ಹೈದರಾಬಾದ್ :
ವ್ಯಕ್ತಿಯೋರ್ವ ತನಗೆ ಕೊರೊನಾ ವೈರಸ್ ಇದೆಯೆಂದು ತಿಳಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆಂಧ್ರದ ಚಿತ್ತೂರಿನ ಬಾಲಕೃಷ್ಣಯ್ಯ (50) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇತ್ತೀಚೆಗೆ ಹೃದಯದ ತಪಾಸಣೆಗಾಗಿ ಬಾಲಕೃಷ್ಣಯ್ಯ ತಿರುಪತಿಯ ಆಸ್ಪತ್ರೆಯೊಂದಕ್ಕೆ ಹೋಗಿದ್ದ ಸಂದರ್ಭ ಆತನಿಗೆ ನೆಗಡಿಯ ಲಕ್ಷಣಗಳಿರುವುದನ್ನು ಗಮನಿಸಿದ ವೈದ್ಯರು ಮಾಸ್ಕ್ ಧರಿಸುವಂತೆ ಸಲಹೆ ನೀಡಿದ್ದರು.
ಇದರಿಂದ ಅವರು ತನಗೆ ಕೊರೋನ ವೈರಸ್ ಬಾಧಿಸಿದೆ ಎಂದು ತಪ್ಪಾಗಿ ಅರ್ಥೈಸಿಕೊಂಡು ಕುಟುಂಬಸ್ಥರ ಬಳಿ ಬಂದು, ನನಗೆ ಕೊರೊನಾ ವೈರಸ್ ಇದೆ. ನನ್ನ ಬಳಿ ಯಾರೂ ಬರಬೇಡಿ. ಯಾರೂ ನನ್ನ ಕೈಯನ್ನು ಸಹ ಹಿಡಿದುಕೊಳ್ಳಬೇಡಿ ಎಂದರು. ಅಲ್ಲದೆ ತನ್ನ ಬಳಿ ಬರುತ್ತಿದ್ದ ಜನರಿಗೆ ಕಲ್ಲು ಹೊಡೆದು ಮನೆಯೊಳಗೆ ಹೋಗುತ್ತಿದ್ದರು.
ಅಂತರ್ಜಾಲದಲ್ಲಿ ಕೊರೋನ ವೈರಸ್ ಕುರಿತ ಹಲವು ವೀಡಿಯೋ ನೋಡಿ ತನಗೂ ಅದೇ ರೋಗದ ಲಕ್ಷಣಗಳು ಬಾಧಿಸಿವೆ ಎಂದು ಅಂದುಕೊಂಡ ಬಾಲಕೃಷ್ಣಯ್ಯ ತನ್ನಿಂದ ತನ್ನ ಕುಟುಂಬ ಹಾಗೂ ಗ್ರಾಮಸ್ಥರು ತೊಂದರೆಗೀಡಾಗಬಾರದೆಂದು ಕುಟುಂಬ ಸದಸ್ಯರನ್ನೆಲ್ಲಾ ಮನೆಯೊಳಗೆ ಕೂಡಿ ಹಾಕಿ ತಾನು ಹತ್ತಿರದ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಸೋಮವಾರ ನಡೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ