ಬೆಂಗಳೂರು
ಸಾಲ ಪಡೆದ ಹಣಕ್ಕೆ ಬಡ್ಡಿ ನೀಡದಿದ್ದರಿಂದ ಲಾಡ್ಜ್ನಲ್ಲಿ ಕೂಡಿ ಹಾಕಿ ಆಟೋ ಚಾಲಕನೊಬ್ಬನಿಗೆ ಕಿರುಕುಳ ನೀಡಿದ ಘಟನೆ ನೆಲಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನೆಲಮಂಗಲದ ಆಟೋ ಚಾಲಕ ವಿನಯ್ ಕುಮಾರ್ ಫೈನಾನ್ಸಿಯರ್ ಎಸ್ಎಲ್ಎನ್ ನವೀನ್ ನಿಂದ 10 ವರ್ಷಗಳ ಹಿಂದೆ 35 ಸಾವಿರ ರೂಗಳನ್ನು ಸಾಲ ಪಡೆದು ಪ್ರತಿ ತಿಂಗಳು ಬಡ್ಡಿ ಕಟ್ಟುತ್ತಿದ್ದರು ಆದರೆ ಇತ್ತೀಚೆಗೆ ಬಡ್ಡಿ ಹಣ ನೀಡುವುದನ್ನು ನಿಲ್ಲಿಸಿದ್ದರಿಂದ ಲಾಡ್ಜ್ನಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಿದ್ದಾರೆ.
ಈ ಕುರಿತು ವಿನಯ್ ಕುಮಾರ್ ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಆಕೆಯ ಜೊತೆಗೆ ಲಾಡ್ಜ್ಗೆ ಆಗಮಿಸಿದ ಪೊಲೀಸರು, ಪರಿಶೀಲನೆ ನಡೆಸಿ ವಿನಯ್ ಕುಮಾರ್ ನನ್ನು ಬಂಧನ ಮುಕ್ತಗೊಳಿಸಿದ್ದಾರೆ. ಯಾರು ನಿನ್ನನ್ನು ಕೂಡಿ ಹಾಕಿದ್ದು ಎಂದು ಪೊಲೀಸರು ಪ್ರಶ್ನಿಸಿದಾಗ ವಿನಯ್ ಕುಮಾರ್, ಭಯದಿಂದ ಆರೋಪಿಗಳ ಬಗ್ಗೆ ಮಾಹಿತಿ ನೀಡಲು ಹಿಂದೇಟು ಹಾಕಿದ್ದಾರೆ.
ಇತ್ತ ಕಣ್ಣೀರು ಹಾಕುತ್ತಿದ್ದ ಪತ್ನಿ, ನಮಗೆ ಎರಡು ತಿಂಗಳು ಅವಕಾಶ ಕೊಡಿ. ಅಸಲು ಹಾಗೂ ಬಡ್ಡಿಯನ್ನು ಕೊಡುತ್ತೇವೆ ಎಂದು ಮನವಿ ಮಾಡಿಕೊಂಡಿದ್ದೇವು. ಆದರೆ ಈಗ ಪತಿಯನ್ನ ತಂದು ಕೂಡಿ ಹಾಕಿ ಕಿರುಕುಳ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ನಗೆ ಗೊತ್ತಿಲ್ಲದಂತೆ ಪತಿ ವಿನಯ್ ಕುಮಾರ್ ಫೈನಾನ್ಸಿಯರ್ ನವೀನ್ ಬಳಿ ಒಟ್ಟು 35 ಸಾವಿರ ರೂ. ಪಡೆದಿದ್ದರು. ಈ ವಿಚಾರವನ್ನು ಇತ್ತೀಚೆಗಷ್ಟೇ ನನಗೆ ಹೇಳಿದ್ದರು. ನಾನು ಕೂಲಿ ಮಾಡಿ ಕೂಡಿಟ್ಟಿದ್ದ 10 ಸಾವಿರ ರೂ. ಕೊಟ್ಟಿದ್ದೇನೆ. ಉಳಿದ ಹಣಕ್ಕೆ ಬಡ್ಡಿ ನೀಡುತ್ತಿದ್ದು, ಎಲ್ಲ ಹಣವನ್ನು ಮರು ಪಾವತಿ ಮಾಡಲು ಕಾಲಾವಕಾಶ ಕೇಳಿದ್ದೇವು. ಆದರೆ ನವೀನ್ ಮನೆಗೆ ಬಂದು ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದರು. ಈಗ ಪತಿಯನ್ನೇ ಕೂಡಿ ಹಾಕಿದ್ದಾರೆ ಎಂದು ವಿನಯ್ ಕುಮಾರ್ ಪತ್ನಿ ಆರೋಪಿಸಿದ್ದಾರೆ.
ನಿನ್ನೆ ರಾತ್ರಿ 8 ಗಂಟೆಗೆ ನನ್ನನ್ನು ಎಳೆದುಕೊಂಡು ಬಂದು ಕೂಡಿ ಹಾಕಿದ್ದಾರೆ ಎಂದು ಪತಿ ವಿನಯ್ ಕುಮಾರ್ ಫೋನ್ ಮಾಡಿ ಹೇಳಿದ್ದರು. ಅವರು ಫೋನ್ ಮಾಡಿದಾಗ ರಾತ್ರಿ 12 ಗಂಟೆಯಾಗಿತ್ತು. ಮನೆಯಲ್ಲಿ ಒಬ್ಬಳೆ ಇದ್ದಿದ್ದರಿಂದ ಪೊಲೀಸ್ ಠಾಣೆಗೆ ಹೋಗಲು ಸಾಧ್ಯವಾಗಲಿಲ್ಲ ಎಂದು ಅಳಲು ತೋಡಿಕೊಂಡಿದ್ದು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








