ನೀತಿ ಸಂಹಿತೆಯಲ್ಲೂ ರಸ್ತೆ ಕಾಮಗಾರಿ

ಹುಳಿಯಾರು

      ಹುಳಿಯಾರು ಹೋಬಳಿಯ ಯಳನಾಡು ಗ್ರಾಮದಲ್ಲಿ ನೀತಿ ಸಂಹಿತೆಯಿದ್ದರೂ ರಸ್ತೆ ಕಾಮಗಾರಿ ಆರಂಭಿಸಿದ್ದಾರೆ ಎಂದು ಇಲ್ಲಿನ ಬಜರಂಗದಳದ ಅಧ್ಯಕ್ಷ ಮೋಹನ್ ಆರೋಪಿಸಿದ್ದಾರೆ.

       ಚುನಾವಣಾ ನೀತಿ ಸಂಹಿತೆ ಇದ್ದಾಗ ಕುಡಿಯುವ ನೀರಿಗೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಬಿಟ್ಟು ಇನ್ನಾವುದೇ ಅಭಿವೃದ್ಧಿ ಕಾಮಗಾರಿ ಮಾಡಬಾರದೆಂಬ ಸ್ಪಷ್ಟ ಸೂಚನೆಯಿದೆ. ಆದರೆ ಜಿಲ್ಲಾ ಪಂಚಾಯ್ತಿ ಅನುದಾನದ ಕಾಮಗಾರಿ ಎಂದೇಳಿ ಯಳನಾಡುವಿನ ಮಾರನಾಮ ಬಯಲಿನಿಂದ ಗಂಗಮ್ಮನಕೆರೆಯವರೆವಿಗೆ ರಸ್ತೆಗೆ ಮಣ್ಣು ಹಾಕುವ ಕಾಮಗಾರಿ ಮಾಡಿದ್ದಾರೆ ಎಂಬುದು ಇವರ ಆರೋಪವಾಗಿದೆ.

       ಈಗ ಕಾಮಗಾರಿ ಮಾಡುತ್ತಿರುವ ರಸ್ತೆಯಲ್ಲಿ ಹಾಲಿ ಡಾಂಬರ್ ರಸ್ತೆಯಿದ್ದು ಅಲ್ಲಲ್ಲಿ ಸ್ವಲ್ಪ ಗುಂಡಿಬಿದ್ದು ಹಾಳಾಗಿತ್ತು. ಈ ರಸ್ತೆಗೆ ಮರು ಡಾಂಬರೀಕರಣ ಮಾಡುವಂತೆ ಈ ಭಾಗದ ಜನ ಜನಪ್ರತಿನಿಧಿಗಳನ್ನು ಒತ್ತಾಯಿಸುತ್ತಿದ್ದರು. ಆದರೆ ಡಾಂಬರೀಕರಣ ಬದಲು ರಸ್ತೆಗೆ ಮಣ್ಣು ಹಾಕಿದ್ದಾರೆ. ಮಣ್ಣು ಹಾಕಿದವರು ರೋಡ್ ರೋಲರ್‍ನಲ್ಲಿ ಸಮತಟ್ಟು ಮಾಡದೆ ಬೇಕಾಬಿಟ್ಟಿ ಚಲ್ಲಿ ಹೋಗಿದ್ದಾರೆ.

        ಇದರಿಂದ ಈ ಭಾಗದಲ್ಲಿ ದ್ವಿಚಕ್ರ ವಾಹನ ಸವಾರರ ಸುಗಮ ಸಂಚಾರಕ್ಕೆ ತೊಡಕಾಗಿದೆ. ಮಳೆ ಬಂದರಂತೂ ಕೆಸರು ಗದ್ದೆಯಾಗಿ ಪಾದಚಾರಿಗಳಿಗೂ ಕಿರಿಕಿರಿ ತಂದೊಡ್ಡುವುದು ನಿಶ್ಚಿತ. ಈ ಬಗ್ಗೆ ಎಂಜಿನಿಯರ್ ಪುರುಷೋತ್ತಮ್ ಅವರನ್ನು ಪ್ರಶ್ನಿಸಿದರೆ ಗುಂಡಿ ಮುಚ್ಚಲು ಹೇಳಿದ್ದೆ. ಆದರೆ ರಸ್ತೆ ತುಂಬ ಮಣ್ಣು ಹಾಕಿದ್ದಾರೆ ಎನ್ನುತ್ತಾರೆ.

       ಡಾಂಬಾರ್ ರಸ್ತೆಯ ಗುಂಡಿಗಳನ್ನು ಡಾಂಬರ್ ಮೂಲಕವೇ ಮುಚ್ಚಬೇಕು. ಆದರೆ ಮಣ್ಣಿನಲ್ಲಿ ಮುಚ್ಚಿರುವುದು ಅವೈಜ್ಞಾನಿಕ ಕಾಮಗಾರಿಗೆ ನಿದರ್ಶನವಾಗಿದೆ. ಕೇವಲ 1 ಕಿ.ಮೀ ರಸ್ತೆಗೆ ಹತ್ತದಿನೈದು ಟ್ರ್ಯಾಕ್ಟರ್ ಮಣ್ಣು ಹಾಕಿ 70 ಸಾವಿರ ಬಿಲ್ ಪಡೆದಿದ್ದಾರೆ. ತಕ್ಷಣ ಚುನಾವಣಾಧಿಕಾರಿಗಳು ಇವರ ಮೇಲೆ ಶಿಶ್ತು ಕ್ರಮ ಜರುಗಿಸಬೇಕು. ಹಾಗೂ ಕಳಪೆ ಕಾಮಗಾರಿ ಮಾಡಿ ಬಿಲ್ ಪಡೆದಿರುವ ಗುತ್ತಿಗೆದಾರರಿಂದ ಹಣ ಹಿಂಪಡೆಬೇಕು ಎಂದು ಅವರು ಒತ್ತಾಯಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link