ಚೆಳ್ಳಕೆರೆ: ನಗರದಲ್ಲಿ ಕಾಫಿಗೂ ಮುನ್ನವೇ ಮದ್ಯ ಲಭ್ಯ..!!

ಚಳ್ಳಕೆರೆ

     ನಗರದ ವಿವಿಧ ರಸ್ತೆಗಳಲ್ಲಿರುವ ಬಾರ್‍ಗಳು ಇಲಾಖೆಯ ನಿಯಮವನ್ನು ಪಾಲಿಸುವಲ್ಲಿ ವಿಫಲವಾಗಿದ್ದು, ಬೆಳ್ಳಂಬೆಳಗ್ಗೆಯೇ ಕೆಲವೊಂದು ಬಾರ್‍ಗಳು ಅಬಕಾರಿ ನಿಯಮಗಳನ್ನು ಉಲ್ಲಂಘಿಸಿ ಗಿರಾಕಿಗಳಿಗೆ ಮದ್ಯ ಸರಬರಾಜು ಮಾಡುತ್ತಿದ್ದು, ಇಲಾಖಾಧಿಕಾರಿಗಳ ನಿರ್ಲಕ್ಷಕ್ಕೆ ಕೈಗನ್ನಡಿಯಾಗಿದೆ ಎಂದು ಆಕ್ರೋಶವ್ಯಕ್ತಪಡಿಸಲಾಗಿದೆ.

      ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ನಗರಸಭಾ ಸದಸ್ಯ ಬಿ.ಟಿ.ರಮೇಶ್‍ಗೌಡ, ನಗರದಲ್ಲಿ ಪ್ರಮುಖ ರಸ್ತೆಯಲ್ಲಿನ ಕೆಲವೊಂದು ಬಾರ್‍ಗಳು ಬೆಳಗಿನ ಜಾವ 6 ಗಂಟೆಯಿಂದಲೇ ಒಂದು ಬಾಗಿಲು ತೆರೆದು ಗಿರಾಕಿಗಳಿಗೆ ಮಧ್ಯ ಸರಬರಾಜು ಮಾಡುತ್ತಾರೆ. ಪ್ರತಿಯೊಂದು ಬಾರ್‍ಗಳ ವೇಳೆಯನ್ನು ಅಬಕಾರಿ ಇಲಾಖೆ ನಿಗದಿ ಪಡಿಸಿದ್ದು, ಆ ವೇಳೆಯಲ್ಲಿ ಮದ್ಯ ಮಾರಾಟ ಮಾಡಲು ಅವಕಾಶ ಇದೆ.

      ಆದರೆ, ಪ್ರತಿನಿತ್ಯವೂ ಚಳ್ಳಕೆರೆ ನಗರದ ಹಲವಾರು ಬಾರ್‍ಗಳಲ್ಲಿ ಸೂರ್ಯ ಹುಟ್ಟುವ ಮುನ್ನವೇ ಮದ್ಯವನ್ನು ಖರೀದಿಸಿ ಕುಡಿಯಬಹುದಾಗಿದೆ. ಬೆಳ್ಳಂಬೆಳಗ್ಗಯೇ ಕುಡಿಯುವುದರಿಂದ ಕುಡಿತಕ್ಕೆ ಒಳಗಾದವರು ರಸ್ತೆಯಲ್ಲಿ ಅವಾಚ್ಯಶಬ್ದಗಳಿಂದ ಬೈಯುತ್ತಾ ಓಡಾಡುತ್ತಿದ್ದು, ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗಿದೆ.

       ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಬಾರ್‍ಗಳ ಸಮಯ ಪಾಲನೆ ಬಗ್ಗೆ ಗಮನಹರಿಸುವಂತೆ ಮೌಖಿಕವಾಗಿ ಒತ್ತಾಯಿಸಿದ್ದರೂ ಇದುವರೆಗೂ ಯಾವುದೇ ಅಧಿಕಾರಿ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಬೆಳಗಿನ ವೇಳೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸಹ ವಾಯುವಿಹಾರಕ್ಕೆ ಹೋಗಿ ಬರುವ ಸಂದರ್ಭದಲ್ಲಿ ಎದುರಿಗೆ ಬರುವ ಕುಡುಕರು ಅವಾಚ್ಯಶಬ್ದಗಳಿಂದ ಮಾತನಾಡುವುದು ಇರಿಸು, ಮುರಿಸು ಉಂಟು ಮಾಡುತ್ತಿದೆ. ಇಂತಹ ಮದ್ಯಪ್ರಿಯರನ್ನು ನಿಯಂತ್ರಿಸಲು ಅಬಕಾರಿ ಇಲಾಖೆ ಬಾರ್‍ಗಳ ಕೆಲಸದ ವೇಳೆಯ ಮೇಲೆ ನಿಬಂಧನೆಯನ್ನು ಹೇರಬೇಕಿದೆ.

       ಇಲಾಖೆಯ ಸೂಚನೆಯಂತೆ ಎಲ್ಲಾ ಬಾರ್‍ಗಳು ಕಾರ್ಯನಿರ್ವಹಿಸುವಲ್ಲಿ ಇಂತಹ ತೊಂದರೆ ಎದುರಾಗುವುದಿಲ್ಲ. ಅಬಕಾರಿ ಇಲಾಖೆ ನಿಯಮದ ಪ್ರಕಾರ ಬೆಳಗ್ಗೆ 10ರಿಂದ ರಾತ್ರಿ 10 ಗಂಟೆವರೆಗೂ ಮಾತ್ರ ಪರವಾನಿಗೆ ಪಡೆದ ಮದ್ಯದ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲು ಅವಕಾಶವಿರುತದೆ. ಅದೂ ಸಹ ಅಬಕಾರಿ ಇಲಾಖೆಯ ನಿಯಮದಡಿಯೇ ನಡೆಯಬೇಕಿದೆ. ಆದರೆ, ಮದ್ಯದ ಅಂಗಡಿ ಮಾಲೀಕರು ಇಲಾಖೆಯ ಕಾನೂನನ್ನು ಅಲಕ್ಷಿಸಿ ಬೆಳಗ್ಗೆ 5 ರಿಂದಲೇ ಮದ್ಯ ಮಾರಾಟ ಪ್ರಾರಂಭಿಸಿ ರಾತ್ರಿ 12 ಆದರೂ ಮುಂದುವರೆಸುತ್ತಲೇ ಇರುತ್ತಾರೆ. ಕುಡಿತದ ಚಟಕ್ಕೆ ಒಳಗಾದವರು ಬೆಳಗಿನ ಜಾವದಿಂದ ರಾತ್ರಿ ತನಕ ನಿರಂತರವಾಗಿ ಮದ್ಯವನ್ನು ಸೇವಿಸುವ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.

         ಆದರೆ, ಅಬಕಾರಿ ಇಲಾಖೆ ಅಧಿಕಾರಿಗಳು ನಗರಮಟ್ಟದ ಬಾರ್‍ಗಳು ನಿಯಮಗಳನ್ನು ಉಲ್ಲಂಘಿಸಿ ವ್ಯಾಪಾರ ಮಾಡುತ್ತಿದ್ದರೂ ಅವುಗಳ ಬಗ್ಗೆ ಕ್ರಮ ಕೈಗೊಳ್ಳಲು ಸಾಧ್ಯವಾಗದೇ ಇರುವುದು ಸೋಜಿಗದ ಸಂಗತಿಯಾಗಿದೆ. ಅಧಿಕಾರಿಗಳ ನಿರ್ಲಕ್ಷತನದಿಂದಲೇ ಬೆಳಗಿನ ವೇಳೆಯಲ್ಲಿ ಬಾರ್‍ಗಳು ಪ್ರಾರಂಭವಾಗುತ್ತಿವೆ ಎಂಬುವುದು ಸಾರ್ವಜನಿಕರ ಆರೋಪವಾಗಿದೆ.

         ಈ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ನಿಯಮ ಉಲ್ಲಂಘಿಸಿ ಬೆಳಗಿನ ಸಂದರ್ಭದಲ್ಲಿ ವ್ಯಾಪಾರ ಮಾಡುವ ಬಾರ್‍ಗಳ ಮೇಲೆ ಕಾನೂನು ಕ್ರಮ ಕೈಗೊಂಡಲ್ಲಿ ಮಾತ್ರ ಜನತೆ ಶಾಂತಿ ಇಂದ ಇರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳುವರೆ ಕಾದು ನೋಡಬೇಕಿದೆ.

       ಗ್ರಾಮಗಳ ಅಂಗಡಿಗಳಲ್ಲಿ ಸಿಗುವ ಮದ್ಯ :- ತಾಲ್ಲೂಕಿನ ಬಹುತೇಕ ಗ್ರಾಮಗಳ ಸಣ್ಣ ಪುಟ್ಟ ಟೀ ಅಂಗಡಿ, ಹೋಟೆಲ್‍ಗಳಲ್ಲೂ ಸಹ ಮದ್ಯ ಯಾವಾಗಬೇಕಾದರೂ ಸಿಗುತ್ತಿದೆ. ಈ ಬಗ್ಗೆ ಹಲವಾರು ಬಾರಿ ತಾಲ್ಲೂಕು ಕಚೇರಿಗೆ ವಿವಿಧ ಗ್ರಾಮಗಳ ಗ್ರಾಮಸ್ಥರು, ಮಹಿಳಾ ಸಂಘಟನೆಗಳು ತಹಶೀಲ್ದಾರ್‍ಗೆ ಮನವಿ ನೀಡಿ ಕ್ರಮಕ್ಕೆ ಒತ್ತಾಯಿಸಿದ್ದರೂ ನಿರೀಕ್ಷಿತ ಮಟ್ಟಕ್ಕೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮತ್ತೆ ಗ್ರಾಮೀಣ ಭಾಗಗಳಲ್ಲಿ ಹೆಗ್ಗಿಲ್ಲದ ಮದ್ಯ ಮಾರಾಟದ ದಂದೆ ನಡೆಯುತ್ತಿದೆ. ಕಳೆದ ತಿಂಗಳು ಚುನಾವಣೆ ಹಿನ್ನೆಲೆಯಲ್ಲಿ ಮಾತ್ರ ಅಬಕಾರಿ ಇಲಾಖೆ ಅಧಿಕಾರಿಗಳು ಗ್ರಾಮೀಣ ಪ್ರದೇಶದ ಕೆಲವು ಕಡೆ ದಾಳಿ ನಡೆಸಿ ಅಕ್ರಮ ಮದ್ಯ ಮಾರಾಟ ಪತ್ತೆ ಹಚ್ಚಿ ಕ್ರಮಕೈಗೊಂಡಿದ್ದರು. ನಂತರ ಚುನಾವಣೆ ಮುಗಿದ ಹಿನ್ನೆಲೆಯಲ್ಲಿ ಮತ್ತೆ ಈ ದಂದೆ ಮುಂದುವರೆದಿದ್ದು, ಅಬಕಾರಿ ಇಲಾಖೆ ಮಾತ್ರ ಕ್ರಮ ಕೈಗೊಳ್ಳದೆ ಕೈಕಟ್ಟಿಕುಳಿತಿದೆ ಎಂಬುವುದು ಸಾರ್ವಜನಿಕರ ಆರೋಪವಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link