ತುಮಕೂರು:
ಜಿಲ್ಲಾ ಮಡಿವಾಳ ಸಂಘದ ನೂತನ ಅಧ್ಯಕ್ಷರಾಗಿ ಲಕ್ಷ್ಮಣ್ ಅವಿರೋಧವಾಗಿ ಸೋಮವಾರ ಆಯ್ಕೆಯಾದರು.
ತುಮಕೂರು ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷರಾಗಿದ್ದ ಬಿ.ಕೆ.ತಿಮ್ಮಯ್ಯ ಅವರು ಅಕಾಲಿಕ ಮರಣ ಹೊಂದಿದ್ದ ಹಿನ್ನಲೆಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನವನ್ನು ತುಂಬಲು ಜಿಲ್ಲಾ ಮಡಿವಾಳ ಸಂಘದ ಕಚೇರಿ ಆವರಣದಲ್ಲಿ ಚಿತ್ರದುರ್ಗ ಮಹಾಸಂಸ್ಥಾನ ಮಠದ ಶ್ರೀ ಬಸವ ಮಾಚಿದೇವ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಮಡಿವಾಳ ಸಂಘದ ರಾಜ್ಯಾಧ್ಯಕ್ಷ ನಂಜಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಲಕ್ಷ್ಮಣ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಂಘದ ರಾಜ್ಯಾಧ್ಯಕ್ಷ ನಂಜಪ್ಪ ಅವರು ಪ್ರತಿ ತಾಲ್ಲೂಕಿನ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನು ಪ್ರತ್ಯೇಕವಾಗಿ ಗೌಪ್ಯವಾಗಿ ಕರೆದು ಮಾಹಿತಿ ಕಲೆ ಹಾಕುವ ಮುಖೇನ ಲಕ್ಷ್ಮಣ್ ಅವರೇ ಅಧ್ಯಕ್ಷರಾಗಲಿ ಎಂಬ ಒಮ್ಮತದ ಅಭಿಪ್ರಾಯ ಎಲ್ಲಾ ತಾಲ್ಲೂಕುಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳ ನಿಲುವಿಗೆ ರಾಜ್ಯಾಧ್ಯಕ್ಷರು ಲಕ್ಷ್ಮಣ್ ಅವರನ್ನು ಜಿಲ್ಲಾ ಮಡಿವಾಳ ಸಂಘದ ನೂತನ ಅಧ್ಯಕ್ಷರನ್ನಾಗಿ ಅವಿರೋಧ ಮಾಡಲಾಗಿದೆ ಎಂದು ಘೋಷಿಸಿದರು.
ಈ ಸಂದರ್ಭದಲ್ಲಿ ಸಾನಿಧ್ಯ ವಹಿಸಿದ್ದ ಶ್ರೀ ಬಸವ ಮಾಚಿದೇವ ಸ್ವಾಮೀಜಿಗಳು ಮಾತನಾಡಿ ನೂತನ ಅಧ್ಯಕ್ಷರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೂ ಭೇಟಿ ನೀಡಿ ಅಲ್ಲಿ ಸಮಾಜದ ಸಮಸ್ಯೆಗಳ ಬಗ್ಗೆ ಅರಿತು ಅವುಗಳನ್ನು ಬಗೆ ಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು, ಹಾಗೆಯೇ ಸಮಾಜದ ಸಂಘಟನೆಗೆ ಹೆಚ್ಚು ಒತ್ತು ನೀಡುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಮಡಿವಾಳ ಸಂಘದ ಅಧ್ಯಕ್ಷ ಸಿ.ನಂಜಪ್ಪ ಮಾತನಾಡಿ ಸಮಾಜದ ಒಳಿತಿಗಾಗಿ ಸಮಾಜವನ್ನು ಸಂಘಟಿಸುವುದರ ಜೊತೆಗೆ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಹೋರಾಟಕ್ಕೆ ಸಮಾಜದ ಜನರನ್ನು ಒಗ್ಗೂಡಿಸುವ ಕೆಲಸ ಮಾಡಬೇಕು ಎಂದ ಅವರು ಜಿಲ್ಲಾ ಸಂಘಕ್ಕೆ ರಾಜ್ಯ ಸಂಘ ಎಲ್ಲಾ ರೀತಿಯಿಂದಲೂ ಸಹಕರಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಮಡಿವಾಳ ಸಂಘದ ಪದಾಧಿಕಾರಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಸಲಹೆಗಳನ್ನು ನೀಡಿ ಸಂಘದ ಶ್ರೇಯಸ್ಸಿಗೆ ಶುಭಾರೈಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಡಿವಾಳ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಂಗಸ್ವಾಮಯ್ಯ , ರಾಜ್ಯ ಉಪಾಧ್ಯಕ್ಷ ರಾಜಣ್ಣ, ನಿರ್ದೇಶಕ ಚಿಕ್ಕಣ್ಣ, ಹುಲಿಯೂರು ದುರ್ಗದ ಸಮಾಜದ ಹಿರಿಯ ಮುಖಂಡ ಹುಲ್ಲೂರಯ್ಯ, ದೋಭಿಘಾಟ್ ಸಂಘದ ಪಿಳ್ಳಪ್ಪ, ತುಮಕೂರು ಜಿಲ್ಲಾ ಕುಲಕಸುಬುದಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಶಾಂತಕುಮಾರ್, ವಿಷ್ಣುವರ್ಧನ್, ವಿವಿಧ ತಾಲ್ಲೂಕುಗಳ ಅಧ್ಯಕ್ಷರು, ಕಾರ್ಯದರ್ಶಿಗಳಾದ ತಿಪಟೂರು ನಿಜಲಿಂಗಪ್ಪ, ಶಂಕರಪ್ಪ, ತುಮಕೂರು ಕೆಂಪನರಸಯ್ಯ, ಪಾವಗಡ ಈಶ್ವರಪ್ಪ, ಗುಬ್ಬಿ ನರಸಿಂಹಮೂರ್ತಿ, ಶಿರಾ ಈಶ್ವರ್, ಚಿ.ನಾ.ಹಳ್ಳಿ ನಟರಾಜ್, ಮಧುಗಿರಿ ಈಶ್ವರಯ್ಯ, ಕೊರಟಗೆರೆ ಕ್ಯಾತಪ್ಪ, ತುರುವೇಕೆರೆ ಲೋಕೇಶ್, ಕುಣಿಗಲ್ ರಾಜಣ್ಣ, ಶ್ರೀನಿವಾಸ್, ಗೋವಿಂದರಾಜು, ಜಿಲ್ಲಾ ಮಾಚಿದೇವ ಬ್ಯಾಂಕಿನ ನಿರ್ದೇಶಕ ಕೃಷ್ಣಮೂರ್ತಿ, ಯದುನಾಥ್, ಕೊರಟಗೆರೆ ಕಾಂತರಾಜು, ಪಾವಗಡ ಎಲ್‍ಐಸಿ ನರಸಿಂಹಮೂರ್ತಿ ಸೇರಿದಂತೆ ಮಡಿವಾಳ ವಿವಿಧ ಸಂಘಗಳ ಪದಾಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು.
