ದಾವಣಗೆರೆ:
ಗೋಡೆಯ ಮೇಲಿನ ಬರಹ ಎಷ್ಟು ಸ್ಪಷ್ಟವಾಗಿರುತ್ತೋ, ಅದರಂತೆ ರಾಜ್ಯದಲ್ಲಿ ಬಿಜೆಪಿಯು 22 ಸ್ಥಾನಗಳಲ್ಲಿ ಗೆಲ್ಲುವು ಸಾಧಿಸುವುದು ಅಷ್ಟೇ ಖಚಿತ ಎಂದು ಮಾಜಿ ಸಚಿವ ಸುರೇಶಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಕೇಂದ್ರದಲ್ಲಿ ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗಲು ಕರ್ನಾಟಕ ಮುಖ್ಯಪಾತ್ರ ವಹಿಸಲಿದೆ ಎಂದು ಹೇಳಿದರು.
ಸಂವಿಧಾನಕ್ಕೆ ಬದ್ದ ಎಂದು ಪ್ರತಿಬಾರಿಯೂ ಸಂವಿಧಾನಾತ್ಮಕವಾಗಿ ಮತನಾಡುವ ವಿ.ಎಸ್.ಉಗ್ರಪ್ಪನವರು ಮತ ಚಲಾಯಿಸದಿರುವುದು ನಿಜಕ್ಕೂ ಉಗ್ರಪ್ಪನವರಿಗೆ ಸಂವಿಧಾನದ ಬಗ್ಗೆ ಇರುವ ಬದ್ಧತೆಯನ್ನು ತೋರಿಸಲಿದೆ. ಪ್ರತಿಯೊಬ್ಬರು ಮತ ಹಾಕಬೇಕು ಎಂದು ಕೈಮುಗಿದು ಜನರಲ್ಲಿ ಕೇಳಿಕೊಳ್ಳುವ ಅವರೇ ಮತದಾನ ಮಾಡಿಲ್ಲ.
ಅಲ್ಲದೇ, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿರುವ ರಮ್ಯ ಸಹ ಮೂರು ಬಾರಿ ಮತದಾನ ಮಾಡದೆ ಹ್ಯಾಟ್ರಿಕ್ ಸಾಧಿಸಿದ್ದಾರೆ. ಇವರೆಲ್ಲಾ ಜನರ ಮುಂದೆ ಹೋಗಿ ಮತ ಚಲಾಯಿಸಿ ಎಂದು ಹೇಳಲು ಯಾವ ನೈತಿಕತೆ ಉಳಿಸಿಕೊಂಡಿದ್ದಾರೆಂದು ಕುಟುಕಿದರು.
ರಾಹುಲ್ ಗಾಂಧಿ ಪ್ರಧಾನಿಯಾದರೆ ಸೂಕ್ತ ಸಲಹೆ ನೀಡುತ್ತೇನೆ ಎಂದು ಮಾಜಿ ಪ್ರಧಾನಿ ದೇವೇಗೌಡ ಅವರು ಹೇಳುತ್ತಿದ್ದು, ಅದು 2024ರ ವರೆಗೆ ಸಾಧ್ಯವಿಲ್ಲ. ಒಂದು ವೇಳೆ ಇಂದಿನಿಂದಲೇ ಪ್ರಯತ್ನ ಪಟ್ಟರೇ ಆಗಬಹುದೇನೋ ಎಂದು ಲೇವಡಿ ಮಾಡಿದರು.
ಕರ್ನಾಟಕದಲ್ಲಿ ಏ.18ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಮತದಾನದ ಪ್ರಮಾಣ ಕುಸಿಯಲು ಒಂದು ರೀತಿಯಲ್ಲಿ ಚುನಾವಣಾ ಆಯೋಗವೇ ಕಾರಣವಾಗಿದೆ.
ಏ.18ರ ಬದಲು ಬೇರೆ ದಿನಾಂಕ ಘೋಷಣೆ ಮಾಡಬೇಕಿತ್ತು. ಏಕೆಂದರೆ ಏ. 17 ರಿಂದ 21 ರವರೆಗೂ ರಜೆಗಳಿದ್ದು, ಜನರು ಸಹ ವೀಕೆಂಡ್ ಮೂಡ್ ನಲ್ಲಿರುವುದರಿಂದ ಮತದಾನವಾಗಿಲ್ಲ, ಆದ್ದರಿಂದ ದಿನಾಂಕ ಬದಲಿಸಬೇಕೆಂದು ಆಯೋಗಕ್ಕೆ ಮನವಿ ಮಾಡಿದ್ದೇವು. ಆದರೆ ಆಯೋಗ ಸ್ಪಂದಿಸಲಿಲ್ಲ ಎಂದರು.
ಮತದಾರರ ಪಟ್ಟಿ ತಯಾರಿಸುವಲ್ಲಿಯೂ ಸಹ ಚುನಾವಣಾ ಆಯೋಗ ಎಡವಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತಹಾಕಿದವರು ಏ.18 ರಂದು ಮತದಾನ ಮಾಡಲು ಹೋದರೆ, ಅವರ ಹೆಸರನ್ನೇ ತೆಗೆದು ಹಾಕಲಾಗಿದೆ. ಈ ರೀತಿ ಸುಮಾರು ಒಂದುವರೆ ಲಕ್ಷ ಮತದಾರರು ತಮ್ಮ ಹಕ್ಕಿನಿಂದ ವಂಚಿತರಾಗಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ವಿಳಾಸವಿದೆ. ಪಟ್ಟಿಯನ್ನು ನೀಡಲಾಗಿತ್ತು. ಆದರೆ ಮತಗಟ್ಟೆ ಕೇಂದ್ರದೊಳಗೆ ಮತದಾರರ ಹೆಸರನ್ನೇ ತೆಗೆದು ಹಾಕಲಾಗಿದೆ. ಪರಸ್ಥಳದಿಂದ ಮತ ಹಾಕಲು ಬಂದವರು ಸಹ ತಮ್ಮ ಹೆಸರಿಲ್ಲದೆ ವಿಧಿ ಇಲ್ಲದೇ ಚುನಾವಣಾ ಆಯೋಗವನ್ನು ಶಪಿಸಿ, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಾಸ್ ಆಗಿದ್ದಾರೆ. ಮತದಾನಕ್ಕೆ ಸರಿಯಾದ ಓಟರ್ ಲೀಸ್ಟ್ ತಯಾರಾಗಿಲ್ಲದಿರುವುದು ದುರಂತ. ಇದು ಒಂದು ರೀತಿಯಲ್ಲಿ ಅರ್ಹ ಮತದಾರರ ಮತದಾನದ ಹರಣ ಮಾಡಿದಂತಾಗಿದೆ ಎಂದು ವ್ಯಾಖ್ಯಾನಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್.ಶಿವಯೋಗಿಸ್ವಾಮಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರಾಜಶೇಖರ್, ಮುಖಂಡರಾದ ಶಾಮನೂರು ಲಿಂಗರಾಜ್, ಕಾಕನೂರು ಮಂಜಪ್ಪ, ರಾಘವೇಂದ್ರ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ







