ನವದೆಹಲಿ
ಲೋಕಸಭಾ ಚುನಾವಣೆಯ ಎಲ್ಲಾ ಹಂತಗಳ ಮತದಾನದ ದಿನ ಹಾಗೂ ಒಂದು ದಿನ ಮೊದಲು ಮುದ್ರಣ ಮಾಧ್ಯಮಗಳಲ್ಲಿ ಜಾಹೀರಾತನ್ನು ಚುನಾವಣಾ ಆಯೋಗದ ಅನುಮತಿ ಇಲ್ಲದೆ ಪ್ರಕಟಿಸುವಂತಿಲ್ಲ ಎಂದು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತ್ತು ಇತರ ಸಂಘಟನೆಗಳಿಗೆ ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ.
ಎಲ್ಲಾ ರಾಜಕೀಯ ಪಕ್ಷಗಳು ಜಾಹೀರಾತು ಪ್ರಕಟಣೆಗೆ ರಾಜ್ಯ ಹಾಗೂ ಜಿಲ್ಲಾಮಟ್ಟದ ಸಮಿತಿಗಳಿಂದ ಪೂರ್ವಾನುಮತಿ, ಮಾಧ್ಯಮ ಪ್ರಮಾಣೀಕರಣ ಮತ್ತು ಉಸ್ತುವಾರಿ ಸಮಿತಿಗಳ ದೃಢೀಕರಣ ಕಡ್ಡಾಯವಾಗಿದೆ ಎಂದು ಆಯೋಗ ತಿಳಿಸಿದೆ.
ಚುನಾವಣೆಯ ಕೊನೆಯ ಹಂತದಲ್ಲಿ ಪ್ರಕಟಪಡಿಸುವ ಜಾಹೀರಾತುಗಳಿಂದ ಚುನಾವಣಾ ಉದ್ದೇಶ ಹಾಳು ಮಾಡುವ ಸಾಧ್ಯತೆ ಇರುವುದರಿಂದ ಮತದಾನದ ದಿನ ಹಾಗೂ ಒಂದು ದಿನ ಮೊದಲು ಜಾಹೀರಾತುಗಳನ್ನು ನಿಷೇಧಿಸಲಾಗುತ್ತಿದೆ ಎಂದು ಆಯೋಗ ತಿಳಿಸಿದೆ.
ಜಾಹೀರಾತು ನಿಷೇಧ ವಿಷಯವನ್ನು ಎಲ್ಲಾ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಾಗೂ ವೃತ್ತ ಪತ್ರಿಕೆಗಳಿಗೆ ತಿಳಿಸುವಂತೆ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗೆ ಕೇಂದ್ರ ಚುನಾವಣಾ ಆಯೋಗ ಪತ್ರ ಬರೆದಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಮುಕ್ತ, ನ್ಯಾಯಸಮ್ಮತ ಹಾಗೂ ತತ್ವ ಸಿದ್ಧಾಂತಗಳನ್ನು ಕಾಯ್ದುಕೊಳ್ಳುವಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳು ಸ್ವಯಂ ಪ್ರೇರಿತವಾಗಿ ಸ್ವಯಂ ನಿಯಂತ್ರಣಕ್ಕೆ ಇದೇ ಮೊದಲ ಬಾರಿಗೆ ಒಪ್ಪಿಗೆ ಸೂಚಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








