ಬೆಂಗಳೂರು
ಐಎಂಎ ಹೂಡಿಕೆ ವಂಚನೆ ಪ್ರಕರಣದ ಬೆನ್ನಲ್ಲೇ ಹಣ ದ್ವಿ-ಗುಣ ಮಾಡುವುದಾಗಿ ನಂಬಿಸಿ ಸುಮಾರು 2500 ಮಂದಿಗೆ 20 ಕೋಟಿ ರೂ ವಂಚನೆ ನಡೆಸಿರುವ ಮತ್ತೊಂದು ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.
ಹಣ ದ್ವಿ-ಗುಣ ಮಾಡುವ ಹೆಸರಿನಲ್ಲಿ 20 ಕೋಟಿ ವಂಚನೆ ನಡೆಸಿದ್ದ ಕೇರಳದ ಕಣ್ಣೂರು ಜಿಲ್ಲೆಯರಾಜೇಶ ಕೆ.ಎಸ್ (41)ನನ್ನು ಬಂಧಿಸಿದ್ದ ಕಬ್ಬನ್ಪಾರ್ಕ್ ಪೊಲೀಸರುಹರಿಯಾಣದ ಜಿಂದ್ ಜಿಲ್ಲೆಯ ನಿವಾಸಿ ಸುನಿಲ್ ಕುಮಾರ್ ಚೌಧರಿ (36), ಕೇರಳದ ಕಣ್ಣೂರು ಜಿಲ್ಲೆಯ ನಿವಾಸಿ ರಿಜೇಶ ಪಿ (36) ಎಂಬ ಇನ್ನಿಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಸಂಜೀವ್ ಕುಮಾರ್ ಎಂಬವರು ಕಳೆದ ಸೆ.2ರಂದು ನೀಡಿದ ದೂರಿನ ಮೇರೆಗೆ ಕಬ್ಬನ್ಪಾರ್ಕ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಅದೇ ದಿನ ಕಬ್ಬನ್ಪಾರ್ಕ್ ಪೊಲೀಸರು ಠಾಣಾ ವ್ಯಾಪ್ತಿಯಲ್ಲಿರುವ ಯು ಬಿ ಸಿಟಿಯ ಓಕ್ವುಡ್ ಹೋಟೆಲ್ಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಡಬ್ಲ್ಯುಎಎಂ ಸರ್ವೀಸ್ ಲಿಮಿಟೆಡ್ ಎಂಬ ಹೆಸರಿನ ಕಂಪನಿಯನ್ನು ಯು.ಬಿ ಸಿಟಿಯಲ್ಲಿ ತೆರೆದು ಈ ಕಂಪನಿಯಲ್ಲಿ ಹಣ ಹೂಡಿದರೆ ದ್ವಿಗುಣ ಗೊಳಿಸಿಕೊಡುವುದಾಗಿ ನಂಬಿಸುತ್ತಿದ್ದರು.ಸಾರ್ವಜನಿಕರು 25,000 ರೂ.ಗಳನ್ನು ಕಟ್ಟಿದರೆ ವಾರಕ್ಕೆ 1,250 ರೂ.ನಂತೆ 20 ವಾರಗಳು ಹಣ ಬರುತ್ತದೆ. 21ನೇ ವಾರ 25,000 ರೂ.ಗಳು ವಾಪಸ್ ನೀಡುವುದಾಗಿ ಮತ್ತು 50,000 ರೂ.ಗಳನ್ನು ಕಟ್ಟಿದರೆ ವಾರಕ್ಕೆ 2500 ರೂ.ನಂತೆ 20 ವಾರಗಳು ಹಣ ಬರುತ್ತದೆ. 21ನೇ ವಾರ 50,000 ರೂ.ಗಳು ವಾಪಸ್ ನೀಡುವುದಾಗಿ ಭರವಸೆ ನೀಡಲಾಗಿತ್ತು.
ಅದೇ ರೀತಿ 1,00,000 ರೂ.ಗಳನ್ನು ಕಟ್ಟಿದರೆ ವಾರಕ್ಕೆ 5000 ರೂ.ನಂತೆ 20 ವಾರಗಳು ಹಣ ಬರುತ್ತದೆ. 21ನೇ ವಾರ 1,00,000 ರೂ.ಗಳು ವಾಪಸ್ ನೀಡುವುದಾಗಿ ಹೇಳಿ ನಂಬಿಸಿ ವಂಚಿಸಿ ಅಕ್ರಮವಾಗಿ ಹಣಗಳಿಸುತ್ತಿದ್ದರು ಎಂದು ವಿಚಾರಣೆಯಿಂದ ತಿಳಿದುಬರುತ್ತದೆ.
ಈ ಕಂಪನಿಯ ಮುಖ್ಯ ಕಚೇರಿ ಗುರುಗಾಂವ್ನಲ್ಲಿದ್ದು, ಹಾಗೂ ಕಂಪನಿಯ ಹೆಚ್ಚಿನ ಗ್ರಾಹಕರನ್ನು ಆರೋಪಿ ರಿಜೇಶ ಪಿ.ಎಂಬಾತ ಕೇರಳದಿಂದ ಕರೆತಂದು ಸೇರಿಸಿರುವುದಾಗಿ ತಿಳಿದುಬಂದಿದೆ.ಆರೋಪಿಗಳು ಸದ್ಯ ಪೊಲೀಸ್ ಬಂಧನದಲ್ಲಿದ್ದು, ಇವರನ್ನು ಬಂಧಿಸುವಲ್ಲಿ ಕಬ್ಬನ್ಪಾರ್ಕ್ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಹಾಗೂ ಕಬ್ಬನ್ಪಾರ್ಕ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ ಎಂದು ಡಿಸಿಪಿ ಚೇತನ್ಸಿಂಗ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








