ತುಮಕೂರು :
ಕೊರೊನಾ ತಡೆಗಟ್ಟಲು ಮಾಸ್ಕ್ ಹಾಕಿ, ಅಂತರ ಕಾಪಾಡಿ, ಕೈತೊಳೆಯಿರಿ… ಇದು ಸರ್ಕಾರದ ಉಪದೇಶ. ಇಷ್ಟು ಘೋಷಣೆ ಮಾಡಿದರೆ ಸಾಕೆ? ಅದರ ಅನುಷ್ಠಾನವೂ ಮುಖ್ಯ ಅಲ್ಲವೆ? ಸಾರ್ವಜನಿಕವಾಗಿ ತರಹೆವಾರಿ ಮಾಸ್ಕ್‍ಗಳು ಲಭ್ಯ ಇವೆ. ಗುಣಮಟ್ಟದ ಮಾಸ್ಕ್ ಯಾವುದು? ಎಂತಹ ಮಾಸ್ಕ್‍ಗಳನ್ನು ಧರಿಸಬೇಕು? ಎಂಬ ಎಚ್ಚರಿಕೆಯ ಸಂದೇಶಗಳಿಲ್ಲ. ಸರ್ಕಾರವೆ ನಿಗದಿಪಡಿಸಿ ಮಾಸ್ಕ್ ತಯಾರಿಸಿ ಹಂಚುವ ಪ್ರಕ್ರಿಯೆಗಳೂ ನಡೆದಿಲ್ಲ. ಕೋವಿಡ್ ವಿಪತ್ತು ನಿರ್ವಹಣಾ ನಿಧಿಯನ್ನು ಇಂತಹ ಬಳಕೆಗಳಿಗೆ ಉಪಯೋಗ ಮಾಡಿ ಗುಣಮಟ್ಟದ ಮಾಸ್ಕ್‍ಗಳನ್ನು ಸರ್ಕಾರವೇ ವಿತರಿಸಬಹುದಿತ್ತು.
ದುಬಾರಿಯಾಗುತ್ತಿರುವ ಉಪಕರಣಗಳು :
ಕೊರೊನಾ ಸೋಂಕಿತರಿಗಾಗಿ ಕೆಲವು ವೈದ್ಯಕೀಯ ಉಪಕರಣಗಳಿವೆ. ಔಷಧಿ, ಮಾತ್ರೆಗಳಿವೆ. ಸೋಂಕು ಪ್ರಕರಣಗಳು ಹೆಚ್ಚಿದಂತೆ ವೈದ್ಯಕೀಯ ಉಪಕರಣಗಳ ಬೆಲೆಯೂ ಅಧಿಕವಾಗುತ್ತಿದೆ. ಕಡಿಮೆ ದರದಲ್ಲಿ ಕಳೆದ 2 ತಿಂಗಳ ಹಿಂದೆ ಸಿಗುತ್ತಿದ್ದ ಉಪಕರಣಗಳು ಇಂದು ಮೂರು ಪಟ್ಟು ಹೆಚ್ಚಳವಾಗಿವೆ. ಬೇಡಿಕೆಗೆ ತಕ್ಕಂತೆ ಪೂರೈಕೆಯೂ ಇರಬೇಕು. ಇದ್ದರೂ ಕೊರತೆಯ ಅಭಾವ ಸೃಷ್ಟಿಸುವ ವ್ಯವಸ್ಥಿತ ವ್ಯಾಪಾರಿ ಮನೋಭಾವ ನಮ್ಮ ಒಟ್ಟಾರೆ ವ್ಯವಸ್ಥೆಯಲ್ಲಿಯೇ ಇದ್ದು, ಇದಕ್ಕೆ ಕಡಿವಾಣ ಹಾಕುವ ಇಚ್ಛಾಶಕ್ತಿ ಇರಬೇಕಷ್ಟೆ.
ಬಹಳಷ್ಟು ಮಂದಿ ಹೋಂ ಕ್ವಾರಂಟೈನ್‍ನಲ್ಲಿ ಇದ್ದಾರೆ. ಆಮ್ಲಜನಕ, ರೆಮ್‍ಡಿಸಿವಿರ್, ಚಿಕಿತ್ಸಾ ವ್ಯವಸ್ಥೆ ಅಗತ್ಯವಿಲ್ಲದ ಪಾಸಿಟಿವ್ ಬಂದಿರುವವರು ಮನೆಯಲ್ಲಿಯೇ ಪ್ರತ್ಯೇಕವಾಗಿದ್ದು, ರೋಗ ಗುಣಪಡಿಸಿಕೊಳ್ಳುತ್ತಿದ್ದಾರೆ. ಇಂತಹವರು ಆಮ್ಲಜನಕ ಪ್ರಮಾಣ ಪರಿಶೀಲಿಸಿಕೊಳ್ಳಲು, ಉಸಿರಾಟದ ಸಮಸ್ಯೆ ಎದುರಾದರೆ ಆಕ್ಸಿಜನ್ ಕಾನ್ಸನ್‍ಟ್ರೇಟರ್ ಖರೀದಿ ಮಾಡುತ್ತಾರೆ. ಆಮ್ಲಜನಕ ಪ್ರಮಾಣ ಪರೀಕ್ಷಿಸುವ ಪಲ್ಸ್ ಆಕ್ಸಿಮೀಟರ್ ಬೆಲೆ ಎರಡು ತಿಂಗಳ ಸಮಯದಲ್ಲಿ ಕೇವಲ 500 ರೂ.ಗಳಷ್ಟಿತ್ತು. ಕೆಲವು ಅಂಗಡಿಗಳಲ್ಲಿ ಹೆಚ್ಚು ಸ್ಟಾಕ್ ಇದ್ದ ಕಾರಣ 400 ರೂ.ಗಳಿಗೆಲ್ಲಾ ಕೇಳಿದವರಿಗೆ ಕೊಡುತ್ತಿದ್ದರು. ಈಗ ಇದರ ದರ 2000 ರೂ. ದಾಟಿದೆ. ಕೆಲವು ಕಡೆ 5 ರಿಂದ 10 ಸಾವಿರ ರೂ.ಗಳವರೆಗೂ ಮಾರಾಟವಾಗಿರುವ ಬಗ್ಗೆ ಕೇಳಿಬರುತ್ತಿದೆ.
ಆಕ್ಸಿಜನ್ ಕಾನ್ಸನ್‍ಟ್ರೇಟರ್ ಬೆಲೆ 40 ರಿಂದ 50 ಸಾವಿರ ರೂ.ಗಳಷ್ಟಿತ್ತು. ಇದೀಗ 70 ರಿಂದ 80 ಸಾವಿರ ರೂ.ಗಳಿಗೆ ಮಾರಾಟವಾಗುತ್ತಿದೆ. ನಿಗದಿತ ದರಕ್ಕೆ ಕೊಳ್ಳಲು ಹೋದರೆ ಸ್ಟಾಕ್ ಇಲ್ಲ ಎಂಬ ಉತ್ತರಗಳು ಎದುರಾಗುತ್ತವೆ. ಕೊರೊನಾ ಪಾಸಿಟಿವ್ ಬಂದವರಿಗಾಗಿಯೇ ಕೆಲವು ಮೆಡಿಸಿನ್‍ಗಳ ಅಗತ್ಯತೆ ಇದೆ. ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಇಂತಹ ಔಷಧಿಗಳ ಮೊರೆ ಹೋಗುವವರು ಹೆಚ್ಚಾಗಿದ್ದಾರೆ. ಕೆಮ್ಮು, ನೆಗಡಿ, ಜ್ವರ, ಮೈಕೈ ನೋವುಗಳಂತಹ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಆಸ್ಪತ್ರೆಗಳಿಗೆ ತೆರಳಿ ಪರೀಕ್ಷಿಸಿಕೊಳ್ಳಿ ಎಂದು ಎಷ್ಟೇ ಹೇಳಿದರೂ ಕೆಲವರು ಆಸ್ಪತ್ರೆಗಳತ್ತ ಹೋಗುತ್ತಿಲ್ಲ. ಅದಕ್ಕೆ ಹಲವು ಕಾರಣಗಳಿವೆ. ತಡವಾಗಿ ವರದಿ ಬರುವುದು, ಕೆಮ್ಮು ನೆಗಡಿಗೆಲ್ಲಾ ಕೋವಿಡ್ ತಪಾಸಣೆ ಮಾಡಿಸಿದರೆ ಪಾಸಿಟಿವ್ ಬರುತ್ತದೆ ಎಂದು ಹೆದರುವುದು ಇತ್ಯಾದಿಗಳು ಜನರನ್ನು ತಡೆಯುತ್ತಿವೆ.
ಇಂತಹವರೆಲ್ಲ ಔಷಧಿ ಮತ್ತು ಮಾತ್ರೆಗಳ ಮೊರೆ ಹೋಗುತ್ತಿದ್ದಾರೆ. ಪ್ಯಾರಾಸಿಟಮಲ್, ಡೋಲೋ 650, ಸಿಟ್ರಿಜನ್ ಸೇರಿದಂತೆ ರೋಗ ನಿರೋಧಕ ಮಾತ್ರೆಗಳ ಖರೀದಿ ದಿನೆ ದಿನೆ ಹೆಚ್ಚಾಗುತ್ತಿದ್ದು, ಬೆಲೆಯೂ ದುಬಾರಿಯಾಗುತ್ತಿದೆ.
ವೈದ್ಯರ ಸಲಹಾ ಚೀಟಿ ಇಲ್ಲದೆ ಕೊರೊನಾ ಸೋಂಕು ಮಾತ್ರೆಗಳನ್ನು ಕೊಡಬಾರದು ಎಂದು ಸರ್ಕಾರ ಹೇಳುತ್ತದೆ. ಕೆಲವು ಕಡೆ ಇದನ್ನು ಪಾಲಿಸಲಾಗುತ್ತಿದೆ. ಇನ್ನು ಕೆಲವು ಕಡೆ ಜ್ವರ, ಕೆಮ್ಮು, ನೆಗಡಿ ಇತ್ಯಾದಿಗಳಿಗೆ ಮಾತ್ರೆಗಳನ್ನು ನೀಡುತ್ತಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಒಂದು ಕಡೆ ಸರ್ಕಾರ ಮಾತ್ರೆಗಳನ್ನು ನೀಡಲು ನಿರ್ಬಂಧ ಹೇರುತ್ತದೆ. ಮತ್ತೊಂದು ಕಡೆ ಪರೀಕ್ಷಾ ವರದಿ ನೀಡಲು 10 ರಿಂದ 15 ದಿನಗಳ ಕಾಲಾವಕಾಶ ತೆಗೆದುಕೊಳ್ಳುತ್ತದೆ. ಈ ಅವಧಿಯಲ್ಲಿ ಮಾತ್ರೆಗಳಾದರೂ ಸಿಗುವಂತೆ ನೋಡಿಕೊಂಡರೆ ಸೋಂಕು ಉಲ್ಬಣಿಸುವ ಮುನ್ನವೆ ಜಾಗರೂಕತೆ ವಹಿಸಲು ಸಾಧ್ಯವಾಗುತ್ತಿತ್ತು.
ನಿನ್ನೆಯಷ್ಟೆ ಸರ್ಕಾರ ಹೊಸದೊಂದು ಸುತ್ತೋಲೆ ಹೊರಡಿಸಿದೆ. ಕೋವಿಡ್ ಟೆಸ್ಟ್ ಫಲಿತಾಂಶಗಳು ವಿಳಂಬವಾಗುತ್ತಿರುವ ಕಾರಣ ಗಂಟಲು ದ್ರವ ಸಂಗ್ರಹಿಸಿದ ಸೋಂಕಿನ ಲಕ್ಷಣವುಳ್ಳವರಿಗೆ ಫಲಿತಾಂಶ ಬರುವವರೆಗೂ ಕಾಯದೆ ಔಷಧಿಗಳನ್ನು ನೀಡಬೇಕು ಎಂದು ಹೇಳಿದೆ. ಈ ಸುತ್ತೋಲೆಯನ್ನು ಎರಡನೇ ಅಲೆಯ ಆರಂಭಿಕ ಹಂತದಲ್ಲೇ ಹೊರಡಿಸಿದ್ದರೆ ಸೋಂಕು ಪ್ರಮಾಣವನ್ನು ಒಂದಷ್ಟು ಕಡಿಮೆ ಮಾಡಬಹುದಿತ್ತೇನೋ?
ದುಬಾರಿ ಸಿಟಿಸ್ಕ್ಯಾನ್ :
ಜಿಲ್ಲಾಸ್ಪತ್ರೆಯಲ್ಲಿ ಇರುವ ಸಿಟಿಸ್ಕ್ಯಾನರ್ ಆಗಾಗ್ಗೆ ದುರಸ್ತಿಗೆ ಒಳಗಾಗುತ್ತದೆ. ಏಪ್ರಿಲ್ ಕೊನೆಯ ವಾರದಲ್ಲಿ ಕೈಕೊಟ್ಟಿದ್ದ ಈ ಯಂತ್ರವನ್ನು ದುರಸ್ತಿ ಮಾಡಲಾಗಿದೆ. ಕಾರ್ಯದ ಒತ್ತಡದಿಂದಾಗಿ ಹಾಳಾಗಿದ್ದು, ಅದನ್ನು ದುರಸ್ತಿ ಮಾಡಿದ್ದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಪ್ರಯೋಗಾಲಯಗಳ ಕಾರ್ಯಭಾರವೂ ಹೆಚ್ಚುತ್ತಿದೆ. ಯಾವ ಸಂದರ್ಭದಲ್ಲಿ ಯಾವ ಯಂತ್ರಗಳು ಕೈಕೊಡುತ್ತವೋ ಎಂಬ ಆತಂಕವೂ ಇದೆ.
ಜಿಲ್ಲಾಸ್ಪತ್ರೆ ಆವರಣದಲ್ಲಿ ಕ್ರಸ್ನ ಡಯಾಗ್ನೋಸ್ಟಿಕ್ ಸೆಂಟರ್ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿಯೂ ಸಹ ಸಿಟಿ ಸ್ಕ್ಯಾನಿಂಗ್ ನಡೆಸಲಾಗುತ್ತಿದೆ. ಖಾಸಗಿಯಲ್ಲಿ 4 ರಿಂದ 5 ಸಾವಿರ ರೂ.ಗಳವರೆಗೆ ದರವಿದ್ದು, ಇಲ್ಲಿ ಉಚಿತವಾಗಿ ನೀಡುವ ಬಗ್ಗೆ ಮಾಹಿತಿಗಳಿವೆ. ಆರೋಗ್ಯ ಸಮಸ್ಯೆಗಳು ತೀವ್ರವಾಗುತ್ತಿರುವ ಈ ದಿನಗಳಲ್ಲಿ ಸಾರ್ವಜನಿಕರಿಗೆ, ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಅತ್ಯವಶ್ಯಕ ಪರಿಕರಗಳು, ಔಷಧಗಳು, ಚಿಕಿತ್ಸೆ ದೊರೆಯುವಂತಾಗಬೇಕು.
ಕಳೆದ 15 ದಿನಗಳ ಸಮಯದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ರಾಜಧಾನಿಯಲ್ಲಿ ಅಧಿಕಾರಿಗಳು ಮತ್ತು ತಜ್ಞರೊಂದಿಗೆ ಒಂದು ಮಹತ್ವದ ಸಭೆ ನಡೆಸಿದ್ದರು. ಅಲ್ಲಿ ಕೋವಿಡ್ ಆಪ್ ಬಳಕೆಯ ಬಗ್ಗೆ ಹೆಚ್ಚು ಚರ್ಚೆ ನಡೆದಿತ್ತು. ರಾಜ್ಯದಲ್ಲಿ ಸದ್ಯಕ್ಕೆ ಆಪ್ತಮಿತ್ರ ಮೊದಲಾದ ಆ್ಯಪ್‍ಗಳು ಬಳಕೆಯಲ್ಲಿವೆ. ಕೋವಿಡ್ ಅಂಕಿ-ಅಂಶ ನೀಡುವ ಡ್ಯಾಶ್ ಬೋರ್ಡ್ ಸಹ ಇದೆ. ಇಲ್ಲಿ ಸಮರ್ಪಕ ಮಾಹಿತಿ ದೊರೆಯುವಂತಾಗಬೇಕು. ಯಾವ ಆಸ್ಪತ್ರೆಯಲ್ಲಿ ಎಷ್ಟು ಹಾಸಿಗೆ ಖಾಲಿ ಇವೆ, ಕೋವಿಡ್ ಮತ್ತು ನಾನ್ ಕೋವಿಡ್ ರೋಗಿಗಳೆಷ್ಟು ಎಂಬುದು ತಿಳಿಯುವಂತಾಗಬೇಕು. ಕೋವಿಡ್ ಖಚಿತಪಟ್ಟ ಕೂಡಲೇ ವ್ಯಕ್ತಿಯು ದೂರವಾಣಿ ಕರೆ ಮಾಡಿದಾಗ ಆತ ಕೋವಿಡ್ ಆಸ್ಪತ್ರೆಗೆ ದಾಖಲಾಗಬೇಕೋ, ಕೇರ್ ಸೆಂಟರ್‍ಗೆ ಹೋಗಬೇಕೋ ಎಂಬ ಸಹಾಯ ದೊರೆಯಬೇಕು. ಇವೆಲ್ಲವನ್ನೂ ಒಳಗೊಂಡ ಕೇಂದ್ರೀಕೃತ ವ್ಯವಸ್ಥೆಯನ್ನು ತರಬೇಕು ಎಂದು ಹೇಳಿದ್ದರು. ಹೀಗೆ ಹಂತ ಹಂತವಾಗಿ ವೈದ್ಯಕೀಯ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಂಡಿದ್ದರೆ ಪರಿಸ್ಥಿತಿ ನಿಯಂತ್ರಣಕ್ಕೆ ತರಬಹುದಿತ್ತು. ಆದರೆ ಸರ್ಕಾರದ ಮಟ್ಟದಲ್ಲಿಯೇ ಬಹಳಷ್ಟು ನಿರ್ಲಕ್ಷ್ಯತೆಗಳು ಇವೆ. ಇನ್ನು ಇಲಾಖಾ ಮಟ್ಟದಲ್ಲಿ ಅನುಷ್ಠಾನವೇ ಒಂದು ದೊಡ್ಡ ಸವಾಲು ಮತ್ತು ಹೊರೆಯಾಗಿ ಪರಿಣಮಿಸಿದೆ.
ಸದ್ಯಕ್ಕೆ ತುಮಕೂರಿನಲ್ಲಿ ಆಮ್ಲಜನಕದ ಕೊರತೆ ಇಲ್ಲ. ರೆಮ್‍ಡಿಸಿವಿರ್ ಅಭಾವ ಎದುರಾಗಿದ್ದು, ಸದ್ಯಕ್ಕೆ ಅದರ ಕೊರತೆಯಂತೂ ಮುಂದುವರೆದಿದೆ. ನಾಗಾಲೋಟದಲ್ಲಿ ಓಡುತ್ತಿರುವ ಸೋಂಕು ಪ್ರಕರಣಗಳಿಗೆ ಅನುಗುಣವಾಗಿ ವೈದ್ಯಕೀಯ ಉಪಕರಣಗಳು, ಔಷಧ ಮಾತ್ರೆಗಳು ಇರುವಂತೆ ನೋಡಿಕೊಳ್ಳಬೇಕಿದೆ. ಈ ಬಗ್ಗೆ ಸ್ವಲ್ಪ ನಿಗಾ ತಪ್ಪಿದರೂ ಇಡೀ ಆರೋಗ್ಯ ವ್ಯವಸ್ಥೆ ಏರುಪೇರಾಗಲಿದೆ.
ಮಾಹಿತಿ ದೊರೆಯುವಂತಿರಬೇಕು :
ಕೋವಿಡ್ ಆಸ್ಪತ್ರೆಗಳು ಯಾವುವು? ಆ ಆಸ್ಪತ್ರೆಗಳಲ್ಲಿ ಎಷ್ಟು ಹಾಸಿಗೆಗಳನ್ನು ಸರ್ಕಾರ ಬಳಸಿಕೊಂಡಿದೆ. ಖಾಸಗಿಯಾಗಿ ಉಳಿದಿರುವುದು ಎಷ್ಟ? ಜಿಲ್ಲಾ ಆಸ್ಪತ್ರೆಯಿಂದ ಶಿಫಾರಸ್ಸು ಅಥವಾ ವರ್ಗಾವಣೆ ಮಾಡಲಾದ ಪ್ರಕರಣಗಳಲ್ಲಿ ಪಾವತಿಸಬೇಕಾದ ವೆಚ್ಚದ ವಿವರ ಇತ್ಯಾದಿಗಳೆಲ್ಲವೂ ಲಭ್ಯವಿರುವಂತಾಗಬೇಕು. ಯಾವುದೇ ಆಸ್ಪತ್ರೆಗೆ ಹೋದರೂ ಬೆಡ್ ಫುಲ್ ಎಂಬ ಬೋರ್ಡ್ ಕಂಡುಬರುತ್ತದೆ. ಆದರೆ ಆಂತರಿಕವಾಗಿ ಕೆಲವು ಬುಕಿಂಗ್ ವ್ಯವಹಾರಗಳು ನಡೆಯುತ್ತಿರುವ ಬಗ್ಗೆ ಸಾರ್ವಜನಿಕ ಆರೋಪಗಳಿವೆ. ಇವುಗಳಿಗೆ ಸ್ಪಷ್ಟನೆ ಮತ್ತು ಉತ್ತರ ನೀಡುವಂತಹ ಹೊಣೆಗಾರಿಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಡಳಿತಕ್ಕೆ ಇರಬೇಕು. ಕೋವಿಡ್ ಪಾಸಿಟಿವ್ ಬಂದಾಕ್ಷಣ ಯಾರನ್ನು ಎಲ್ಲಿ ಸಂಪರ್ಕಿಸಬೇಕು.? ಮುಂದಿನ ಪ್ರಕ್ರಿಯೆಗಳೇನು.? ಎಂಬೆಲ್ಲಾ ಮಾಹಿತಿಗಳು ಲಭ್ಯವಾದರೆ ಸಾರ್ವಜನಿಕರ ಗೊಂದಲಗಳಿಗೆ ತೆರೆ ಎಳೆಯಲು ಸಾಧ್ಯ.
ಸಿಟಿ ಸ್ಕ್ಯಾನ್‍ಗೆ ದರ ನಿಗದಿ :
ಖಾಸಗಿ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್‍ಗೆ ದುಬಾರಿ ದರ ಪಡೆಯುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಮತ್ತು ಮಾಧ್ಯಮಗಳಲ್ಲಿ ವರದಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸರ್ಕಾರ ಆದೇಶವೊಂದನ್ನು ಹೊರಡಿಸಿದೆ. ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನಿಂಗ್‍ಗೆ ಒಂದೂವರೆ ಸಾವಿರ ರೂ.ಗಳನ್ನು ಮಾತ್ರವೇ ಪಡೆಯಬೇಕು. ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಹಣ ಪಡೆದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ