇ ವೇಳೆ, ಸುಮಲತಾ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿದ ಅನಿತಾ ಕುಮಾರಸ್ವಾಮಿ, ನಾವು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ವಿರೋಧಿಗಳು ಇದ್ದೇ ಇರುತ್ತಾರೆ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
