ಇಲ್ಲಿಯವರೆಗೆ ಪತ್ತೆಯಾಗದ ರೆಡ್ಡಿ

0
45

ಬೆಂಗಳೂರು

      ಸುಮಾರು 20ಕೋಟಿ ಮೊತ್ತದ ಜಾಗೃತನಿರ್ದೇಶನಾಲಯದ(ಇಡಿ) ಡೀಲ್‍ನಲ್ಲಿ ಭಾಗಿಯಾಗಿರುವ ಗಣಿಧಣಿ ಜನಾರ್ದನ ರೆಡ್ಡಿ ಬಂಧನಕ್ಕಾಗಿ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸ್ ತಂಡಗಳು ತೀವ್ರ ಶೋಧ ನಡೆಸಿವೆಯಾದರೂ ಇಲ್ಲಿಯವರೆಗೆ ರೆಡ್ಡಿ ಪತ್ತೆಯಾಗಿಲ್ಲ.

       ಜನಾರ್ದನ ರೆಡ್ಡಿ ಬಂಧನಕ್ಕೆ ರಚಿಸಿರುವ ಮೂವರು ಎಸಿಪಿಗಳ ನೇತೃತ್ವದ ತಂಡಗಳು ಕಾರ್ಯಾಚರಣೆ ನಡೆಸಿದ್ದು ಇಲ್ಲಿಯವರೆಗೆ ಗಣಿಧಣಿಯ ಸುಳಿವು ಪತ್ತೆಯಾಗಿಲ್ಲ. ರೆಡ್ಡಿ ಪೋನ್ ಬಳಸದೇ ರಹಸ್ಯ ತಾಣದಲ್ಲಿ ಅಡಗಿದ್ದು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.

       ಸಿಸಿಬಿಯ ಎಸಿಪಿ ಸುಬ್ರಹ್ಮಣ್ಯ ನೇತೃತ್ವದ ತಂಡ ಹೈದರಾಬಾದ್‍ನಲ್ಲಿ, ಮಂಜುನಾಥ ಚೌಧರಿ ನೇತೃತ್ವದಲ್ಲಿ ಒಂದು ತಂಡ ಬಳ್ಳಾರಿಯಲ್ಲಿ, ಎಸಿಪಿ ವೆಂಕಟೇಶ ಪ್ರಸನ್ನ ನೇತೃತ್ವದ ತಂಡ ಬೆಂಗಳೂರಿನಲ್ಲಿ ನಿನ್ನೆ ತಡರಾತ್ರಿಯಂದ ಶೋಧ ನಡೆಸಿವೆಯಾದರೂ ಇಲ್ಲಿಯವರೆಗೆ ರೆಡ್ಡಿ ಪತ್ತೆಹಚ್ಚುವುದು ಸಾಧ್ಯವಾಗಿಲ್ಲ.

      ಜನಾರ್ದನ ರೆಡ್ಡಿ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಟವರ್ ಲೋಕೇಷನ್ ಪತ್ತೆ ಹಚ್ಚಲು ಪೊಲೀಸರಿಗೆ ಕಷ್ಟವಾಗಿದೆ. ಮತ್ತೊಂದೆಡೆ ರೆಡ್ಡಿ ಕುಟುಂಬಸ್ಥರು ಹಾಗೂ ಸ್ನೇಹಿತರು ಸೇರಿದಂತೆ 15 ಮನೆ ಮೇಲೆ ಕೂಡ ಕಣ್ಣಿಟ್ಟಿದ್ದಾರೆ. ರೆಡ್ಡಿ ಹೈದಾರಬಾದ್, ಚೆನೈ , ಆಂಧ್ರದಲ್ಲಿ ಇರಬಹುದೆಂಬ ಶಂಕೆ ಮೇರೆಗೆ ಶೋಧ ನಡೆಸಿದ್ದಾರೆ.

     ಮತ್ತೊಂದೆಡೆ ಇಂದು ದೀಪಾವಳಿ ರಜೆ ಹಿನ್ನೆಲೆ ನ್ಯಾಯಾಲಯವೂ ರಜೆ ಇರುತ್ತದೆ. ರೆಡ್ಡಿಗೆ ನೀರಿಕ್ಷಣಾ ಜಾಮೀನು ಸಿಗುವಂತಹ ಯಾವುದೇ ಲಕ್ಷಣ ಇಲ್ಲ. ಹೀಗಾಗಿ ಅವರನ್ನು ಇವತ್ತೇ ಖೆಡ್ಡಾಕ್ಕೆ ಕೆಡವಲೇಬೇಕೆಂಬ ನಿರ್ಧಾರದಲ್ಲಿ ಸಿಸಿಬಿ ತಂಡಗಳು ಕಾರ್ಯಾಚರಣೆಗಿಳಿದಿವೆ.

ಜಾಮೀನಿಗೆ ಅರ್ಜಿ:

     ಇನ್ನು ಪ್ರಕರಣ ಸಂಬಂಧ ಶುಕ್ರವಾರ ಜಾಮೀನಿಗಾಗಿ ಜನಾರ್ದನ ರೆಡ್ಡಿ ಅರ್ಜಿ ಸಲ್ಲಿಸಲಿದ್ದಾರೆ ಸಿಸಿಬಿಯಿಂದ ಬಂಧನ ಸಾಧ್ಯತೆ ಹೆಚ್ಚಾದ ಹಿನ್ನೆಲೆ ನಿರೀಕ್ಷಣಾ ಜಾಮೀನಿಗೆ ನ್ಯಾಯಾಲಯದ ಮೊರೆ ಹೋಗುವುದಕ್ಕೆ ರೆಡ್ಡಿ ನಿರ್ಧಾರ ಮಾಡಿದ್ದಾರೆ.ಜನಾರ್ದನ್ ರೆಡ್ಡಿ ತೆರೆ ಮರೆಯಲ್ಲಿದ್ದುಕೊಂಡು ಹಿರಿಯ ವಕೀಲರ ಮೂಲಕ ಚರ್ಚೆ ನಡೆಸಿದ್ದು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ.

       ಈ ನಡುವೆ ನಿನ್ನೆ ಷರತ್ತು ಬದ್ಧ ಜಾಮೀನು ಪಡೆದಿರುವ ರೆಡ್ಡಿ ಪರಮಾಪ್ತ ಅಲೀಖಾನ್‍ನ ಜಾಮೀನು ತೆರವುಗೊಳಿಸಲು ಸಿಸಿಬಿ ಅಧಿಕಾರಿಗಳು ಮುಂದಾಗಿದ್ದು ಆತನ ಪತ್ತೆಗೆ ಶೋಧ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

      ಈ ನಡುವೆ ಆ್ಯಂಬಿಡೆಂಟ್ ಕಂಪನಿಯ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಮಾಲೀಕ ಸೈಯದ್ ಅಹಮದ್ ಫರೀದ್ ಸಿಸಿಬಿ ಅಧಿಕಾರಿಗಳ ಮುಂದೆ ಜನಾರ್ದನ ರೆಡ್ಡಿ ಡೀಲ್ ಪ್ರಕರಣದ ಕುರಿತು ಸ್ಫೋಟಕ ಸತ್ಯಗಳನ್ನು ಬಾಯ್ಬಿಟ್ಟಿದ್ದಾನೆ.

    ನಗರದಲ್ಲಿರುವ ರೆಡ್ಡಿ ಆಪ್ತ ಅಲಿಖಾನ್ ಮನೆಯಲ್ಲಿ ಜೀವಂತ ಗುಂಡುಗಳು ಪತ್ತೆಯಾಗಿದ್ದು, ಈ ಬಗ್ಗೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆದರೆ 5 ಸಜೀವ ಗುಂಡುಗಳ ಬಗ್ಗೆ ಮನೆಯವರು ದಾಖಲೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಚಿನ್ನಕ್ಕಾಗಿ ಶೋಧ:

        57ಕೆಜಿ ಚಿನ್ನದ ಗಟ್ಟಿಗಾಗಿ ರೆಡ್ಡಿ ಮನೆಯ ಗೋಡೆ, ಬೀರು, ಕಪಾಟುಗಳ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ವೇಳೆ ಮತ್ತೆ ಹಲವು ಮಹತ್ವದ ದಾಖಲೆಗಳು ಸಿಕ್ಕಿವೆ ಎನ್ನಲಾಗಿದೆ. ಇಬ್ಬರು ಮಹಿಳಾ ಪೇದೆಗಳೂ ರೆಡ್ಡಿ ಮನೆಗೆ ಆಗಮಿಸಿ ದಾಳಿಯಲಿ ಪಾಲ್ಗೊಂಡರು.

       ಬಳ್ಳಾರಿಯ ಅವಂಬಾವಿ ಪ್ರದೇಶದಲ್ಲಿರುವ ರೆಡ್ಡಿ ಮನೆಯ ಮಹಡಿ ಮೇಲೆ ತೆರಳಿ ಪ್ರಾಂಗಣ, ಹೊರಾಂಗಣ ಸೇರಿದಂತೆ ಇತರೆ ದೃಶ್ಯಗಳನ್ನು ಮೊಬೈಲ್‍ನಲ್ಲಿ ಸಿಸಿಬಿ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ರೆಡ್ಡಿ ಮನೆಯೊಳಗೆ ಶಾಸಕ ಬಿ.ಶ್ರೀರಾಮುಲು ಹಾಜರಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ.

ಅತ್ತೆ ರಂಪಾಟ:

       ಜನಾರ್ದನ ರೆಡ್ಡಿ ಮನೆ ಮೇಲೆ ದಾಳಿ ಮಾಡಿದ ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸುವ ವೇಳೆ ರೆಡ್ಡಿ ಅವರ ಅತ್ತೆ ನಾಗಲಕ್ಷ್ಮಮ್ಮ ರಂಪಾಟ ನಡೆಸಿದ್ದಾರೆಂದು ಗೊತ್ತಾಗಿದೆ. ಬರೀ ಹಬ್ಬ, ಹರಿದಿನ, ಮದುವೆ ಸಮಾರಂಭದ ವೇಳೆಯಲ್ಲೇ ನಮ್ಮವರ ಮನೆ ಮೇಲೆ ದಾಳಿ ಮಾಡುತ್ತೀರಿ ಎಂದು ಸಿಸಿಬಿ ಅಧಿಕಾರಿಗಳಿಗೆ ಘೇರಾವ್ ಹಾಕಿದರು ಎಂದು ಮೂಲಗಳಿಂದ ತಿಳಿದು ಬಂದಿದೆ.

       ಶೋಧದ ವೇಳೆ ಸಿಸಿಬಿಗೆ ಸಿಕ್ಕಿರುವ ಪತ್ರಗಳ ಆಧಾರದ ಮೇಲೆ 57 ಕೆಜಿ ಚಿನ್ನದ ಗಟ್ಟಿ ಎಲ್ಲಿದೆ ಎಂಬ ಮಾಹಿತಿಯ ಸುಳಿವು ನೀಡಿದೆ ಎಂದು ಹೇಳಲಾಗುತ್ತಿದೆ. ಬಂಧನ ಭೀತಿಗೊಳಗಾಗಿದ್ದ ರೆಡ್ಡಿ ಆಪ್ತ ಸಹಾಯಕ ಅಲಿಖಾನ್ ಬುಧವಾರ ಮಧ್ಯಂತರ ಜಾಮೀನು ಪಡೆದಿದ್ದರೂ ಕೂಡಾ ನಾಪತ್ತೆಯಾಗಿದ್ದಾನೆ

ದುಬೈನಲ್ಲೂ ಸಾಮ್ರಾಜ್ಯ:

       ಹೂಡಿಕೆದಾರರಿಗೆ 600 ಕೋಟಿ ರೂಪಾಯಿ ವಂಚಿಸಿರುವ ಫರೀದ್ ಬೆಂಗಳೂರಿನಲ್ಲಿ ಮಾತ್ರವಲ್ಲ ದುಬೈನಲ್ಲೂ ಕೆಲವು ತಿಂಗಳ ಹಿಂದೆ ಕಂಪನಿ ಸ್ಥಾಪಿಸುವ ಮೂಲಕ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿರುವ ಬಗ್ಗೆ ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.

      ಹೂಡಿಕೆದಾರರಿಗೆ 600 ಕೋಟಿ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಭಾಗಿಯಾಗಿ ಜಾರಿ ನಿರ್ದೇಶನಾಲಯ ತನಿಖೆಗೆ ಗುರಿಯಾಗಿರುವ ಬೆಂಗಳೂರಿನ ಆ?ಯಂಬಿಡೆಂಟ್ ಇನ್ವೆಸ್ಟ್ ಮೆಂಟ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಗೆ, ಇ.ಡಿ. ತನಿಖೆಯಿಂದ ಪಾರಾಗಲು ನೆರವು ನೀಡುವುದಾಗಿ ಜನಾರ್ದನ ರೆಡ್ಡಿ 20 ಕೋಟಿ ರೂಪಾಯಿ ಡೀಲ್ ಕುದುರಿಸಿದ್ದಾರೆ ಎನ್ನಲಾಗಿತ್ತು. ಈ ಮೆಗಾ ಡೀಲ್ ಸಿಸಿಬಿ ತನಿಖೆಯಲ್ಲಿ ಬಹಿರಂಗವಾಗಿತ್ತು.

ಆಲೋಕ್ ಗರಂ

      ವಂಚನೆ ಪ್ರಕರಣದ ಸಂಬಂಧ ಆ್ಯಂಬಿಡೆಂಟ್ ಕಂಪೆನಿಯ ಮಾಲೀಕ ಫರೀದ್ ಸ್ಥಳ ಮಹಜರಿನ ವಿಡಿಯೊ ಸೋರಿಕೆಯಾಗಿರುವುದಕ್ಕೆ ಸಿಸಿಬಿಯ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್ ಅವರು ತನಿಖಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

      ಆ್ಯಂಬಿಡೆಂಟ್ ಕಂಪನಿ ಮಾಲೀಕ ಫರೀದ್‍ನನ್ನು ತಾಜ್ ವೆಸ್ಟೆಂಡ್ ಹೋಟೆಲ್‍ಗೆ ಕರೆದೊಯ್ದು ಸ್ಥಳ ಮಹಜರು ಮಾಡಿ ವಿಚಾರಣೆ ನಡೆಸಿರುವ ಸಂಪೂರ್ಣ ವಿಡಿಯೋವನ್ನು ಸಾಕ್ಷ್ಯ ರೂಪದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವ ಮೊದಲೇ ವಿಡಿಯೋ ಸೋರಿಕೆ ಆಗಿರುವುದಕ್ಕೆ ಅಲೋಕ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

     ಇದರ ಬೆನ್ನಲ್ಲೆ, ಅಲೋಕ್ ಕುಮಾರ್ ಅವರು ಗುರುವಾರ ಸಿಸಿಬಿ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿ ವಿಡಿಯೋ ಸೋರಿಕೆಯಾಗಿರುವುದಕ್ಕೇ ಆಕ್ರೋಶಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ ವಿಚಾರಣೆಯ ವಿಡಿಯೋ ಸೋರಿಕೆ ಮಾಡಲು ಯಾರು ಹೇಳಿದ್ದು? ಪಂಚನಾಮೆಗೆ ಯಾರೆಲ್ಲಾ ತೆರಳಿದ್ದು? ಯಾರು ಅದರ ವಿಡಿಯೋ ಮಾಡಿದ್ದು ವಿಡಿಯೋ ಮಾಡಿಕೊಂಡು ನ್ಯಾಯಾಲಯಕ್ಕೆ ಕೊಡಬೇಕಿತ್ತಲ್ವಾ? ಅಷ್ಟು ಬೇಗ ಏಕೆ ಸೋರಿಕೆ ಮಾಡಲಾಯಿತು ಹಿರಿಯ ಅಧಿಕಾರಿಗಳಿಗೆ ಏನು ಉತ್ತರ ಕೊಡಲಿ ಎಂದು ಸಭೆಯಲ್ಲಿ ಏರುಧ್ವನಿಯಲ್ಲಿ ಪ್ರಶ್ನಿಸಿದರು ಎನ್ನಲಾಗಿದೆ.

       ಪ್ರಕರಣದ ತನಿಖಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಅಲೋಕ್ ಕುಮಾರ್, ಮುಂದಿನ ನಡೆ ಬಗ್ಗೆಯೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಪ್ರಕರಣದ ಗಂಭೀರತೆ ತಿಳಿದಿದ್ರೂ ವಿಡಿಯೊ ಸೋರಿಕೆ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ ಎಂದೂ ತಿಳಿದುಬಂದಿದೆ.

        ಪ್ರಕರಣದ ತನಿಖೆ ನಡೆಯುತ್ತಿದ್ದರೂ ಅಷ್ಟು ಬೇಗ ಪಂಚನಾಮೆಯ ವಿಡಿಯೋ ಸೋರಿಕೆಯಾಗಲು ಕಾರಣವೇನು ನಿಮಗೆ ಅನುಮತಿ ಕೊಟ್ಟವರು ಯಾರು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here