ಹುಬ್ಬಳ್ಳಿ
ದೇಶದಲ್ಲಿಯೇ ರಾಜ್ಯದ ಪೊಲೀಸರು ಮಾದರಿಯಾಗಿದ್ದಾರೆ. ಇಲಾಖೆಯ 1 ಲಕ್ಷ 16 ಸಾವಿರ ಹುದ್ದೆಗಳಲ್ಲಿ ಸುಮಾರು 25 ಸಾವಿರ ಹುದ್ದೆಗಳು ಖಾಲಿ ಇದ್ದು ಇವುಗಳ ಭರ್ತಿಗೆ ಆದ್ಯತೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಹಳೆಯ ಸಿಎಆರ್ ಆವರಣದ ಎದುರಿಗೆ ನಿರ್ಮಿಸಿರುವ 144 ಪೊಲೀಸ್ ಸಿಬ್ಬಂದಿ ಹಾಗೂ 6 ಅಧಿಕಾರಿಗಳ ವಸತಿಗೃಹಗಳನ್ನು ಉದ್ಘಾಟಿಸಿ ಮಾತನಾಡಿ, ದೇಶದ ಯಾವ ರಾಜ್ಯದಲ್ಲಿ ಪೆÇಲೀಸರಿಗೆ ಹೆಚ್ಚು ವೇತನ, ಸೌಲಭ್ಯಗಳನ್ನು ನೀಡಲಾಗುತ್ತಿದೆಯೋ ಅದನ್ನೇ ಈ ರಾಜ್ಯದಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ ಎಂದರು.
ಕಂದಾಯ ನಿರೀಕ್ಷಕರ ಹುದ್ದೆಗೆ ಸಮಾನವಾಗಿ ಪೊಲೀಸ್ ಪೇದೆಗಳಿಗೆ ವೇತನ ಸೌಲಭ್ಯ ನೀಡಲು ಪರಿಷ್ಕರಣೆ ಮಾಡಲಾಗುತ್ತದೆ. ಪೊಲೀಸರಿಗೆ ಪಡಿತರ ಸ್ಥಗಿತಗೊಳಿಸಿಲ್ಲ, ಅವರ ಕೋರಿಕೆಯಂತೆ ಎಲ್ಲರಿಗೂ 400 ರೂ.ಮಾಸಿಕ ಭತ್ಯೆ ನೀಡಲಾಗುತ್ತಿದೆ. ಸಿಬ್ಬಂದಿ ಬಯಸಿದರೆ ಮರಳಿ ಹಳೆಯ ಪದ್ಧತಿಯಂತೆ ಪಡಿತರ ವಿತರಣೆ ಮುಂದುವರೆಸಲಾಗುವುದು ಎಂದರು.
ಗಾಂಜಾ, ಡ್ರಗ್ಸ್ ನಿಯಂತ್ರಣಕ್ಕೆ ಸಾಕಷ್ಟು ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಲಾಗುತ್ತಿದೆ. ಮಾದಕ ವಸ್ತುಗಳ ಪೂರೈಕೆದಾರರನ್ನು ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಶಿಕ್ಷೆಯಾಗುವಂತೆ ಮಾಡಬೇಕು. ನಮ್ಮ ಸಿಬ್ಬಂದಿಗೆ ಯಾವ ಅಂಗಡಿ, ಕಾಲೇಜುಗಳಲ್ಲಿ ಅದು ಸಿಗುತ್ತದೆ ಎಂಬ ಮಾಹಿತಿ ತಿಳಿದಿರುತ್ತದೆ. ಬರುವ 3-4 ತಿಂಗಳಲ್ಲಿ ಅದನ್ನು ಸ್ಥಳೀಯ ಪೊಲೀಸ್ ಕಮೀಷನರೇಟ್ ನಿಯಂತ್ರಿಸಬೇಕು. ವಿದ್ಯಾರ್ಥಿಗಳಿಗೆ ಸಾಕ್ಷ್ಯಚಿತ್ರ ತೋರಿಸಿ, ಅದರ ಅಪಾಯಗಳ ಕುರಿತು ತಿಳುವಳಿಕೆ ನೀಡಬೇಕು.ತಿಂಗಳಿಗೆ ಒಂದು ಬಾರಿ ಕಾಲೇಜುಗಳಲ್ಲಿ ಉಪನ್ಯಾಸ ಏರ್ಪಡಿಸಬೇಕು ಎಂದು ಡಾ: ಪರಮೇಶ್ವರ್ ಕಿವಿ ಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ ಶೆಟ್ಟರ್ ಮಾತನಾಡಿ, ಉತ್ತಮ ಗುಣಮಟ್ಟದಲ್ಲಿ ಹುಬ್ಬಳ್ಳಿಯಲ್ಲಿ ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಿರುವದು ಸಂತಸ ತಂದಿದೆ. ಗೃಹ ಖಾತೆಗೆ ರಾಜ್ಯದ ಕಾನೂನು ,ಸುವ್ಯವಸ್ಥೆ ಕಾಪಾಡುವ ಮಹತ್ವದ ಹೊಣೆ ಇರುತ್ತದೆ.ಪೊಲೀಸ್ ಸಿಬ್ಬಂದಿ ,ಅಧಿಕಾರಿಗಳಿಗೆ ಇನ್ನೂ ಸಾಕಷ್ಡು ಸೌಲಭ್ಯಗಳು ಸಿಗಬೇಕಾಗಿದೆ.24 ಗಂಟೆಗಳ ಕಾಲ ದುಡಿಯುವ ಪೊಲೀಸರಿಗೆ ಮೂಲಭೂತ ಸೌಕರ್ಯಗಳನ್ನು ನೀಡಲು ಚಿಂತನೆ ನಡೆಸಬೇಕು ಎಂದರು.
ಬೆಂಗಳೂರು ನಂತರ ಅತಿದೊಡ್ಡ ಮಹಾನಗರವಾಗಿರುವ ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಲ್ಲಿ ಇನ್ನೊಂದು ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ , ಆನಂದ ನಗರ ವ್ಯಾಪ್ತಿಯಲ್ಲಿ ಹೊಸ ಪೊಲೀಸ್ ಠಾಣೆ ಅಸ್ತಿತ್ವಕ್ಕೆ ತರಬೇಕು.ವಾಹನಗಳ ಸಂಖ್ಯೆ ಬಹಳ ಹೆಚ್ಚಾಗಿದೆ ಪ್ರಮುಖ ಸ್ಥಳಗಳಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಹೆಚ್ಚಿನ ಸಿಬ್ಬಂದಿ ನಿಯೋಜಿಸಬೇಕು. ಅವಳಿ ನಗರಗಳಲ್ಲಿ ಬಹಳಷ್ಟು ಯುವ ಜನಾಂಗ ಡ್ರಗ್ಸ್, ಗಾಂಜಾ ದುಶ್ಚಟಕ್ಕೆ ಈಡಾಗುತ್ತಿದ್ದಾರೆ. ಮನರಂಜನೆಯ ಹೆಸರಿನಲ್ಲಿ ಇಸ್ಪೀಟ್ ಅಡ್ಡೆಗಳು ನಡೆಯುತ್ತಿವೆ, ಚಿಗುರಿನಲ್ಲಿದ್ದಾಗಲೇ ಅದನ್ನು ಚಿವುಟಿ ಹಾಕಬೇಕು. ಮೀಟರ್ ಬಡ್ಡಿ ದಂಧೆಕೋರರು, ಅಕ್ರಮ ಚಟುವಟಿಕೆಗಳನ್ನು ನಡೆಸುವವರನ್ನು ನಿಯಂತ್ರಿಸಬೇಕು ಎಂದರು .
ಕರ್ನಾಟಕ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಪೊಲೀಸ್ ಸಿಬ್ಬಂದಿಗೆ ಪೂರೈಸಲಾಗುತ್ತಿದ್ದ ಪಡಿತರ ಪೂರೈಕೆ ಮುಂದುವರೆಸಬೇಕು. ಅವಳಿ ನಗರದಲ್ಲಿ ಪ್ರತ್ಯೇಕವಾಗಿ ಪೊಲೀಸ್ ಸಮುದಾಯ ಭವನ ನಿರ್ಮಿಸಬೇಕು. ಅವಳಿನಗರದ ಸಂಚಾರ ವ್ಯವಸ್ಥೆಯನ್ನು ಬೆಂಗಳೂರು ಮಾದರಿಯಲ್ಲಿ ಸುಧಾರಣೆ ಮಾಡಬೇಕು.ಸಿಬ್ಬಂದಿಗೆ ತರಬೇತಿ ನೀಡಬೇಕು.ಕಡ್ಡಾಯ ಹೆಲ್ಮೆಟ್ ಪದ್ಧತಿ ಜಾರಿಗೆ ಸಾರ್ವಜನಿಕರು ಸಹಕರಿಸಬೇಕು.ಉತ್ತರ ಕರ್ನಾಟಕಕ್ಕೆ ಹೆಚ್ಚು ಸಿಬ್ಬಂದಿ ನಿಯೋಜಿಸಿ ಪೊಲೀಸ್ ಇಲಾಖೆ ಬಲಪಡಿಸಬೇಕು ಎಂದರು.
ಸಂಸದ ಪ್ರಹ್ಲಾದ ಜೋಷಿ ಮಾತನಾಡಿ, ಪೊಲೀಸ್ ಸಿಬ್ಬಂದಿ ಹಿತರಕ್ಷಣೆಗಾಗಿ ಔರಾದಕರ್ ಸಮಿತಿ ವರದಿ ಜಾರಿಗೊಳಿಸಬೇಕು. ಪೊಲೀಸ್ ಆರೋಗ್ಯ ಭಾಗ್ಯ ಯೋಜನೆ ವ್ಯಾಪ್ತಿಗೆ ಅವಳಿ ನಗರದ ಇನ್ನಷ್ಟು ಆಸ್ಪತ್ರೆಗಳನ್ನು ಸೇರಿಸಬೇಕು. ಹೊರರೋಗಿಗಳಾಗಿ ಚಿಕಿತ್ಸೆ ಪಡೆಯುವ ಸಿಬ್ಬಂದಿಗೆ ಕೂಡಲೇ ಮರುಪಾವತಿ ಮಾಡಲು ಕ್ರಮ ಕೈಗೊಳ್ಳಬೇಕು. ಆರ್ಡರ್ಲಿ ವ್ಯವಸ್ಥೆ ಸಂಪೂರ್ಣ ನಿವಾರಣೆಯಾಗಬೇಕು. ಸಂಚಾರ ವ್ಯವಸ್ಥೆ ನಿರ್ವಹಣೆಗೆ ತಂತ್ರಜ್ಞಾನ ಬಳಕೆ ಮಾಡಬೇಕು.ಬೈಪಾಸ್ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ತ್ವರಿತವಾಗಬೇಕು. ಧಾರವಾಡದಲ್ಲಿಯೂ ಸಹ ಹೊಸದಾಗಿ ಸಂಚಾರಿ ಪೊಲೀಸ್ ಠಾಣೆ ಹಾಗೂ ಕಾನೂನು ಸುವ್ಯವಸ್ಥೆ ಪಾಲನೆಗೆ ಮತ್ತೊಂದು ಠಾಣೆ ಆಗಬೇಕು. ಪೆÇಲೀಸರಿಗೆ ನೆಮ್ಮದಿ ಒದಗಿಸಿದರೆ ಸಮಾಜದ ಆರೋಗ್ಯ ಸುಧಾರಿಸುತ್ತದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








