ಬೆಂಗಳೂರು
ಮಾಡಿಕೊಂಡಿದ್ದ ಸಾಲ ತೀರಿಸಲು ಉದ್ಯಮಿ ಪುತ್ರನ ಅಪಹರಣಕ್ಕೆ ವಿಫಲ ಯತ್ನ ನಡೆಸಿ ಅವರ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿ ಭಯಭೀತಿ ಹುಟ್ಟಿಸಿ ಪರಾರಿಯಾಗಿದ್ದ ತಮಿಳುನಾಡಿದ ಇಬ್ಬರು ದುಷ್ಕರ್ಮಿಗಳಿಗೆ ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಗುಂಡು ಹೊಡೆದು ಬಂಧಿಸುವಲ್ಲಿ ಸೋಲದೇವನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ತಮಿಳುನಾಡಿನ ತಿರ್ನಲ್ವೇಲಿ ಮೂಲದ ಮೊಹ್ಮದ್ ರಿಯಾಜ್ (21)ಎಡಗಾಲು ಮೊಹ್ಮದ್ ಬಾಸಿತ್ (23)ಬಲಗಾಲಿಗೆ ಪೊಲೀಸರ ಗುಂಡೇಟು ತಗುಲಿ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆನ್ನಟ್ಟಿ ಹಿಡಿಯಲು ಬಂದ ಪೊಲೀಸ್ ಸಿಬ್ಬಂದಿಗಳಾದ ಶ್ರೀನಿವಾಸ್ ಹಾಗೂ ಮಲ್ಲಿಕಾರ್ಜುನ್ ಮೇಲೆ ಹಲ್ಲೆ ಆರೋಪಿಗಳು ಹಲ್ಲೆ ನಡೆಸಿದ್ದು ಅವರಿಗೆ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಇನ್ಸ್ಟ್ರಾಗ್ರಾಮ್ ನೋಡಿ ಕೃತ್ಯ
ದಾಸರಹಳ್ಳಿಯ ನೀಲಂಮಹೇಶ್ವರಂ ರಸ್ತೆಯ ಶುದ್ಧ ನೀರಿನ ಪೂರೈಕೆ ಘಟಕದ ಮಾಲೀಕನಾಗಿದ್ದ ಶ್ರೀನಿವಾಸ್ ಅವರ ಪುತ್ರ ಶರತ್ ಪಿಯುಸಿ ಮುಗಿಸಿದ ನಂತರ ತಂದೆಯ ಜತೆಯಲ್ಲೇ ವ್ಯವಹಾರದಲ್ಲಿ ತೊಡಗಿದ್ದು ಇನ್ಸ್ಟ್ರಾಗ್ರಾಮ್ನಲ್ಲಿ ದುಬಾರಿ ಬೈಕ್ಗಳು, ಕಾರಿನ ಜತೆಗಿರುವ ಫೋಟೊಗಳನ್ನು ಅಪ್ಲೋಡ್ ಮಾಡುತ್ತ ಶ್ರೀಮಂತನೆಂದು ಬಿಂಬಿಸಿಕೊಳ್ಳುತ್ತಿದ್ದ.
ಇದನ್ನು ನೋಡಿದ ಅಕ್ಕಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳಾದ ದಾಸರಹಳ್ಳಿ ಮುಖ್ಯರಸ್ತೆಯ ಬೈಲಪ್ಪ ಸರ್ಕಲ್ನ ಮೊಹ್ಮದ್ ರಿಯಾಜ್ ಹಾಗೂ ಮಹೇಶ್ವರಿ ನಗರದ ಮೊಹ್ಮದ್ ಬಾಸಿತ್ ಸೇರಿ ಶರತ್ನನ್ನು ಅಪಹರಿಸಿ ಹಣ ದೋಚಿದರೆ ತಮ್ಮಿಬ್ಬರ ಬಡ ಕುಟುಂಬದವರು ಜೀವನ ನಿರ್ವಹಣೆಗಾಗಿ ಸಾಲ ಮಾಡಿಕೊಂಡಿದ್ದ ಸಾಲ 15 ಲಕ್ಷವನ್ನು ತೀರಿಸಬಹುದು ಎಂದ ಕೆಟ್ಟ ಯೋಜನೆ ಹಾಕಿದ್ದರು.
ಸಾಲ ತೀರಿಸಲು ಶರತ್ನನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಡುವುದು ಅವರ ಉದ್ದೇಶವಾಗಿತ್ತು. ತಾವು ಕೆಲಸ ಮಾಡುತ್ತಿದ್ದ ಅಂಗಡಿಯ ಸ್ವಲ್ಪದೂರದಲ್ಲಿ ಶ್ರೀನಿವಾಸ್ ಅವರು ನೀರಿನ ಘಟಕವಿಟ್ಟುಕೊಂಡು ವಾಸಿಸುತ್ತಿರುವುದನ್ನು ಆರೋಪಿಗಳು ಪತ್ತೆ ಹಚ್ಚಿದ್ದರು.
ವಿಫಲ ಯತ್ನ
ಕಳೆದ 10 ದಿನಗಳ ಹಿಂದೆ ಶರತ್ನನ್ನು ಅಪಹರಿಸಲು ವಿಫಲ ಯತ್ನ ನಡೆಸಿದ್ದ ಆರೋಪಿಗಳು, ಸೋಮವಾರ ರಾತ್ರಿ ಶ್ರೀನಿವಾಸ್ ಅವರ ಮೊಬೈಲ್ಗೆ ಕರೆ ಮಾಡಿ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು, ಹಣ ನೀಡದಿದ್ದರೆ ನಿಮ್ಮ ಮಗನನ್ನು ಅಪಹರಿಸಿ ವಾಹನ ಹಾಗೂ ಮನೆಗೆ ಬೆಂಕಿ ಹಚ್ಚುವ ಬೆದರಿಕೆ ಹಾಕಿದ್ದರು.
ಶ್ರೀನಿವಾಸ್ ಹಣ ನೀಡಲು ಒಪ್ಪದಿದ್ದರಿಂದ ಆಕ್ರೋಶಗೊಂಡ ಆರೋಪಿಗಳು ರಾತ್ರಿ 1.30ರ ವೇಳೆ ನೀಲಂಮಹೇಶ್ವರಂ ರಸ್ತೆಯ ಶ್ರೀನಿವಾಸ್ ಅವರ ಮನೆಯ ಬಳಿ ಬಂದು ಮುಂಭಾಗ ನಿಲ್ಲಿಸಿದ್ದ 2 ಡಿಯೋ, 1 ಜುಪಿಟರ್, 1 ಸ್ಪ್ಲೆಂಡರ್ ಸೇರಿ 4 ವಾಹನಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು.
ಬೆಂಕಿಯು ಶ್ರೀನಿವಾಸ್ ಅವರ ಮನೆಗೂ ವ್ಯಾಪಿಸಿ ಮುಂಭಾಗವಿದ್ದ ವಸ್ತುಗಳು ಸುಟ್ಟು ಹೋಗಿದ್ದ ಶ್ರೀನಿವಾಸ್ ಅವರಲ್ಲದೇ ಅಕ್ಕಪಕ್ಕದಲ್ಲಿ ಮನೆಯವರಲ್ಲಿ ಆತಂಕ ಸೃಷ್ಠಿಯಾಗಿತ್ತು.ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಬಾಗಲಗುಂಟೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು ಎಂದು ಶಶಿಕುಮಾರ್ ತಿಳಿಸಿದರು.
ತೋಪಿನಲ್ಲಿ ಪತ್ತೆ
ಆರೋಪಿಗಳು ಸೋಲದೇವನಹಳ್ಳಿಯ ಆಚಾರ್ಯ ಕಾಲೇಜಿನ ಹಿಂಭಾಗದ ನೀಲಗಿರಿ ತೋಪಿನಲ್ಲಿ ಇರುವ ಮಾಹಿತಿಯಾಧರಿಸಿ ಕಾರ್ಯಾಚರಣೆ ಕೈಗೊಂಡ ಸೋಲದೇವನಹಳ್ಳಿ ಇನ್ಸ್ಪೆಕ್ಟರ್ ಶಿವಸ್ವಾಮಿ ಮತ್ತವರ ತಂಡ ಕೂಡಲೇ ಅಲ್ಲಿಗೆ ಧಾವಿಸಿದೆ. ಪೊಲೀಸರನ್ನು ನೋಡಿದ ಕೂಡಲೇ ಪರಾರಿಯಾಗಲು ಯತ್ನಿಸಿದ ರಿಯಾಜ್ ಹಾಗೂ ಬಾಸಿತ್ ಬೆನ್ನಟ್ಟಿ ಬಂದ ಪೊಲೀಸ್ ಸಿಬ್ಬಂದಿಗಳಾದ ಶ್ರೀನಿವಾಸ್ ಹಾಗೂ ಮಲ್ಲಿಕಾರ್ಜುನ್ ಮೇಲೆ ಹಲ್ಲೆ ನಡೆಸಿದ್ದಾರೆ.
ಶರಣಾಗುವಂತೆ ಶಿವಸ್ವಾಮಿ ಅವರು ಸೂಚಿಸಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದರಾದರೂ ಮತ್ತೆ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದರಿಂದ ಮತ್ತೆರೆಡು ಸುತ್ತು ಗುಂಡು ಹಾರಿಸಿದ್ದು, ಅವೆರೆಡೂ ಎಡ ಹಾಗೂ ಬಲಗಾಲಿಗೆ ತಗುಲಿದ ರಿಯಾಜ್ ಹಾಗೂ ಬಾಸಿತ್ ಸ್ಥಳದಲ್ಲೇ ಕುಸಿದು ಬಿದಿದ್ದಾರೆ.
ಇಬ್ಬರನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿದ ಇನ್ಸ್ಪೆಕ್ಟರ್ ಶಿವಸ್ವಾಮಿ ಮತ್ತವರ ತಂಡಕ್ಕೆ ನಗದು ಬಹುಮಾನ ಕೊಡಿಸಲಾಗುವುದು ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








