ದಾವಣಗೆರೆ:
ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡಿಸುವ ವಿಚಾರದಲ್ಲಿ ಕಿಂಚಿತ್ತು ಕಾಳಜಿ ತೋರಿಸದ ಕಾಂಗ್ರೆಸ್ಗೆ, ಸಾಮಾಜಿಕನ್ಯಾಯದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಜಿಲ್ಲಾ ಬಿಜೆಪಿ ಮುಖಂಡ ಬಿ.ಎಂ.ಸತೀಶ್ ಕೊಳೆನಹಳ್ಳಿ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲು ಮಂಡಲ್ ಆಯೋಗ ರಚನೆ ಮಾಡಿದ್ದು, ಬಿಜೆಪಿ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದಿದ್ದ ಜನತಾ ಸರ್ಕಾರ. ಈ ಆಯೋಗ ನೀಡಿದ ವರದಿಯನ್ನು ನಂತರ ಅಧಿಕಾರಕ್ಕೆ ಬಂದ ಇಂದಿರಾಗಾಂಧಿ ಸರ್ಕಾರ ಹಾಗೂ ಬಳಿಕ ಅಧಿಕಾರಕ್ಕೆ ಬಂದ ರಾಜೀವ್ಗಾಂಧಿ ಸರ್ಕಾರ ಅನುಷ್ಠಾನ ಮಾಡದೇ ಕಸದ ಬುಟ್ಟಿಗೆ ಬಿಸಾಕಿದ್ದವು ಎಂದು ಆರೋಪಿಸಿದರು.
ಎರಡು ಅವಧಿಯ ವರೆಗೆ ಹಾಗೆಯೇ ಬಿದ್ದಿದ್ದ ಮಂಡಲ್ ಆಯೋಗದ ವರದಿಯನ್ನು ಬಿಜೆಪಿಯ ಬೆಂಬಲದೊಂದಿಗೆ ಪ್ರಧಾನಮಂತ್ರಿಯ ಪಟ್ಟಕ್ಕೆ ಏರಿದ ವಿ.ಪಿ.ಸಿಂಗ್ ಅನುಷ್ಠಾನಗೊಳಿಸುವ ಮೂಲಕ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿದ್ದಾರೆ. ಹೀಗಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡಿಸುವ ವಿಚಾರದಲ್ಲಿ ಕಾಂಗ್ರೆಸ್ ಕಿಂಚಿತ್ತು ಪಾತ್ರವಹಿಸಿಲ್ಲ ಎಂದು ಆರೋಪಿಸಿದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಮಪೈಪೋಟಿ ನೀಡಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಸ್ಪರ್ಧೆಯಿಂದ ಹಿಂದೆ ಸರಿದವರು, ಕಾಂಗ್ರೆಸ್ ಟಿಕೆಟ್ ಬಗ್ಗೆ ಕೊನೆ ಕ್ಷಣದ ವರೆಗೂ ಗೊಂದಲ ಮೂಡಿಸಿ, ನಂತರದಲ್ಲಿ ಕುರುಬ ಸಮುದಾಯಕ್ಕೆ ಸೇರಿರುವ ಹೆಚ್.ಬಿ.ಮಂಜಪ್ಪನವರನ್ನು ದಿಢೀರ್ ಅಭ್ಯರ್ಥಿಯನ್ನಾಗಿ ಘೋಷಿಸಿ, ನಾವು ಹಿಂದುಳಿದ ವರ್ಗದವರಿಗೆ ಟಿಕೆಟ್ ತ್ಯಾಗ ಮಾಡಿರುವುದಾಗಿ ಹೇಳುತ್ತಿದ್ದಾರೆ.
ಇವರಿಗೆ ಹಿಂದುಳಿದ ವರ್ಗದವರ ಬಗ್ಗೆ ಅಷ್ಟೊಂದು ಕಾಳಜಿ ಇದ್ದಿದ್ದರೆ, ಮೂರ್ನಾಲ್ಕು ತಿಂಗಳ ಮುಂಚೆಯೇ ಟಿಕೆಟ್ ಖಾಯಂ ಮಾಡಿಸಬೇಕಿತ್ತು. ಇದನ್ನು ಮಾಡದ ಕಾಂಗ್ರೆಸ್ನವರು ಕೊನೆಗೆ ಮಂಜಪ್ಪನವರಿಗೆ ಟಿಕೆಟ್ ಕೊಡಿಸಿ ಹರಿಕೆಯ ಕುರಿ ಮಾಡಲು ಹೊರಟಿದ್ದಾರೆಂದು ದೂರಿದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಪೈಲ್ವಾನ್ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ಸ್ಮಾರ್ಟ್ಸಿಟಿ ಯೋಜನೆ ಪ್ರಧಾನಿ ಮೋದಿ ಸರ್ಕಾರ ಆರಂಭಿಸಿರುವ ಯೋಜನೆಯಾಗಿದ್ದು, ಈ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಮಾನವಾಗಿ ಅನುದಾನ ಬಿಡುಗಡೆಯಾಗಿದೆ. ಆದರೆ, ಕಾಂಗ್ರೆಸ್ನವರು ರಾಜ್ಯ ಸರ್ಕಾರದ ಹಣದಿಂದಲೇ ಸ್ಮಾರ್ಟ್ ದಾವಣಗೆರೆ ಮಾಡಿರುವುದಾಗಿ ಹೇಳಿ, ಜನರ ದಾರಿ ತಪ್ಪಿಸುತ್ತಿದ್ದಾರೆಂದು ಆರೋಪಿಸಿದರು.
ಜಲಸಿರಿ ಯೋಜನೆಗೆ ಕೇಂದ್ರ ಸರ್ಕಾರದಿಂದ ಅಮೃತ್ ಸಿಟಿ ಯೋಜನೆಯಡಿ ಬಿಡುಗಡೆಯಾಗಿರುವ 175 ಕೋಟಿ ಅನುದಾನ ಬಳಸಿದ್ದು, ಕಾಂಗ್ರೆಸ್ಸಿಗರು ಇದನ್ನು ಜನರಿಗೆ ತಿಳಿಸದೇ ಮರೆಮಾಚುತ್ತಿದ್ದಾರೆ. ಅಲ್ಲದೆ, ಮಳೆಗಾಲದಲ್ಲಿ ಎಸ್ಪಿಎಸ್ ನಗರ ಸೇರಿದಂತೆ ಇತರೆ ಸಾವಿರಾರರು ಮನೆಗಳಿಗೆ ನೀರು ನುಗ್ಗುತ್ತಿತ್ತು. ಇದನ್ನು ಕಂಡ ಸಂಸದರು ಸ್ಮಾರ್ಟ್ಸಿಟಿ ಯೋಜನೆಯಡಿಯಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ಇಲ್ಲಿನ ರಾಜಕಾಲುವೆ ಅಭಿವೃದ್ಧಿ ಪಡೆಸಿದ್ದಾರೆಂದು ಮಾಹಿತಿ ನೀಡಿದರು.
ಹಿಂದೆ ಎಸ್.ಎಸ್.ಮಲ್ಲಿಕಾರ್ಜುನ್ 10 ಸಾವಿರ ಮನೆಗಳನ್ನು ಕಟ್ಟಿಸಿಕೊಟ್ಟಿದ್ದು, ಅಂದಿನ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ. ಅದರಲ್ಲಿ ರಾಜ್ಯ ಸರ್ಕಾರದ ಪಾಲು ಅತ್ಯಲ್ಪ ಇರಬಹುದು ಎಂದ ಅವರು ಕಾಂಗ್ರೆಸ್ ನಿಜಕ್ಕೂ ಬಡವರಿಗೆ ಮನೆಗಳನ್ನು ಕಟ್ಟಿಸಿಕೊಡಲಿಲ್ಲ. ಬದಲಿಗೆ ಕಾಂಗ್ರೆಸ್ ಮುಖಂಡರಿಗೆ ತಲಾ 25 ಮನೆಗಳನ್ನು ಹಂಚಿದರು. ಅವರೆಲ್ಲರೂ ಆ ಮನೆಗಳನ್ನು ಮಾರಿ, ಬಾಡಿಗೆ ಕೊಟ್ಟು ಬೇರೆಕಡೆ ವಾಸವಾಗಿದ್ದಾರೆ. ಈಗ ಅಲ್ಲಿರುವ ನಿವಾಸಿಗಳಲ್ಲಿ ಶೇ.80ರಷ್ಟು ಜನ ಬಾಡಿಗೆದಾರರೇ ಆಗಿದ್ದಾರೆಂದು ಆರೋಪಿಸಿದರು.
ಈಗಲೂ ಕಾಂಗ್ರೆಸ್ ಕಾರ್ಯಕರ್ತರು ಆಶ್ರಯ ಮನೆ ಕೊಡಿಸುವುದಾಗಿ ಸುಳ್ಳು ಹೇಳಿ, ಸಾರ್ವಜನಿಕರಿಂದ ಅರ್ಜಿ, ದಾಖಲೆ ಹಾಗೂ ಹಣ ಸಂಗ್ರಹಿಸುತ್ತಿದ್ದಾರೆ. ಆದರೆ, ಪಾಲಿಕೆಯ ಆಯುಕ್ತರು ಮನೆ ನೀಡುವುದಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆಂದು ಆರೋಪಿಸಿದ ಅವರು, ಅಭಿವೃದ್ಧಿಯ ವಿಚಾರದಲ್ಲಿ ನಮ್ಮ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಬಗ್ಗೆ ಕಾಂಗ್ರೆಸ್ ಸರ್ಟಿಫಿಕೇಟ್ ನಮಗೆ ಬೇಕಿಲ್ಲ. ನಮಗೆ ಬೇಕಾಗಿರುವುದು ಜನರ ಸರ್ಟಿಫಿಕೇಟ್. ಅದನ್ನು ಜಿಲ್ಲೆಯ ಮತದಾರರು ಏ.23ರಂದು ನಮಗೆ ನೀಡಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಎನ್.ರಾಜಶೇಖರ್ ಮಾತನಾಡಿ, ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ಅಶೋಕ ರೈಲ್ವೆಗೇಟ್ನಲ್ಲಿ ನಿರ್ಮಿಸಲುದ್ದೇಶಿಸಿರುವ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಿದ್ದರೂ ಸಹ ಜಿಲ್ಲಾಡಳಿತ ಭೂಮಿ, ನೀಡಲಿಲ್ಲ. ಇನ್ನೂ ಏರ್ಪೋರ್ಟ್, ಕೈಗಾರಿಕೆಗೆ ಭೂಮಿ ಕೊಡಲು ಇಲ್ಲಿಯ ಕಾಂಗ್ರೆಸ್ ಶಾಸಕರುಗಳು ಬಿಡುತ್ತಿದ್ದರಾ? ಎಂದು ಪ್ರಶ್ನಿಸಿದರು.ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ಡಿ.ಕೆ.ಕುಮಾರ್, ಮುಖಂಡರಾದ ಅಂಬರೀಶ್, ಆನಂದ್, ಧನುಷ್ರೆಡ್ಡಿ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








