ಭದ್ರಾ ಕಾಲುವೆ ಸೇತುವೆ ಪುನರ್ ನಿರ್ಮಾಣಕ್ಕೆ ಆಗ್ರಹ

ದಾವಣಗೆರೆ :

   ತಾಲೂಕಿನ ಅಣಬೇರು ಗ್ರಾಮದ ಸುತ್ತಲೂ ಭದ್ರಾ ಕಾಲುವೆ ಹಾದು ಹೋಗಿದ್ದು, ಈ ಕಾಲುವೆಯ ಅಕ್ಕ ಪಕ್ಕದ ಹಳ್ಳಿಗಳಿಗೆ ಹೊಲಗದ್ದೆಗಳಿಗೆ ಮತ್ತು ಜಿಲ್ಲಾ ಮುಖ್ಯರಸ್ತೆಗೆ ಹೊಂದಿಕೊಂಡಿರುವಂತೆ ನಿರ್ಮಿಸಿರುವ ಸೇತುವೆ ಕುಸಿಯುವ ಹಂತದಲ್ಲಿರುವ ಕಾರಣಕ್ಕೆ, ಈ ಸೇತುವೆಗಳ ಪುನರ್ ನಿರ್ಮಾಣ ಮಾಡಬೇಕೆಂದು ಗ್ರಾಮ ಪಂಚಾಯತ್ ಸದಸ್ಯ ಅಣಬೇರು ಶಿವಮೂರ್ತಿ ಆಗ್ರಹಿಸಿದ್ದಾರೆ.

    ಅಣಬೇರು ಗ್ರಾಮದ ಸುತ್ತಮುತ್ತದ ಕಾಲುವೆಗೆ ಹೊಂದಿಕೊಂಡಿರುವಂತೆ, 1960ರಲ್ಲಿ ಒಟ್ಟು ಐದು ಸೇತುವೆಗಳನ್ನು ನಿರ್ಮಿಸಲಾಗಿದ್ದು, ಈ ಪೈಕಿ ಕಳೆದ ಎರಡು ವರ್ಷಗಳ ಹಿಂದೆ ಒಂದು ಸೇತುವೆ ಕುಸಿದು ಬಿದಿದ್ದು, ಇನ್ನುಳಿದ ನಾಲ್ಕು ಸೇತುವೆಗಳು ಕುಸಿದು ಬೀಳುವ ಹಂತದಲ್ಲಿವೆ. ಆದ್ದರಿಂದ ಸಂಬಂಧಪಟ್ಟ ನೀರಾವರಿ ಇಲಾಖೆಯ ಸಚಿವರು, ಜಿಲ್ಲೆಯ ಸಂಸದರು ಹಾಗೂ ಮಾಯಕೊಂಡ ಕ್ಷೇತ್ರದ ಶಾಸಕರು ಹೊಸ ಸೇತುವೆಗಳ ನಿರ್ಮಾಣಕ್ಕೆ ಆಸಕ್ತಿ ವಹಿಸಿ, ಅನುದಾನ ಬಿಡುಗಡೆ ಗೊಳಿಸಲು ಮುಂದಾಗಬೇಕೆಂದು ಅವರು ಮನವಿ ಮಾಡಿದ್ದಾರೆ.

    ಕುಸಿಯುವ ಹಂತದಲ್ಲಿರುವ ಜಿಲ್ಲಾ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಸೇತುವೆಯ ಮೇಲೆ ಪ್ರತಿನಿತ್ಯ ನೂರಾರು ಲಾರಿಗಳು, 50 ಟನ್ನಿನಷ್ಟು ಭಾರದ ಎಂ-ಸ್ಯಾಂಡ್, ನೀರು ಮತ್ತು ಮಣ್ಣು ಹೇರಿಕೊಂಡು ಸಂಚರಿಸುತ್ತಿದ್ದು, ಆಗ ಸೇತುವೆಯೇ ಕಂಪಿಸುವ ಅನುಭವವಾಗುತ್ತದೆ. ಈ ಸೇತುವೆ ಬಿದ್ದರೆ ಸುಮಾರು 50 ಹಳ್ಳಿಗಳಿಗೆ ಅಂದರೆ, ಚಿತ್ರದುರ್ಗ, ಹೊಸದುರ್ಗ, ತ್ಯಾವಣಿಗಿ, ಚನ್ನಗಿರಿ ಮಾರ್ಗವಾಗಿ ಹೋಗುವ ವಾಹನಗಳಿಗೆ ಮತ್ತು ಜನರಿಗೆ ತುಂಬಾ ತೊಂದರೆಯಾಗಲಿದೆ ಎಂದು ಅವರು ಆರೋಪಿಸಿದ್ದಾರೆ.

     ಮೂರು ದನಗಳೊಂದಿಗೆ ರೈತ ಸಂಘದ ಪೂಜಾರ್ ಶಿವಲಿಂಗಪ್ಪ ಹೋಗುತ್ತಿದ್ದ ಸಂದರ್ಭದಲ್ಲಿ ಒಂದು ಸೇತುವೆ ಕುಸಿದು ಬಿದ್ದು, ಸೊಂಟ ಮುರಿದುಕೊಂಡು ಒಂದು ತಿಂಗಳು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ನಿತ್ಯವು ಸಾರ್ವಜನಿಕರು ಜೀವ ಭಯದಲ್ಲಿಯೇ ಓಡಾಡುತ್ತಿದ್ದು, ಈ ಸೇತುವೆಗಳು ಮೃತ್ಯುಕೂಪಗಳಾಗಿ ಮಾರ್ಪಡುವ ಅಪಯಾವೂ ಇದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

      ಈಗಾಗಲೇ ಒಂದು ಸೇತುವೆ ಬಿದ್ದಿರುವುದರಿಂದ ನಲ್ಕುಂದ, ಅಣಬೇರು, ಖ್ಯಾತನಹಳ್ಳಿ, ಶಂಕರನಹಳ್ಳಿ ಹೊಲ ಮತ್ತು ಗ್ರಾಮಗಳಿಗೆ ಹೋಗಿ ಬರಲು 5 ಕಿ.ಮೀ. ಸುತ್ತವರಿದು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸೇತುವೆ ಬಿದ್ದು ಈಗಾಗಲೇ ಒಂದು ವರ್ಷ ಕಳೆದಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಹ ಜಾಣ ಕಿವುಡು ಪ್ರದರ್ಶಿಸುತ್ತಿದ್ದಾರೆಂದು ಅಣಬೇರು ಶಿವಮೂರ್ತಿ ಕಿಡಿಕಾರಿದ್ದಾರೆ.

       ಈ ಕಾಲುವೆಗೆ ಹೊಂದಿಕೊಂಡಿರುವ ನಮ್ಮ ಗ್ರಾಮದ ಪಕ್ಕದ ಚನ್ನಗಿರಿ ತಾಲೂಕಿನ ಮೆದಿಕೆರೆ ಮತ್ತು ಉಪ್ಪನಾಯಕನಹಳ್ಳಿಯ ಗ್ರಾಮಗಳಿಗೆ ಅನುದಾನ ಬಿಡುಗಡೆ ಮಾಡಿ, ಕಳೆದ ವರ್ಷ ಹೊಸ ಸೇತುವೆಗಳನ್ನು ನಿರ್ಮಿಸಿದ್ದಾರೆ. ಆದರೆ, ನಮ್ಮ ಗ್ರಾಮದ ಹೊಸ ಸೇತುವೆಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡದೆ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಎನ್ನುವ ಹಾಗೆ ನೀರಾವರಿ ಇಲಾಖೆಯ ಮಂತ್ರಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ.

      ಆದ್ದರಿಂದ ದೊಡ್ಡ ಅವಘಡಗಳು ಸಂಭವಿಸಿ ಪ್ರಾಣ ಹಾನಿ ಆಗುವ ಮುನ್ನ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನಹರಿಸಿ ಹೊಸ ಸೇತುವೆಗಳ ನಿರ್ಮಾಣಕ್ಕೆ ಮುಂದಾಗಬೇಕೆಂದು ಗ್ರಾಮದ ಮುಖಂಡರುಗಳಾದ ಕೆ.ಸಿ. ರಾಜಪ್ಪ, ಎಸ್. ಪಾಲಾಕ್ಷಪ್ಪ, ಪಿ. ಆನಂದಪ್ಪ, ಎ.ಎಂ. ನಂದೀಶ್ವರಯ್ಯ, ಜೆ.ಆರ್. ಸುರೇಶ್, ಎ.ಕೆ. ಮಂಜಪ್ಪ, ಎಸ್. ದಾದಾಪೀರ್, ಎ.ಎನ್. ಪರಮೇಶ್ವರಪ್ಪ ಮತ್ತಿತರರು ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link