ಬಂಡೀಪುರ : ಪ್ರಧಾನಿ ಮೋದಿ ಭೇಟಿ ಬಳಿಕ ಪ್ರವಾಸಿಗರ ಸಂಖ್ಯೆ, ಆದಾಯ ಹೆಚ್ಚಳ

ಚಾಮರಾಜನಗರ

   ಸುಮಾರು 1024 ಸಾವಿರ ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ವಿಸ್ತರಿಸಿರುವ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ದಕ್ಷಿಣ ಭಾರತದ ಅತಿ ದೊಡ್ಡ ಸಂರಕ್ಷಿರತ ಪ್ರದೇಶವೂ ಆಗಿದೆ. 191 ಕ್ಕೂ ಹೆಚ್ಚು ಹುಲಿಗಳು, 1116 ಕ್ಕೂ ಹೆಚ್ಚು ಆನೆಗಳು ಸೇರಿದಂತೆ ಚಿರತೆ, ಕರಡಿ, ಜಿಂಕೆ, ಕಾಡೆಮ್ಮೆ, ಮೊದಲಾದ ವನ್ಯಜೀವಿಗಳ ಆವಾಸ ಸ್ಥಾನವಾಗಿದೆ.

   ಇತ್ತೀಚಿನ ವರ್ಷಗಳಲ್ಲಿ, ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಭೇಟಿ ನಂತರ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು ಪರಿಸರ ಪ್ರವಾಸೋದ್ಯಮವು ಸಾಕಷ್ಟು ಅಭಿವೃದ್ಧಿಯಾಗಿದೆ. ಸಫಾರಿ ಹಾಗೂ ಹಸಿರು ಪ್ರವೇಶ ಶುಲ್ಕದಿಂದ 2023-24 ನೇ ಸಾಲಿನಲ್ಲಿ 19 ಕೋಟಿ ರೂಪಾಯಿ ಆದಾಯ ಹರಿದು ಬಂದಿತ್ತು. ಈ ಬಾರಿ ಅಂದರೆ 2024-25 ನೇ ಸಾಲಿನಲ್ಲಿ 22 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಬರುವ ನಿರೀಕ್ಷೆ ಇದೆ ಎಂದು ಡಿಸಿಎಫ್ ಪ್ರಭಾಕರನ್ ತಿಳಿಸಿದ್ದಾರೆ. 

   ಪರಿಸರ ಪ್ರವಾಸೋದ್ಯಮದಿಂದ ಬರುವ ಹಣದಿಂದ ಸಿಬ್ಬಂದಿ ವೇತನ, ವನ್ಯಜೀವಿಗಳ ಆವಾಸಸ್ಥಾನ ಅಭಿವೃದ್ಧಿ, ಲಂಟಾನ ಹಾಗೂ ಸೆನ್ನಾ ಕಳೆ ಗಿಡ ತೆಗೆಯಲು, ಅಗ್ನಿಶಾಮಕ ಉಪಕರಣಗಳಿಗೆ ಬಳಸಿಕೊಳ್ಳುವ ಮೂಲಕ ಹುಲಿ ಸಂರಕ್ಷಿತ ಪ್ರದೇಶದ ನಿರ್ವಹಣೆ ಮಾಡಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. 

   ಬಂಡಿಪುರದ ಅರಣ್ಯ ಹಾಗೂ ಇಲ್ಲಿನ ವನ್ಯಜೀವಿಗಳ ವೀಕ್ಷಣೆಗೆಂದು ನಿತ್ಯ ನೂರಾರು ಪ್ರವಾಸಿಗರು ಬರತೊಡಗಿದ್ದಾರೆ. ಹೀಗೆ ಬರುವ ಪ್ರವಾಸಿಗರಿಗೆ ಇಲ್ಲಿ ಖಂಡಿತ ನಿರಾಸೆಯಾಗುವುದಿಲ್ಲ. ಸಫಾರಿಗೆ ತೆರಳುವ ಪ್ರವಾಸಿಗರು ಹಸಿರ ಸಿರಿಯನ್ನು ಕಣ್ತುಂಬಿಕೊಂಡು ವನ್ಯಜೀವಿಗಳನ್ನು ನೋಡಿ ಖುಷಿಪಡುತ್ತಾರೆ. ಒಟ್ಟಾರೆ ತನ್ನ ವನ್ಯಸಂಪತ್ತಿನಿಂದ ಕಂಗೊಳಿಸುತ್ತಿರುವ ಬಂಡೀಪುರ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದು ವರ್ಷ ವರ್ಷ ಆದಾಯವು ಹೆಚ್ಚಾಗುತ್ತಿದೆ. 

   ಬಂಡೀಪುರ ಅರಣ್ಯವನ್ನು ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯವೆಂದು ಘೋಷಿಸಿ 50 ವರ್ಷಗಳು ಸಂದ ಸಂದರ್ಭದಲ್ಲಿ 2023ರ ಏಪ್ರಿಲ್ 9ರಂದು ಪ್ರಧಾನಿ ನರೇಂದ್ರ ಮೋದಿ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿ ಸಫಾರಿ ನಡೆಸಿದ್ದರು. ಈ ವಿಚಾರ ದೇಶ ಮಟ್ಟದಲ್ಲಿ ಸುದ್ದಿಯಾಗಿತ್ತು. ನಂತರ ಬಂಡೀಪುರಕ್ಕೆ ಭೇಟಿ ನೀಡುವವರ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿತ್ತು.

Recent Articles

spot_img

Related Stories

Share via
Copy link