ಬೆಂಗಳೂರು:
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಗುರುವಾರ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್”ಗೆ ಅನುಮತಿ ನೀಡಿರುವುದನ್ನು ಖಂಡಿಸಿ, ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಪರ ನಿಲ್ಲುವ ಬಗ್ಗೆ ಒಕ್ಕೊರಲ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ನಿಂತಿದ್ದು, ಇದೀಗ ಶಾಸಕರೂ ನಿಲ್ಲುವ ಸಾಧ್ಯತೆಗಳಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಇಂದು ಸಂಜೆ 4 ಗಂಟೆಗೆ ಸಿಎಲ್’ಪಿ ಸಭೆ ನಡೆಯಲಿದೆ. ಈಗಾಗಲೇ ಈ ಸಂಬಂಧ ಪಕ್ಷದ ಎಲ್ಲಾ ಶಾಸಕರಿಗಳಿಗೂ ಸಿಎಲ್’ಪಿ ಕಾರ್ಯರ್ಶಿಯು ಮಾಹಿತಿ ರವಾನಿಸಿದ್ದು, ತಪ್ಪದೆ ಹಾಜರಾಗುವಂತೆ ಸೂಚಿಸಿದ್ದಾರೆ.
ಸಭೆಯಲ್ಲಿ ಮುಡಾ ಹಗರಣ ಪ್ರಕರಣದ ವಿಚಾರ ಚರ್ಚೆಗೆ ಬರಲಿದೆ. ಪ್ರಕರಣದಲ್ಲಿ ಮುಖ್ಯಮಂತ್ರಿಯವರ ನೇರವಾದ ಯಾವುದೇ ಪಾತ್ರವಿಲ್ಲದ ಬಗ್ಗೆ ಹಾಗೂ ವಿವೇಚನಾರಹಿತವಾಗಿ ರಾಜ್ಯಪಾಲರು ಪ್ರಾಸಿಕ್ಯೂಷನ್’ಗೆ ಅನುಮತಿ ನೀಡಿರುವ ಕುರಿತು ಎಲ್ಲಾ ಶಾಸಕರಿಗೂ ಮನವರಿಕೆ ಮಾಡಿಕೊಟ್ಟು ಈ ವಿಚಾರದಲ್ಲಿ ಎಲ್ಲರೂ ಮುಖ್ಯಮಂತ್ರಿಗಳ ಪರವಾಗಿ ಗಟ್ಟಿಯಾಗಿ ನಿಲ್ಲಲು ನಿರ್ಣಯ ತೆಗೆದುಕೊಳ್ಳಲಾಗುತ್ತದೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.
ಸಿಎಂ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಕಾರಣ, ಜನಪ್ರತಿನಿಧಿ ನ್ಯಾಯಾಲಯವು ತನಿಖೆಗೆ ನಿರ್ದೇಶಿಸಿದರೂ ಮತ್ತು ಎಫ್‌ಐಆರ್ ದಾಖಲಿಸಿದರೂ ಸಿದ್ದರಾಮಯ್ಯ ಅವರು ಹುದ್ದೆಯಲ್ಲಿ ಮುಂದುವರಿಸಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಪಕ್ಷದ ಶಾಸಕರೊಬ್ಬರು ಹೇಳಿದ್ದಾರೆ.
ಸಿಎಲ್‌ಪಿ ಸಭೆಯಲ್ಲಿ, ಸಿಎಂ ರಾಜೀನಾಮೆಗೆ ಆಗ್ರಹಿಸುತ್ತಿರುವ ಪ್ರತಿಪಕ್ಷ ಬಿಜೆಪಿ-ಜೆಡಿಎಸ್‌ಗೆ ಸೆಡ್ಡು ಹೊಡೆಯುವ ತಂತ್ರದ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಗಳಿವೆ.ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸುವ ಅವರ ಷಡ್ಯಂತ್ರವನ್ನು ವಿಫಲಗೊಳ್ಳುವಂತೆ ಮಾಡಲಾಗುವುದು ಎಂದು ಮತ್ತೊಬ್ಬ ಶಾಸಕ ತಿಳಿಸಿದ್ದಾರೆ.ಹೈಕಮಾಂಡ್ ಆದೇಶ ಹಾಗೂ ಸಚಿವ ಸಂಪುಟ ನಿರ್ಧಾರವನ್ನು ಎಲ್ಲಾ 136 ಕಾಂಗ್ರೆಸ್ ಶಾಸಕರು ಬೆಂಬಲಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ನಾಯಕತ್ವ ವಿಚಾರದಲ್ಲಿ ಕುತ್ತು ಎದುರಾದರೆ, ಮುಖ್ಯಮಂತ್ರಿ ಸ್ಥಾನ ವಹಿಸಿಕೊಳ್ಳುವಂತೆ ಕೆಲ ನಾಯಕರು ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಆದರೆ, ಇದೀಗ ಆ ನಾಯಕರೂ ಕೂಡ ಹೈಕಮಾಂಡ್ ಮಾತಿಗೆ ಮಣಿಯುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ.
ಶಾಸಕಾಂಗ ಸಭೆಗೂ ಮುನ್ನ ಇಂದು ಸಚಿವ ಸಂಪುಟ ಸಭೆ ನಡೆಯಲಿದ್ದು, ಸಭೆಯ ಅಧ್ಯಕ್ಷತೆಯನ್ನು ಸಿದ್ದರಾಮಯ್ಯ ಅವರು ವಹಿಸಲಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ವಿವಿಧ ಇಲಾಖೆಗಳಿಂದ ಮೂವತ್ನಾಲ್ಕು ವಿಷಯಗಳು ಚರ್ಚೆಗಳಿ ಬರಲಿವೆ ಎಂದು ಹೇಳಲಾಗುತ್ತಿದೆ.ಹಿಂದಿನ ಕ್ಯಾಬಿನೆಟ್ ಸಭೆಯಲ್ಲಿ ಈಗಾಗಲೇ ಸಿಎಂಗೆ ಬೆಂಬಲ ನೀಡಿದ್ದೇವೆ, ಮುಡಾ ಪ್ರಕರಣವನ್ನು ಮತ್ತೊಮ್ಮೆ ಚರ್ಚಿಸುವ ಅಗತ್ಯವಿಲ್ಲ ಎಂದು ಸಚಿವರೊಬ್ಬರು ಹೇಳಿದ್ದಾರೆ.ಎಫ್‌ಐಆರ್ ದಾಖಲಾದರೂ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬಾರದು ಎಂಬ ಸಂದೇಶವನ್ನು ಪಕ್ಷದ ಹೈಕಮಾಂಡ್‌ಗೆ ರವಾನಿಸಲು ಸಿದ್ದರಾಮಯ್ಯ ಸಂಪುಟದ ಕೆಲವು ಸಚಿವರು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಚಿವರಾದ ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಕೃಷ್ಣ ಬೈರೇಗೌಡ, ಕೆ.ಎನ್.ರಾಜಣ್ಣ, ಸಂತೋಷ್ ಲಾಡ್ ಸೇರಿದಂತೆ ಹಲವರು ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ಗೂ ಮುನ್ನವೇ ಸಮರ್ಥಿಸಿಕೊಡಿದ್ದರು.ನಮ್ಮ ಹಿರಿಯ ನಾಯಕ ಅಭಿಷೇಕ್ ಮನು ಸಿಂಗ್ವಿ ಅವರೇ ಹೈಕೋರ್ಟ್‌ನಲ್ಲಿ ಸಿದ್ದರಾಮಯ್ಯ ಅವರನ್ನು ಪ್ರತಿನಿಧಿಸುತ್ತಿದ್ದು, ಯಾವುದೇ ಪರಿಸ್ಥಿತಿ ಎದುರಾದರೂ ಹೈಕಮಾಂಡ್ ಸಿದ್ದರಾಮಯ್ಯ ಅವರ ಜೊತೆಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಸಂತೋಷ್ ಲಾಡ್ ಅವರು ಹೇಳಿದ್ದಾರೆ.