ವೀಕೆಂಡ್ ಜಾಲಿರೈಡ್ : ಮೂವರು ಇಂಜಿನಿಯರ್ಸ್ ಬಲಿ!!

ಬೆಂಗಳೂರು :

      ಡಿವೈಡರ್ ಮತ್ತು ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ನಗರದ ಬಸವೇಶ್ವರ್ ನಗರದ ಪುಣ್ಯ ಆಸ್ಪತ್ರೆ ಬಳಿ ಭಾನುವಾರ ತಡರಾತ್ರಿ ನಡೆದಿದೆ.

      ಕುಣಿಗಲ್ ನಿವಾಸಿ ಅನಿಲ್, ಟಿ ನರಸಿಪುರದ ಕಾರ್ತಿಕ್ ಹಾಗೂ ಚಿಕ್ಕಬಳ್ಳಾಪುರದ ಗೌರಿಬಿದನೂರು ಶ್ರೀನಾಥ್ ಮೃತ ಟೆಕ್ಕಿಗಳು.  ಶ್ರೀನಾಥ್​ ಖಾಸಗಿ ಕಂಪನಿಯಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಾರ್ತಿಕ್​ ಕೆಆರ್​ಡಿಎಲ್​ನಲ್ಲಿ ಇಂಜಿನಿಯರ್​ ಆಗಿದ್ದರು ಮತ್ತು ಅನಿಲ್​ ನಾಸಿಕನ್​ನ ಹಿಂದುಸ್ಥಾನ್​ ಏರೋನಾಟಿಕ್ಸ್​ ಲಿಮಿಟೆಡ್​ನಲ್ಲಿ ಇಂಜಿನಿಯರ್​ ಆಗಿದ್ದರು.

      ಶ್ರೀನಾಥ್​ ಹಾಗೂ ಕಾರ್ತಿಕ್​ ಬೆಂಗಳೂರಿನಲ್ಲಿ ವಾಸವಿದ್ದರು. ರಜೆಯ ಮೇಲೆ ಬೆಂಗಳೂರಿಗೆ ಬಂದಿದ್ದ ಅನಿಲ್​ ಸ್ನೇಹಿರತಾದ ಶ್ರೀನಾಥ್​ ಮತ್ತು ಕಾರ್ತಿಕ್​ರನ್ನು ಭೇಟಿ ಮಾಡಲು ತೆರಳಿದ್ದರು. ನಿನ್ನೆ ವೀಕೆಂಡ್ ಆದ್ದರಿಂದ ನೈಟ್ ರೈಡಿಂಗ್ ಮೋಜು ಮಸ್ತಿಯಲ್ಲಿದ್ದ ಈ ಮೂವರು ಸ್ನೇಹಿತರು ತಲೆಗೆ ಹೆಲ್ಮೆಟ್ ಧರಿಸದೇ ವೇಗವಾಗಿ ಒಂದೇ ಬೈಕ್​ನಲ್ಲಿ ತ್ರಿಬಲ್​ ರೈಡಿಂಗ್​ ತೆರಳುತ್ತಿದ್ದಾಗ, ರಸ್ತೆಯ ಡಿವೈಡರ್ ಹಾಗೂ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

      ಮೂವರು ಯುವಕರ ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿ ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.