ನಾಂದೇಡ್:
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಹಾರಾಷ್ಟ್ರದ ನಾಂದೇಡ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ವಸಂತ ಚವಾಣ್ ಅವರು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು ಎಂದು ಪಕ್ಷದ ಮೂಲಗಳು ತಿಳಿಸಿವೆ.69 ವರ್ಷದ ಚವಾಣ್ ಅವರು ಇಂದು ಬೆಳಗಿನ ಜಾವ 4 ಗಂಟೆಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ.ಕಳೆದೊಂದು ವಾರದಿಂದ ಮೂತ್ರಪಿಂಡದ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದ ಚವಾಣ್ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ.
2024 ರಲ್ಲಿ ಮರಾಠವಾಡ ಪ್ರದೇಶದ ನಾಂದೇಡ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಪ್ರಬಲ ನಾಯಕ ಮತ್ತು ಹಾಲಿ ಸಂಸದರಾಗಿದ್ದ ಪ್ರತಾಪ್ ಪಾಟೀಲ್ ಚಿಖ್ಲಿಕರ್ ಅವರನ್ನು ಸೋಲಿಸುವ ಮೂಲಕ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದರು.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ-ವಾದ್ರಾ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ವಸಂತ ಚವಾಣ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
“ಹಿರಿಯ ಕಾಂಗ್ರೆಸ್ ನಾಯಕ, ನಾಂದೇಡ್ ಲೋಕಸಭಾ ಸಂಸದ ವಸಂತರಾವ್ ಚವಾಣ್ ಅವರ ನಿಧನದ ಸುದ್ದಿ ಅತ್ಯಂತ ದುಃಖಕರವಾಗಿದೆ. ಅವರಿಗೆ ನನ್ನ ಹೃತ್ಪೂರ್ವಕ ಶ್ರದ್ಧಾಂಜಲಿ. ದುಃಖಿತ ಕುಟುಂಬಕ್ಕೆ ನನ್ನ ಸಂತಾಪ ಸೂಚಿಸುತ್ತೇನೆ. ಜನಪ್ರಿಯ ತಳಮಟ್ಟದ ನಾಯಕ, ಚವಾಣ್ ನಿಧನದಿಂದ ಕಾಂಗ್ರೆಸ್ ಗೆ ತುಂಬಲಾರದ ನಷ್ಟವಾಗಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.