ಚಳ್ಳಕೆರೆ
ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.100ರ ಮತದಾನ ಹೊಂದುವ ಗುರಿಯನ್ನು ಹೊಂದಲಾಗಿದ್ದು, ಈ ಗುರಿ ಸಾಧನೆಗೆ ಎಲ್ಲಾ ರೀತಿಯ ಸಹಕಾರವನ್ನು ನೀಡಬೇಕೆಂದು ತಾಲ್ಲೂಕು ಸ್ವೀಫ್ ಸಮಿತಿ ಅಧ್ಯಕ್ಷರು, ನೂತನ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಚಂದ್ರಶೇಖರ್ ತಿಳಿಸಿದರು.
ಅವರು, ಬುಧವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಗರದ ಎನ್.ಜಯಣ್ಣ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿಯೊಬ್ಬ ಮತದಾರನು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕಿದೆ.
ಈ ಹಿನ್ನೆಲೆಯಲ್ಲಿ ತಾಲ್ಲೂಕು ಸ್ವೀಫ್ ಸಮಿತಿ ಹಲವಾರು ಜಾಗೃತಿ ಕಾರ್ಯಕ್ರಮವನ್ನು ನಡೆಸುವ ಮೂಲಕ ಮತದಾರರಿಗೆ ಮತದಾನ ಮಾಡುವಂತೆ ಸ್ಪಷ್ಟ ಸಂದೇಶ ನೀಡಿದೆ. ನಗರ ಹಾಗೂ ತಾಲ್ಲೂಕಿನ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ವಿವಿಧ ಸಂಘ ಸಂಸ್ಥೆಗಳು ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಹೆಚ್ಚು ಸಹಕಾರವನ್ನು ನೀಡುತ್ತಿವೆ. ಈ ಮಹಾವಿದ್ಯಾಲಯದ ನೂರಾರು ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮತದಾರರನ್ನು ಜಾಗೃತಿಗೊಳಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇವರ ಈ ಜಾಗೃತಿ ಕಾರ್ಯಕ್ರಮಕ್ಕೆ ಶುಭ ಕೋರುವುದಾಗಿ ತಿಳಿಸಿದರು.
ತಹಶೀಲ್ದಾರ್ ತುಷಾರ್ ಬಿ.ಹೊಸೂರ್ ಮಾತನಾಡಿ, ಮತದಾನ ನಮಗೆ ಸಂವಿಧಾನ ಬದ್ದವಾಗಿ ಬಂದ ಹಕ್ಕಾಗಿದ್ದು, ಈ ಹಕ್ಕು ಚಲಾಯಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಮತದಾನದ ಮೂಲಕ ನಾವು ಆಯ್ಕೆ ಮಾಡುವ ಚುನಾಯಿತ ಪ್ರತಿನಿಧಿ ಸಮಾಜದ ಹಿತಕ್ಕಾಗಿ ಶ್ರಮಿಸುವಂತಿರಬೇಕು. ಈ ಹಿನ್ನೆಲೆಯಲ್ಲಿ ಮತದಾನ ಅಮೂಲ್ಯವಾದ ಕಾರ್ಯವಾಗಿದೆ. ಎಲ್ಲರೂ ಮತದಾನದಲ್ಲಿ ತಪ್ಪದೆ ಪಾಲ್ಗೊಳ್ಳಬೇಕು. ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿಹಿಡಿಯಬೇಕೆಂದರು.
ಪ್ರಾಂಶುಪಾಲ ಕೆ.ಟೀಪು ಮಾತನಾಡಿ, 18 ವರ್ಷ ತುಂಬಿದ ಯುವ ಮತದಾರರು ಇದೇ ಮೊದಲ ಬಾರಿಗೆ ಮತದಾನದಲ್ಲಿ ಪಾಲ್ಗೊಳ್ಳುತ್ತಿದ್ದು, ಮತದಾನದ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕಿದೆ. ಈಗಾಗಲೇ ಗ್ರಾಮೀಣ ಭಾಗಗಳಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಹಂತ ಹಂತವಾಗಿ ನಡೆದಿದೆ. ಮತದಾನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಎಲ್ಲಾ ಮತದಾರರನ್ನು ಮತದಾನಕ್ಕೆ ಸಿದ್ದಪಡಿಸುವ ಕಾರ್ಯವನ್ನು ನಮ್ಮ ಸಂಸ್ಥೆ ಮಾಡಿದ್ದು, ಇದಕ್ಕೆ ಸಹಕಾರ ನೀಡಿದ ತಾಲ್ಲೂಕು ಆಡಳಿತಕ್ಕೆ ಕೃತಜ್ಞತೆಗಳನ್ನು ಅರ್ಪಿಸಿದರು.
ಇದೇ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಗಳು ಪ್ರವಾಸಿಮಂದಿರದಿಂದ ಹೊರಟು ವಾಲ್ಮೀಕಿ, ಅಂಬೇಡ್ಕರ್ ವೃತ್ತದ ಮೂಲಕ ನೆಹರೂ ವೃತ್ತ ತಲುಪಿ ಅಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಯೊಬ್ಬರೂ ಮತದಾನದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ರಾಘವೇಂದ್ರ ನಾಯಕ, ಹೇಮಂತರಾಜು, ಎಚ್.ಮಂಜುನಾಥ್, ಜಿ.ಆರ್.ಸತೀಶ್‍ಕುಮಾರ್, ವಿಜಯಲಕ್ಷ್ಮೀ, ವಾಣಿ, ರವಿಕುಮಾರ್, ರೂಪ ಪ್ರಸಾದ್, ದೊರೆಸ್ವಾಮಿ, ವಿಶ್ವನಾಥ್ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








