ಬೆಂಗಳೂರು
“ ಅಡ್ಜೆಸ್ಟ್‍ಮೆಂಟ್ ರಾಜಕಾರಣ ಮಾಡುವುದನ್ನು ಕಲ್ಲಿಸಿದ್ದೇ ಬಿಜೆಪಿಯವರು. ಈಗ ಬಿಜೆಪಿಯವರೇ ನನ್ನ ಮೇಲೆ ಆರೋಪ ಮಾಡುವುದರಲ್ಲಿ ಯಾವ ಅರ್ಥವಿದೆ “ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಇಂದಿಲ್ಲಿ ಪ್ರಶ್ನಿಸಿದ್ದಾರೆ.
ಬೆಂಗಳೂರು-ಮೈಸೂರು ನಡುವೆ ರಸ್ತೆ ನಿರ್ಮಿಸುವ ನೈಸ್ ಯೋಜನೆಯನ್ನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ರದ್ದುಗೊಳಿಸುವ ಪ್ರಸ್ತಾಪವನ್ನು ನಾನು ಸಚಿವ ಸಂಪುಟದ ಮುಂದೆ ಮಂಡಿಸಿದಾಗ ಬಿಜೆಪಿ ಸಚಿವರು ಸಭೆಯನ್ನೇ ಬಹಿಷ್ಕರಿಸಿದ್ದರು. ಆಗವರು ಯಾರ ಜತೆ ಸೇರಿ ಹೊಂದಾಣಿಕೆ ರಾಜಕೀಯ ಮಾಡಿದರು? ನೈಸ್ ಯೋಜನೆಯನ್ನು ರದ್ದುಗೊಳಿಸಲು ಅಗತ್ಯವಾದ ಪ್ರಸ್ತಾವನೆಯನ್ನು ಸಂಪುಟದ ಮುಂದೆ ಮಂಡಿಸಿದಾಗ ಬಿಜೆಪಿಯ 16 – 17 ಮಂದಿ ಮಂತ್ರಿಗಳು ಸಚಿವ ಸಂಪುಟ ಸಭೆಯನ್ನೇ ಬಹಿಷ್ಕರಿಸಿದ್ದನ್ನು ಮರೆತಂತಿದೆ ಎಂದರು.
ಬಿಜೆಪಿ ನಾಯಕ ಸಿ.ಟಿ.ರವಿ ಅವರ ಹೆಸರನ್ನು ಉಲ್ಲೇಖಿಸದೆ, ನಾನು ವಿರೋಧ ಪಕ್ಷದಲ್ಲಿದ್ದಾಗ ನೈಸ್ ಹಗರಣದ ವಿರುದ್ಧ ಹೋರಾಡಿದ್ದರ ಬಗ್ಗೆ ಬಿಜೆಪಿ ನಾಯಕರೊಬ್ಬರು ಟೀಕಿಸಿದ್ದಾರೆ. ಅದೇನೋ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದೇನೆ ಎಂದು ಆರೋಪ ಮಾಡಿದ್ದಾರೆ.
ನೈಸ್ ಯೋಜನೆಗೆ ಸಂಬಂಧಿಸಿದಂತೆ ಸದನ ಸಮಿತಿ ವರದಿ ನೀಡಿರುವುದು ನಿಜ.ಆದರೆ ಅದನ್ನು ವಿಧಾನಮಂಡಲ ಇನ್ನೂ ಅಂಗೀಕರಿಸಿಲ್ಲ.ಅದು ಅಂಗೀಕಾರವಾದ ಕೂಡಲೇ ನೈಸ್ ಯೋಜನೆಗೆ ಸಂಬಂಧಿಸಿದಂತೆ ಏನು ಕ್ರಮ ಕೈಗೊಳ್ಳಬೇಕೋ?ಕೈಗೊಳ್ಳುತ್ತೇನೆ ಎಂದರು.
ಸರ್ಕಾರ ಅಸ್ತಿತ್ವಕ್ಕೆ ಬಂದು ಐದೂವರೆ ತಿಂಗಳುಗಳಷ್ಟೇ ಆಗಿದೆ.ಹೀಗಾಗಿ ಇನ್ನೂ ಸ್ವಲ್ಪ ಸಮಯ ಕೊಡಿ. ಏನೇನು ಮಾಡುತ್ತೇವೆ ಎಂದು ಕಾದು ನೋಡಿ.ತಪ್ಪು ಮಾಡಿದವರನ್ನು ರಕ್ಷಣೆ ಮಾಡುವ ಉದ್ದೇಶವೇ ಸರ್ಕಾರಕ್ಕಿಲ್ಲ ಎಂದು ಹೇಳಿದರು.
ಬಿಜೆಪಿ ನಾಯಕರು ಕುಮಾರಸ್ವಾಮಿ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ ಎನ್ನುವ ಬದಲು ಕುಮಾರಸ್ವಾಮಿ ಅವರಿಗೆ ಹೊಂದಾಣಿಕೆ ರಾಜಕೀಯ ಕಲಿಸಲು ನಾವೇ ಹೊರಟಿದ್ದೆವು ಎಂಬುದನ್ನು ನೆನಪಿಸಿಕೊಳ್ಳಬೇಕು ಎಂದರು.
ಇದಕ್ಕೂ ಮುನ್ನ ಕಾರ್ಯಕ್ರಮ ಒಂದರ ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಜನಾರ್ಧನ ರೆಡ್ಡಿ ವಿಚಾರವಾಗಿ ನಾನು ಮಾತನಾಡಲು ಇಚ್ಚಿಸುವುದಿಲ್ಲ. ಅವರು ಹೇಳಿದ್ದಕ್ಕೆಲ್ಲ ಉತ್ತರಿಸುತ್ತಾ ಹೋದರೆ ಮುಖ್ಯಮಂತ್ರಿ ಹುದ್ದೆಯ ಘನತೆಗೇ ಅಗೌರವ ಉಂಟು ಮಾಡಿದಂತೆ ಎಂದರು.
ಆಂಬಿಡೆಂಡ್ ಪ್ರಕರಣದಲ್ಲಿ ನಮ್ಮ ಸರ್ಕಾರ ವಿನಾಕಾರಣ ಯಾವುದರಲ್ಲೂ ಹಸ್ತಕ್ಷೇಪ ಮಾಡುವುದಿಲ್ಲ. ಅಧಿಕಾರಿಗಳಿಗೆ ಮುಕ್ತವಾದ ಅವಕಾಶ ನೀಡಲಾಗಿದೆ ಎಂದರು.
ಅವರು (ಜನಾರ್ದನರೆಡ್ಡಿ) ಹೇಳಿರುವ ಪುಣ್ಯಕೋಟಿ ಕತೆ ನನಗೆ ಗೊತ್ತಿಲ್ಲ. ನಾನು ಸೇಡು ತೀರಿಸಿಕೊಳ್ಳುವುದಾಗಿದ್ದರೆ 2007ರಲ್ಲೇ ಮಾಡಬಹುದಾಗಿತ್ತು. ಅಂತಹ ಕೆಲಸಕ್ಕೆ ನಾನು ಹೋಗುವುದಿಲ್ಲ. ಇನ್ನು ಒಂದೂವರೆ ಸಾವಿರ ಪೊಲೀಸ್ ಕಳಿಸಿದ್ದೆ ಎಂದು ಅವರು ಹೇಳುತ್ತಿದ್ದಾರೆ. ಅದರ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ರೈತರ ಸಮಸ್ಯೆಗಳನ್ನು ಪರಿಹರಿಸದಿದ್ದರೆ ಬೆಳಗಾವಿಯ ವಿಧಾನಮಂಡಲ ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ರೈತರ ಹೆಸರಿನಲ್ಲಿ ಕೆಲವರು ನೀಡಿರುವ ಎಚ್ಚರಿಕೆ ರೈತ ವಿರೋಧಿ ನಡವಳಿಕೆ ಎಂದ ಅವರು, ರೈತರ ಕಬ್ಬು ಬೆಳೆ ಬಾಕಿಯ ವಿಷಯ ಬಂದಾಗ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲೇ ಪರಿಹರಿಸಿದ್ದೇವೆ.ಆಗ ಸಿಹಿ ತಿಂದು ಸಂಭ್ರಮಿಸಿದವರು ಈಗ ಇನ್ನೇನೋ ಕಾರಣ ಹೇಳಿ ಅಧಿವೇಶನ ನಡೆಯಲು ಬಿಡುವುದಿಲ್ಲ ಅನ್ನುತ್ತಿರುವುದು ಸರಿಯಲ್ಲ ಎಂದರು.
ರೈತರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಧರಣಿ ಮಾಡಬೇಕಾದ ಅಗತ್ಯವೇನಿಲ್ಲ.ವಿಧಾನಸೌಧದ ಬಾಗಿಲು ಅವರಿಗಾಗಿ ಸದಾ ತೆರೆದಿರುತ್ತದೆ.ಬಂದು ತಮ್ಮ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರಬಹುದು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
