ಬೆಂಗಳೂರು
ವ್ಯಸನಮುಕ್ತ ಜೀವನ ದೇಶೀಯ ಆಹಾರ ಪದ್ಧತಿ ಹಾಗೂ ಸನ್ಮಾರ್ಗದ ನಡವಳಿಕೆಗಳು ಮನುಷ್ಯನ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಲಿದ್ದು ಸಮಾಜದ ಎಲ್ಲರೂ ಇದನ್ನು ಗಂಭಿರವಾಗಿ ಪರಿಗಣಿಸಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ಅವರು ತಿಳಿಸಿದ್ದಾರೆ
ರಾಜೀವ್ಗಾಂಧಿ ಆರೋಗ್ಯ ವಿವಿಯಲ್ಲಿ ಏರ್ಪಡಿಸಿದ್ದ ವಿಶ್ವ ಹೋಮಿಯೋಪತಿ ದಿನಾಚರಣೆ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಆಧುನಿಕ ಕಾಲದಲ್ಲಿ ಮನಸ್ಸು-ದೇಹಕ್ಕೆ ವಿಶ್ರಾಂತಿ ಇಲ್ಲದೆ ದುಡಿಯುವ ಮನಃಸ್ಥಿತಿ ಆರಂಭವಾಗಿರುವುದು ಸರಿಯಲ್ಲ ಎಂದರು.
ಧಾರ್ಮಿಕ ಆಚರಣೆಗಳು ಕಡೆಗಣಿಸಲ್ಪಡುತ್ತಿದ್ದು ಅರ್ಥ ಧರ್ಮವನ್ನು ಮೀರಬಾರದು, ಅರ್ಥಕ್ಕೆ ಮಿತಿ ಇರಬೇಕು ಆಸೆ ಈಡೇರಿಸಿಕೊಳ್ಳಲು ಧರ್ಮದ ಮಾರ್ಗ ಮೀರಿದರೆ ಕಾಯಿಲೆಗಳನ್ನು ಆಹ್ವಾನಿಸಿಕೊಂಡಂತೆ ಎಂದು ಹೇಳಿದರು.ನಮ್ಮ ಕಾಲ ಯಾವುದೇ ಇರಲಿ ಶರೀರವನ್ನು ಬಳಸಿಕೊಳ್ಳುವಲ್ಲಿ ಸಂಸ್ಕಾರವಿರಬೇಕು ಆಧುನಿಕ ಜೀವನಶೈಲಿ ಆರೋಗ್ಯ ಸಮಸ್ಯೆಗಳಿಗೆ ಮೂಲಕಾರಣವಾಗಿದೆ ಬದುಕಲು ಆರಿಸಿಕೊಳ್ಳುವ ಮಾರ್ಗಗಳು ಸರಿಯಾಗಿರಬೇಕು. ಇದಕ್ಕಾಗಿ ನಾವು ಕಲಿತ ವಿದ್ಯೆ ಹಾಗೂ ನಮ್ಮಲ್ಲಿರುವ ಬುದ್ಧಿಯನ್ನು ಸರಿಯಾಗಿ ಬಳಸಿಕೊಳ್ಳಬೇಕು. ಪಂಚಕ್ರಿಯೆಗಳನ್ನು ಹತೋಟಿಯಲ್ಲಿಟ್ಟುಕೊಂಡರೆ ಅನಾರೋಗ್ಯದ ಸಮಸ್ಯೆ ಮನುಷ್ಯನನ್ನು ಕಾಡಲು ಸಾಧ್ಯವೇ ಇಲ್ಲ ಎಂದರು.
ಯಾವುದೇ ವೈದ್ಯ ಪದ್ಧತಿ ಇರಲಿ, ಧಾರ್ಮಿಕ ಆಚರಣೆ ಇರಲಿ ನಂಬಿಕೆಯನ್ನಾಧರಿಸಿದೆ. ಧರ್ಮದ ಮೇಲಿನ ನಂಬಿಕೆ ಅನಾರೋಗ್ಯಕ್ಕೆ ಔಷಧಿಯಾಗಬಲ್ಲದು ಎಂದ ಅವರು, ಎಲ್ಲ ಧರ್ಮಗಳಲ್ಲಿ ವ್ಯಕ್ತಿಗಳು ವೈಯಕ್ತಿಕ ಶುದ್ಧತೆ ಕಾಯ್ದುಕೊಳ್ಳಬೇಕು. ಧರ್ಮದ ನಿಯಮಗಳ ಬಳಕೆಗೆ ದೇಹವನ್ನು ಸಾಧನವನ್ನಾಗಿ ಬಳಸಿಕೊಳ್ಳಬೇಕು ಅಂದಾಗ ಮಾತ್ರ ದೇಹದ ಎಲ್ಲ ನಡವಳಿಕೆಗಳು ಸರಿಯಾದ ದಿಕ್ಕಿನಲ್ಲಿ ಸಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಆರೋಗ್ಯವನ್ನು ಕಳೆದುಕೊಂಡವನು ಎಲ್ಲವನ್ನೂ ಕಳೆದುಕೊಂಡ ಹಾಗೆ, ಪ್ರತಿ ಔಷಧಿ ಸೇವನೆಯಿಂದ ಕಾಯಿಲೆಗಳು ತೀವ್ರತೆ ಪಡೆದುಕೊಳ್ಳುತ್ತದೆ. ಕಾಯಿಲೆಗಳ ಕುರಿತಂತೆ ಅಹಂಕಾರ, ಆಲಸ್ಯ, ತಿರಸ್ಕಾರ ಒಳ್ಳೆಯದಲ್ಲ ಎಂದ ಅವರು, ವ್ಯಸನಮುಕ್ತ ಜೀವನ ದೇಶೀಯ ಪದ್ಧತಿ ಆಹಾರ ಹಾಗೂ ಸನ್ಮಾರ್ಗದ ನಡವಳಿಕೆಗಳು ಮನುಷ್ಯನ ಉತ್ತಮ ಆರೋಗ್ಯಕ್ಕೆ ಸಹಕಾರಿ ಎಂದರು.
ಸಮಾಜ-ಕಾರ್ಯಕ್ಷೇತ್ರ-ಕುಟುಂಬದೊಂದಿಗೆ ನಮ್ಮ ಸಂಬಂಧ ಉತ್ತಮವಾಗಿರದಿದ್ದರೆ ರೋಗ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಈ ಮೂರೂ ಕ್ಷೇತ್ರಗಳೊಂದಿಗೆ ಹಿತಮಿತವಾದ ಅಂತರ ಹಾಗೂ ಸಂಬಂಧ ಕಾಯ್ದುಕೊಳ್ಳಬೇಕು. ಪ್ರಸ್ತುತ 86 ರಾಷ್ಟ್ರಗಳಲ್ಲಿ ಹೋಮಿಯೋಪತಿ ವೈದ್ಯ ಪದ್ಧತಿ ಅನುಸರಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








