ಹೂವಿನಹಡಗಲಿ :
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ತಾಲೂಕಿನಾದ್ಯಾಂತ ಸಂಪೂರ್ಣವಾಗಿ ವಿಫಲಗೊಂಡಿದೆ ಎಂದು ತಾ.ಪಂ. ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಎಸ್.ಹಾಲೇಶ ಆರೋಪಿಸಿದರು.
ಅವರು ತಾ.ಪಂ. ಮಲ್ಲಿಗೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. 2014-15ನೇ ಸಾಲಿನಲ್ಲಿ ಕಾಮಗಾರಿ ಆದೇಶ ನೀಡಿದರು ಕೂಡಾ ಈವರೆಗೂ ನಾಗತಿಬಸಾಪುರ ತಾ.ಪಂ. ಕ್ವೇತ್ರದ ವ್ಯಾಪ್ತಿಯ ದೇವಗೊಂಡನಹಳ್ಳಿ ಮತ್ತು ನಾಗತಿಬಸಾಪುರ ಗ್ರಾ.ಪಂ ವ್ಯಾಪ್ತಿಯ ಹಳ್ಳಿಗಳಿಗೆ ಈವರೆಗೂ ಸದರಿ ಯೋಜನೆಯಡಿ ಕುಡಿಯುವ ನೀರು ಜನತೆಗೆ ತಲುಪಿಸದೇ ಇರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು. ಯೋಜನೆಯ ಸಮಗ್ರ ಮಾಹಿತಿಗಾಗಿ ತಂಡವನ್ನು ರಚಿಸಿ, ಲೋಪದೋಷವನ್ನು ಸರಿಪಡಿಸುವಂತೆ ಹಾಲೇಶ ಆಗ್ರಹಿಸಿದಾಗ, ಸಭೆಯು ಈ ಕುರಿತು ಸಮಿತಿ ರಚನೆಗೆ ನಿರ್ಣಯವನ್ನು ಕೈಗೊಂಡಿತು.
2017-18ನೇ ಸಾಲಿನಲ್ಲಿ ತ್ರಿಚಕ್ರವಾಹನ ಖರೀದಿಗಾಗಿ ಪಂಚಾಯತ್ ರಾಜ್ ಇಂಜಿನೀಯರಿಂಗ್ ಉಪವಿಭಾಗದಿಂದ ಟೆಂಡರ್ ಕರೆಯಲು ವಿಳಂಭವಾದ್ದರಿಂದ 15 ಲಕ್ಷ ರೂ ವಾಪಾಸ್ ಪಡೆದಿರುವ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ತಾ.ಪಂ. ವ್ಯವಸ್ಥಾಪಕ ಬಸವನಗೌಡರವರು, ಎಇಇಯವರ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಮಾಹಿತಿ ನೀಡಿದ ಜಿ.ಪಂ. ಎಇಇ ಹನುಮಂತಪ್ಪ, ಸಮಯದ ಅಭಾವದಿಂದ ಟೆಂಡರ್ ಕರೆಯಲು ಆಗದ ಕಾರಣ, ಹಣವಾಪಾಸ್ ಹೋಗಿದೆ ಎಂದು ಸಮಜಾಯಿಷಿ ನೀಡಿದರು. ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಇಲಾಖೆಯ ಬಗ್ಗೆ ಸಾಕಷ್ಟು ಆರೋಪಗಳು ಕೇಳಿಬಂದವು. ಶುದ್ಧ ಕುಡಿಯುವ ನೀರಿನ ಘಟಕ, ಬಹುತೇಕ ಗ್ರಾಮಗಳಲ್ಲಿ ಸಮರ್ಪವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಆದರೂ ಕೂಡಾ ಅಧಿಕಾರಿಗಳ ಮತ್ತು ಗುತ್ತಿಗೆದಾರರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಬಹುತೇಕ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಇಲಾಖೆಯ ಎಇಇ ಜಯರಾಮ್, ಉತ್ತರಿಸಿ, ಕೆಲವೊಂದು ಗ್ರಾಮಗಳಲ್ಲಿ ಲೋಪದೋಷಗಳಾಗಿದ್ದು, ಅವುಗಳನ್ನು ಸರಿಪಡಿಸಿಕೊಳ್ಳುತ್ತೇವೆ . ಗ್ರಾ.ಪಂ.ಗಳಿಗೆ ಹಸ್ತಾಂತರಿಸಿದ್ದೇವೆ. ನಿರ್ವಹಣೆಯನ್ನು ಕೂಡಾ ಗ್ರಾ.ಪಂ.ನವರು ಕೈಗೊಳ್ಳಬೇಕಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾ.ಪಂ. ಅಧ್ಯಕ್ಷೆ ಕೆ.ಶಾರದಮ್ಮ ಮಾತನಾಡಿ, ಇಲಾಖಾವಾರು ಪ್ರಗತಿ ವರದಿ ನೀಡುವ ಅಧಿಕಾರಿಗಳ ವಿಳಂಭದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. 10 ದಿನಕ್ಕೂ ಮುಂಚಿತವಾಗಿ ನಿಮಗೆ ಸಮರ್ಪಕವಾದ ಪ್ರಗತಿ ವರದಿಯನ್ನು ನೀಡುವಂತೆ ಸೂಚಿಸಿದರು ಕೂಡಾ ಕೆಲವರು ಸಭೆಯ ದಿನಾಂಕದಂದು ಕೂಡಾ ವರದಿಯನ್ನು ನೀಡಿಲ್ಲ. ಇದೇ ರೀತಿ ನಿರ್ಲಕ್ಷ್ಯ ಮುಂದುವರೆದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಲೋಕೋಪಯೋಗಿ ಇಲಾಖೆಯಿಂದ ಬೆಟ್ಟದ ಮಲ್ಲೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆ ಕಾಮಗಾರಿಯನ್ನು ಕೈಗೊಂಡಿದ್ದು, ಕಾಮಗಾರಿ ಸಂಪೂರ್ಣವಾಗಿ ಕಳಪೆಯಿಂದ ಕೂಡಿದೆ ಎಂದರು.
ತಾಲೂಕಿನ ತುಂಬಿನಕೇರಿ ದೊಡ್ಡತಾಂಡ, ತುಂಬಿನಕೇರಿ ಸಣ್ಣತಾಂಡ, ಕಾಳೇನಹಳ್ಳಿ ಗ್ರಾಮಗಳಲ್ಲಿ ಕುಡಿಯಲು ನೀರು ಯೋಗ್ಯವಲ್ಲದೇ, ಪ್ಲೋರೈಡ್ ಅಂಶವನ್ನು ಒಳಗೊಂಡಿರುತ್ತದೆ, ಈ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಬೇಕೆಂದು ಹೇಳಿದರು.
ನೂತನವಾಗಿ ತಾಲೂಕು ಪಂಚಾಯಿತಿಗೆ ಸರ್ಕಾರದ ನಾಮಮಾತ್ರ ಸದಸ್ಯರಾಗಿ ಚೀಟಿ ಎತ್ತುವ ಮೂಲಕ 5 ಗ್ರಾಮ ಪಂಚಾಯಿತಿಯ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ತಾಲೂಕಿನ ನಂದಿಹಳ್ಳಿ, ಪಶ್ಚಿಮಕಾಲ್ವಿ, ಇಟ್ಟಿಗಿ, ಸೋವೇನಹಳ್ಳಿ, ಮಕರಬ್ಬಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರುಗಳನ್ನು ಆರಿಸಲಾಯಿತು.ಉಪಾಧ್ಯಕ್ಷೆ ಪುಷ್ಪ, ಸ್ಥಾಯಿಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ