ಬೆಂಗಳೂರು
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ತಮ್ಮ ಮೇಲೆ ಕ್ರಿಮಿನಲ್ ಮೊಕದ್ದಮೆ ಇದ್ದಲ್ಲಿ ಕೂಡಲೇ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ನೀಡುವುದು ಕಡ್ಡಾಯವಾಗಿದೆ.
ತಮ್ಮ ಮೇಲೆ ಕ್ರಿಮಿನಲ್ ಮೊಕದ್ದಮೆಗಳಿದ್ದರೆ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ನೀಡಬೇಕು ಇಲ್ಲದಿದ್ದರೆ ಅಂತಹ ಅಭ್ಯರ್ಥಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್ ಶಂಕರ್ ಅವರು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭಾನುವಾರ ಎನ್.ಸಿ.ಸಿ. ಮಾನಿಟರಿಂಗ್ ತಂಡದ ಮುಖ್ಯಸ್ಥರಾಗಿರುವ ಮನೀಷ್ ಮುದ್ಗೀಲ್ ಅವರು ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು ಕ್ರಿಮಿನಲ್ ಮೊಕದ್ದಮೆ ಇರುವ ಅಭ್ಯರ್ಥಿಗಳು ಜಾಹೀರಾತು ನೀಡುವಂತೆ ಈಗಾಗಲೇ ಚುನಾವಣೆ ಆಯೋಗ ಸೂಚಿಸಿದ್ದರೂ ಇದೂವರೆಗೂ ಯಾವ ಅಭ್ಯರ್ಥಿಯು ಜಾಹೀರಾತನ್ನು ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕ್ರಿಮಿನಲ್ ಮೊಕದ್ದಮೆ ಪ್ರಕರಣ ಎದುರಿಸುತ್ತಿರುವ ಅಭ್ಯರ್ಥಿಗಳು 3 ದಿನಗಳ ಕಾಲ ಪತ್ರಿಕೆ ಮತ್ತು ಟಿ.ವಿ.ಗಳಲ್ಲಿ ಜಾಹೀರಾತು ನೀಡಲೇಬೇಕು.ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಪರವಾಗಿ ಸಭೆಯಲ್ಲಿದ್ದ ಅವರ ಬೆಂಬಲಿಗರು ಇದನ್ನು ತಮ್ಮ ಅಭ್ಯರ್ಥಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಎನ್.ಸಿ.ಸಿ. ಮಾನಿಟರಿಂಗ್ ತಂಡದ ಮುಖ್ಯಸ್ಥ ಮನೀಷ್ ಮುದ್ಗೀಲ್ ಅವರು ಚುನಾವಣೆ ಪ್ರಚಾರದ ವೇಳೆ ಮದ್ಯ ಮತ್ತು ಹಣದ ದುರ್ಬಳಕೆ ಆಗಬಾರದು. ಒಂದು ವೇಳೆ ಕಾನೂನು ಉಲ್ಲಂಘನೆ ಮಾಡಿದ್ದಲ್ಲಿ ಕ್ರಮಕೈಗೊಳ್ಳಲಾಗುವುದು ಹಗಲು ಮತ್ತು ರಾತ್ರಿ 60 ಚೆಕ್ ಪೋಸ್ಟ್ ಗಳಲ್ಲಿ ಅನುಮಾನ ಬಂದ ವಾಹನಗಳನ್ನು ತಡೆದು ತಪಾಸಣೆ ನಡೆಸಲಾಗಿದೆ. 13 ಲಕ್ಷ ಹಣ ಮತ್ತು 61 ಸಾವಿರ ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಮದ್ಯ ಮತ್ತು ಹಣದ ದುರ್ಬಳಕೆ ಕಂಡು ಬಂದಲ್ಲಿ 1950 ನಂಬರ್ ಗೆ ಅಭ್ಯರ್ಥಿಗಳು ಸೇರಿದಂತೆ ಯಾರು ಬೇಕಾದರೂ ದೂರು ಸಲ್ಲಿಸಬಹುದು ಎಂದು ಹೇಳಿದರು. ಸಭೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಚುನಾವಣಾ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
