ಸೋಲಾರ್ ಪಾರ್ಕ್: ರೈತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯ

ತುಮಕೂರು
    ಸೋಲಾರ್ ಪಾರ್ಕ್ ಸ್ಥಾಪಿಸುವ ಮುನ್ನ ನೀಡಿದ್ದ ಭರವಸೆಯಂತೆ ಸ್ಥಳೀಯ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗವಕಾಶವನ್ನು ನೀಡಬೇಕು. ಸೋಲಾರ್ ಪಾರ್ಕ್ ಯೋಜನೆಗೆ ಬಳಸಮುದ್ರ, ಕ್ಯಾತಗಾನಚೆರ್ಲು, ರಾಯಚೆರ್ಲು, ತಿರುಮಣಿ, ವಳ್ಳುರು ಗ್ರಾಮದ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಶಕ್ತಿ ಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಪಿ.ಸಾಂಬಸದಾಶಿವಾರೆಡ್ಡಿ ಒತ್ತಾಯಿಸಿದರು.
   ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಲಾರ್ ಪಾರ್ಕ್‍ಗೆ ಜಮೀನು ನೀಡಿರುವ ಪ್ರತಿಯೊಬ್ಬ ರೈತನ ಜಮೀನಿಗೆ ಇರುವ ಚೆಕ್‍ಬಂದಿಯನ್ನು ಗುರುತಿಸಿ ಜಮೀನಿನ ಸರ್ವೇ ನಂಬರ್ ಹಾಗೂ ರೈತನ ಹೆಸರನ್ನು ಒಳಗೊಂಡ ನಾಮಫಲಕವನ್ನು ಅಳವಡಿಸಬೇಕು. ಸರಿ ಸುಮಾರು 28 ವರ್ಷಗಳವರೆಗೆ ಬಾಡಿಗೆಗೆ ನೀಡಲಾಗಿದ್ದು, ಈ ಜಮೀನು ತಮ್ಮದೆ ಎಂದು ಗುರುತಿಸಲು ಆಗದ ಸ್ಥಿತಿ ಇಂದು ನಿರ್ಮಾಣವಾಗಿದೆ. ಹಾಗಾಗಿ ನಾಮಫಲಕಗಳನ್ನು ಅಳವಡಿಸುವುದು ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.
    ಸೋಲಾರ್ ಪಾರ್ಕ್ ಇರುವ ಹಳ್ಳಿಗಳಲ್ಲಿ ಮೂಲಭೂತ ಸೌಲಭ್ಯಗಳಾದ ಶುದ್ಧ ಕುಡಿಯುವ ನೀರು ಪೂರೈಕೆ, ಒಳಚರಂಡಿ ವ್ಯವಸ್ಥೆ ಕಲ್ಪಿಸುವುದು. ಶಿಥಿಲಗೊಂಡಿರುವ ಶಾಲೆಗಳನ್ನು ಅಭಿವದ್ಧಿ ಪಡಿಸಬೇಕು. ಸೋಲಾರ್ ಪಾರ್ಕ್ ಜಮೀನು ನೀಡಿರುವ ಗ್ರಾಮಗಳಿಗೆ ನಿರಂತರ ವಿದ್ಯುತ್ ಸರಬರಾಜು ವ್ಯವಸ್ಥೆ ಕಲ್ಪಿಸಬೇಕು. ಕರ್ನಾಟಕ ಪಬ್ಲಿಕ್ ಶಾಲೆ ಯೋಜನೆಯಡಿಯಲ್ಲಿ ತಿರುಮಣಿ ಗ್ರಾಮದಲ್ಲಿ ಮಂಜೂರಾಗಿರುವ ಇಂಗ್ಲೀಷ್ ಪಬ್ಲಿಕ್ ಶಾಲಾ ಸಾಮಥ್ರ್ಯವನ್ನು ಹೆಚ್ಚಿಸುವುದು ಹಾಗೂ ರಾಯಚೆರ್ಲು ಮತ್ತು ವಳ್ಳೂರು ಗ್ರಾಮಗಳಲ್ಲಿ ಇನ್ನೆರಡು ಇಂಗ್ಲಿಷ್ ಪಬ್ಲಿಕ್ ಶಾಲೆಗಳನ್ನು ತೆರೆಯಬೇಕು ಎಂದು ಒತ್ತಾಯಿಸಲಾಯಿತು.
    ತಿರುಮಣಿ ಗ್ರಾಮದಿಂದ ಹಾದುಹೋಗುವ ರಸ್ತೆಯನ್ನು ಅಚ್ಚಮ್ಮನಹಳ್ಳಿ, ರಾಯಚೆರ್ಲು, ಬಳಸಮುದ್ರ ಮಾರ್ಗವಾಗಿ ಒಂದಕ್ಕೊಂದು ಸಂಪರ್ಕ ಕಲ್ಪಿಸುವ ರೀತಿಯಲ್ಲಿ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು. ಸೋಲಾರ್ ಪಾರ್ಕ್ ಸ್ಥಾಪನೆಯಿಂದಾಗಿ ಅಕ್ಕಮ್ಮಗಾರಿ ಬೆಟ್ಟದಿಂದ ಹರಿದು ಬರುತ್ತಿದ್ದ ನೈಸರ್ಗಿಕ ನಾಲೆಯಲ್ಲಿ ನೀರು ಕಡಿಮೆಯಾಗಿದ್ದು, ಆ ನಾಲೆಯನ್ನು ಅಭಿವೃದ್ಧಿ ಪಡಿಸಬೇಕು.
     ಸೋಲಾರ್ ಪಾರ್ಕ್ ಇರುವ ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಗೆ ಯೋಜನೆ ರೂಪಿಸುವ ಸಲುವಾಗಿ ಉನ್ನತಾಧಿಕಾರದ ಸಮಿತಿಯನು ರಚಿಸಿದ್ದು, ಈ ಸಮಿತಿಯಲ್ಲಿ ರೈತರ ಪ್ರತಿನಿಧಿಯೊಬ್ಬರನ್ನು ಸೇರಿಸಿಕೊಳ್ಳಬೇಕು. ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ತುಂಗಭದ್ರಾ ಮೇಲ್ದಂಡೆ ಯೋಜನೆಗಳ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಸೋಲಾರ್ ಪಾರ್ಕ್‍ಗೆ ನೀಡಿರುವ ಜಮೀನುಗಳ ಮೇಲೆ ರೈತರು ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರ ಬ್ಯಾಂಕ್‍ಗಳಲ್ಲಿ ಪಡೆದಿರುವ ಸಾಲಗಳನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
    ಶಕ್ತಿ ಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸದಾಶಿವರೆಡ್ಡಿ ಮಾತನಾಡಿ, 12,855 ಎಕರೆ ಪ್ರದೇಶದಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಾಗಿದ್ದು, ಈ ಯೋಜನೆಯಿಂದ ರೈತರಿಗೆ ಬೇಕಾಗುವ ಅನುಕೂಲಗಳನ್ನು ದೊರಕಿಸಿಕೊಡುವ ಉದ್ದೇಶದಿಂದ ಶಕ್ತಿ ಸ್ಥಳ ರೈತ ಕ್ಷೇಮಾಭಿವೃದ್ಧಿ ಸಂಘವನ್ನು ಸ್ಥಾಪನೆ ಮಾಡಲಾಗಿದೆ. ಸೋಲಾರ್ ಪಾರ್ಕ್‍ಗೆ ಜಮೀನು ನೀಡಲಾದ ಐದು ಹಳ್ಳಿಗಳಲ್ಲಿ ಪ್ರಮುಖವಾಗಿ ಬೇಕಾಗಿರುವ ಶಿಕ್ಷಣ, ಉದ್ಯೋಗ, ಆರೋಗ್ಯ , ಕುಡಿಯುವ ನೀರು ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಹೋರಾಟಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಆರ್.ಎನ್.ಅಕ್ಕಲಪ್ಪ, ಉಪಾಧ್ಯಕ್ಷ ಶ್ರೀನಿವಾಸ್, ಸದಸ್ಯ ಗೋವಿಂದಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link