ತುಮಕೂರು :

ಪ್ರಜಾಪ್ರಗತಿ ದಿನಪತ್ರಿಕೆಯಲ್ಲಿ ಜೂ.26ರಂದು ಮಿಡಿಗೇಶಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿರುವ ನರೇಗಾ ಯೋಜನೆ ಅಕ್ರಮದ ಕುರಿತಂತೆ ಕಾಮಗಾರಿಗಳ ತನಿಖೆ ನಡೆಸಿ ವರದಿ ನೀಡಲು ಜಿಲ್ಲಾ ಪಂಚಾಯತ್ ಸಿಇಒ ಕೆ.ವಿದ್ಯಾಕುಮಾರಿ ಅವರು 6 ಜನರ ಅಧಿಕಾರಿಗಳ ತಂಡ ರಚಿಸಿ ತನಿಖಾ ವರದಿ ನೀಡುವಂತೆ ಆದೇಶಿಸಿರುವುದು ಸ್ವಾಗತಾರ್ಹ. ಆದರೆ ಈ ತನಿಖೆ ಮಿಡಿಗೇಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಮಾತ್ರ ಸೀಮಿತವಾಗದೇ ಇಡೀ ಜಿಲ್ಲೆಯಾದ್ಯಂತ ಕೈಗೊಂಡಿರುವ ನರೇಗಾ ಕಾಮಗಾರಿಗಳ ಬಗ್ಗೆ ಸಮಗ್ರವಾಗಿ ನಡೆಯಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿಬಂದಿದೆ.
ಈ ಕುರಿತು ಮಂಗಳವಾರ ನಡೆದ ದಿಶಾ ಸಮಿತಿ ಸಭೆಯಲ್ಲಿ ಜಿಲ್ಲೆಯ ಸಂಸದರು ಸಹ ಪೂರಕ ಧ್ವನಿ ಎತ್ತಿ, ಅಧಿಕಾರಿಗಳಿಗೆ ಚಾಟಿ ಬೀಸಿದ್ದು, ಇಡೀ ಯೋಜನೆಯಲ್ಲಾಗುತ್ತಿರುವ ಅಕ್ರಮಗಳ ಗಂಭೀರಲೋಪಕ್ಕೆ ಸಾಕ್ಷಿಎನಿಸಿದೆ.
ಜಿಲ್ಲೆಯಲ್ಲಿ 8072 ನರೇಗಾ ಸಾರ್ವಜನಿಕ ಕಾಮಗಾರಿಗಳು(ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ) ಹಾಗೂ ವೈಯಕ್ತಿಕವಾದ 30,839 ಕಾಮಗಾರಿಗಳು, ಗ್ರಾಮೀಣ ಮೂಲಕಸೌಕರ್ಯದ 10,300ಕ್ಕೂ ಅಧಿಕ ಕಾಮಗಾರಿಗಳು ಪ್ರಸಕ್ತ ಸಾಲಿನಲ್ಲಿ ನಡೆಯುತ್ತಿದ್ದು, ಒಟ್ಟಾರೆ 49,216 ಕಾಮಗಾರಿಗಳನ್ನು ಸಮಗ್ರವಾಗಿ ಪರಿಶೀಲನೆಗೊಳಪಡಿಸುವ ಅಗತ್ಯವಿದೆ ಎಂದು ಸಾಮಾಜಿಕ ಹೋರಾಟಗಾರರು ಆಗ್ರಹಿಸಿದ್ದಾರೆ.
ಗುತ್ತಿಗೆದಾರರ ಕೈಚಳಕ, ಅಧಿಕಾರಿಗಳು ಶಾಮೀಲು: ನರೇಗಾ ಗುತ್ತಿಗೆದಾರರ ಕೈಚಳಕದಿಂದ ಇಂತಹ ಲೋಪಗಳು ಮರುಕಳಿಸುತ್ತಿದ್ದು, ನಿರುದ್ಯೋಗಿಗಳಿಗೆ ಉದ್ಯೋಗ ನೀಡಿ ಕೂಲಿ ಒದಗಿಸಬೇಕೆಂಬ ಆಶಯವೇ ಮೂಲೆಗುಂಪಾಗುತ್ತಿದೆ. ಪಂಚಾಯತ್ ರಾಜ್ ವ್ಯವಸ್ಥೆಯ ಅಧಿಕಾರಿಗಳು ಕೆಲ ಗುತ್ತಿಗೆದಾರರುಗಳೊಂದಿಗೆ ಶಾಮೀಲಾಗಿರುವುದರಿಂದಲೇ ಅಕ್ರಮಗಳು ಜರುಗಲು ಕಾರಣವಾಗುತ್ತಿದೆ ಎಂಬ ಆರೋಪ ಪ್ರಬಲವಾಗಿದ್ದು, ತನಿಖಾ ತಂಡದ ವರದಿ ಬರೀ ಕಾಮಗಾರಿ ಪರಿಶೀಲನೆಗೆ ಸೀಮಿತವಾಗಬಾರದು. ತಪ್ಪಿತಸ್ಥರ ಮೇಲೆಶಿಸ್ತು ಕ್ರಮದ ಶಿಫಾರಸ್ಸಿನೊಂದಿಗೆ ತಕ್ಷಣ ಕ್ರಮವಾದಲ್ಲಿ ಮಾತ್ರ ನರೇಗಾ ಅಕ್ರಮಗಳು ತಾರ್ಕಿಕ ಅಂತ್ಯ ಕಾಣಲು ಸಾಧ್ಯವಾಗುತ್ತದೆ.
ಗಾಮ ಅಭ್ಯುದಯದ ನಿಜವಾದ ಸಾಕಾರ ಮಹಾತ್ಮಗಾಂಧಿ ನರೇಗಾ ಯೋಜನೆಯಿಂದ ಸಾಧ್ಯವಾಗಲಿದ್ದು, ಯೋಜನೆ ಹೆಸರಲ್ಲಿ ನಕಲಿ ಜಾಬ್ ಕಾರ್ಡ್ ಸೃಷ್ಟಿ, ಅನರ್ಹರು,ಮರಣಹೊಂದಿದವರ ಹೆಸರಲ್ಲಿ ಹಣ ಲಪಟಾಯಿಸುವ ಕ್ರಮಕ್ಕೆ ಕಡಿವಾಣ ಬೀಳಬೇಕಿದೆ. ಪೂರ್ಣಗೊಂಡಿರುವುದು ಹಾಗೂ ಪ್ರಗತಿಯಲ್ಲಿರುವ ಎರಡು ಕಾಮಗಾರಿಗಳನ್ನು ಸಮಗ್ರವಾಗಿ ತನಿಖೆಗೊಳಪಡಿಸುವ ಅಗತ್ಯವಿದೆ.
ಜಿಲ್ಲೆಯಲ್ಲಿ ಕೈಗೊಂಡಿರುವ ನರೇಗಾ ಕಾಮಗಾರಿಗಳ ಮಾಹಿತಿ:
*ಪ್ರಸಕ್ತ ಸಾಲಿನ ನರೇಗಾ ಸಾರ್ವಜನಿಕ ಕಾಮಗಾರಿಗಳ ಸಂಖ್ಯೆ: 8072 (ಪೂರ್ಣ 976, ಪ್ರಗತಿಯಲ್ಲಿ 7096.)
*ವೈಯಕ್ತಿಕ ಕಾಮಗಾರಿಗಳ ಸಂಖ್ಯೆ: 30,839. (ಪೂರ್ಣ 3337, ಪ್ರಗತಿಯಲ್ಲಿ 27,502.)
*ಗ್ರಾಮೀಣ ಮೂಲಸೌಕರ್ಯ ಕಾಮಗಾರಿ: 14,108( ಪೂರ್ಣ 794, ಪ್ರಗತಿಯಲ್ಲಿ 9511.)
* ಜಿಲ್ಲೆಯಾದ್ಯಂತ ಕೈಗೊಂಡ ಒಟ್ಟುಕಾಮಗಾರಿ 49,216 (ಪೂರ್ಣ 5107, ಪ್ರಗತಿಯಲ್ಲಿ 44,109).
ಜೂ.19ರವರೆಗೆ 82.73 ಕೋಟಿ ನರೇಗಾ ಕಾಮಗಾರಿಗಳಿಗೆ ವೆಚ್ಚ:
ಜಿಲ್ಲೆಯ ಹತ್ತು ತಾಲುಕುಗಳಲ್ಲಿ ನರೇಗಾ ಕಾಮಗಾರಿಗಳಿಗಾಗಿ 82.73 ಕೋಟಿಯನ್ನು ಜೂ.19ರವರೆಗೆ ವೆಚ್ಚ ಮಾಡಲಾಗಿದ್ದು, ಜಿಲ್ಲೆಯಲ್ಲಿ ತುರುವೇಕೆರೆ ಹಾಗೂ ಮಧುಗಿರಿಯಲ್ಲಿ ಕ್ರಮವಾಗಿ 24.46 ಕೋಟಿ ಹಾಗೂ 14.86 ಕೋಟಿ ಜಿಲ್ಲೆಗೆ ಅಧಿಕ ವೆಚ್ಚ ನರೇಗಾ ಕೂಲಿ ಹಾಗೂ ಕೆಲಸಕ್ಕೆ ನೀಡಲಾಗಿದೆ. ಅತ್ಯಧಿಕ ವೆಚ್ಚವಾಗಿರುವ ಮಧುಗಿರಿಯಲ್ಲೇ ಅಕ್ರಮಗಳು ಮೇಲ್ನೋಟಕ್ಕೆ ಕಂಡುಬಂದಿದ್ದು, ಜಿಲ್ಲೆಯ ಸಂಸದರುಗಳು ಸಭೆಯಲ್ಲಿ ಅಕ್ರಮಕ್ಕೆ ಕಡಿವಾಣ ಬೀಳಬೇಕು ಎಂದು ಮಾಡಿದ ಆಗ್ರಹಕ್ಕೆ ಪೂರಕವಾಗಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿಯವರು ಕ್ರಮವಹಿಸುವರೇ ಕಾದುನೋಡಬೇಕಿದೆ.
ಓಂಬಡ್ಸುಮನ್‍ರಿಂದ ಲೋಪಗಳ ಪರಿಶೀಲನೆ ಅಗತ್ಯ :
ನರೇಗಾ ಯೋಜನೆ ಲೋಪಗಳ ಕುರಿತಂತೆ ದೂರುಗಳನ್ನು ಆಲಿಸಲಿರುವ ಓಂಬಡ್ಸುಮನ್‍ಗಳು ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಳಕ್ಕೆ ತೆರಳಿ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿ ಗ್ರಾಮಸ್ಥರ ಅಹವಾಲು ಆಲಿಸುವುದು ಸೂಕ್ತವೆನಿಸಿದೆ.ಅಧಿಕಾರಿಗಳು ಬರೀ ಅಂಕಿ-ಅಂಶದ ವರದಿ ನೀಡಿ ಲೋಪಗಳನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆಂಬ ಗಂಭೀರ ಆರೋಪಗಳು ಕೇಳಿಬರುತ್ತಿದ್ದು, ಓಂಬುಡ್ಸ್‍ಮನ್‍ಗಳು ಸ್ವಯಂಪ್ರಕರಣದಾಖಲಿಸಿಕೊಂಡು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ಅಗತ್ಯವಿದೆ. ಹಿಂದೆ ಓಂಬಡ್ಸ್‍ಮನ್‍ಗಳು ನೀಡಿದ ಕ್ರಮದ ಶಿಫಾರಸ್ಸುಗಳು ಅನುಷ್ಠಾನಗೊಳ್ಳದಿರುವುದು ಲೋಪಗಳ ಮುಂದುವರಿಕೆಗೆ ಕಾರಣವಾಗಿದೆ.
ಕೋವಿಡ್ ಪರಿಸ್ಥಿತಿಯಲ್ಲಿ ನಗರದಿಂದ ವಾಪಸ್ ಗ್ರಾಮಕ್ಕೆ ಮರಳಿದವರಿಗೆ ನರೇಗಾಯೋಜನೆ ಉದ್ಯೋಗನೀಡುವಲ್ಲಿ ವರವಾಯಿತು. ನಗರವ್ಯಾಪ್ತಿಗೂ ಇದನ್ನು ವಿಸ್ತರಿಸಬೇಕೆಂಬ ಆಗ್ರಹಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ ಜಿಲ್ಲೆಯಲ್ಲಿ ನಕಲಿ ಜಾಬ್ ಕಾರ್ಡ್, ಕಂಟ್ರಾಕ್ಟರ್‍ಗಳ ಅಕ್ರಮಗಳು ಇಡೀ ಯೋಜನೆಯನ್ನು ಹಳ್ಳಹಿಡಿಯುವಂತೆ ಮಾಡುತ್ತದೆ. ಸಾರ್ವಜನಿಕ ಸ್ವತ್ತುಗಳು ಯೋಜನೆಯಡಿ ಹೆಚ್ಚು ನಿರ್ಮಾಣ ಮಾಡಬೇಕು. ಅಕ್ರಮವನ್ನು ನಿಷ್ಪಕ್ಷಪಾತ ತನಿಖಾ ತಂಡದಿಂದ ತನಿಖೆಗೊಳಪಡಿಸುವ ಜೊತೆಗೆ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು.
-ಕೆ.ಎ.ತಿಪ್ಪೇಸ್ವಾಮಿ, ವಿಧಾನಪರಿಷತ್ ಸದಸ್ಯರು.
ಎಸ್.ಹರೀಶ್ ಆಚಾರ್ಯ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








