ನವದೆಹಲಿ:
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿ ಒಂಬತ್ತು ಭಯೋತ್ಪಾದಕ ತರಬೇತಿ ಕೇಂದ್ರಗಳನ್ನು ಭಾರತ ಹೊಡೆದುರುಳಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಮೋದಿ ಕೇಂದ್ರ ಸಚಿವ ಸಂಪುಟ ಮತ್ತು ಭದ್ರತೆ ಕುರಿತ ಸಂಪುಟ ಸಮಿತಿ ಸಭೆ ಕರೆದಿದ್ದಾರೆ. ಸಂಪುಟ ಸಭೆ ಕರೆದಿದ್ದು, ಸಭೆಯಲ್ಲಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದು, ಬಳಿಕ ಮುಂದಿನ ಕಾರ್ಯಚರಣೆ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಆಪರೇಶನ್ ಸಿಂಧೂರ್ ಹೆಸರಿನಲ್ಲಿ ಭಾರತದ ವಾಯುಸೇನೆ ಪಾಕಿಸ್ತಾನದ ಗಡಿಯೊಳಗೆ 9 ಕಡೆ ನಡೆಸಿದ ನಿಖರ ಕ್ಷಿಪಣಿ ಹಾಗೂ ವಾಯುದಾಳಿಗಳನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ರಾತ್ರಿಯಿಡೀ ಎಚ್ಚರವಿದ್ದು ಗಮನಿಸಿದ್ದಾರೆ ಎಂದು ತಿಳಿದು ಬಂದಿದೆ. ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಅವರು ಟ್ವೀಟ್ ಮಾಡಿ ಜಗತ್ತು ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಭಾರತೀಯ ಸೇನೆ ಇಂದು ಬೆಳಗ್ಗೆ 10 ಗಂಟೆಗೆ ಮಹತ್ವದ ಸುದ್ದಿಗೋಷ್ಠಿ ಕರೆದಿದೆ. ಸುದ್ದಿಗೋಷ್ಠಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಸೇನಾ ಮುಖ್ಯಸ್ಥರು ಭಾಗಿಯಾಗುವ ಸಾಧ್ಯತೆ ಇದೆ. ಸದ್ಯ ದೇಶದಾದ್ಯಂತ ಅಲರ್ಟ್ ಘೋಷಣೆ ಮಾಡಲಾಗಿದ್ದು, ಜಮ್ಮು, ಸಾಂಬಾ, ಕಥುವಾ, ರಾಜೌರಿ ಮತ್ತು ಪೂಂಚ್‌ನಲ್ಲಿರುವ ಎಲ್ಲಾ ಶಾಲೆಗಳು, ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳು ಇಂದು ಮುಚ್ಚಲ್ಪಡುತ್ತವೆ. ಪಠಾಣ್‌ಕೋಟ್‌ನಲ್ಲಿರುವ ಎಲ್ಲಾ ಶಾಲೆಗಳು 72 ಗಂಟೆಗಳ ಕಾಲ ಮುಚ್ಚುವಂತೆ ಆದೇಶ ಹೊರಡಿಸಿದೆ.
ಏ . 22 ರಂದು ನಡೆದ ಪಹಲ್ಗಾಮ್ ದಾಳಿಯಲ್ಲಿ 25 ಭಾರತೀಯರು ಹಾಗೂ ಓರ್ವ ನೇಪಾಳದ ಪ್ರಜೆಯೊಬ್ಬ ಮೃತಪಟ್ಟಿದ್ದ. ಅದರ ಪ್ರತೀಕಾರಕ್ಕೆ ಈಗ ಭಾರತ ವೈಮಾನಿಕ ದಾಳಿ ನಡೆಸಿದೆ. ಕೊಟ್ಪಿ, ಮುಜಾಫರ್‌ಬಾದ್, ಬಹವಲ್ಪುರ್ ಬಳಿ ಏರ್‌ಸ್ಟ್ರೈಕ್ ನಡೆದಿದೆ. ಭಾರತದ ದಾಳಿಯನ್ನು ಖಚಿತಪಡಿಸಿರುವ ಪಾಕಿಸ್ತಾನ, ಭಾರತೀಯ ದಾಳಿಯಲ್ಲಿ 9 ಸ್ಥಳಗಳು ಹಾನಿಗೊಳಗಾಗಿವೆ. ದಾಳಿಯಲ್ಲಿ 100 ಕ್ಕೂ ಅಧಿಕ ಜನರು ಮೃತಪಟ್ಟಿರುವುದು ತಿಳಿದು ಬಂದಿದೆ.
