ಗದಗ:
ಸರ್ವರಿಗೆ ಸಮ ಬಾಳು, ಸರ್ವರಿಗೂ ಸಮಪಾಲು ಎಂಬ ತತ್ವಕ್ಕೆ ಬಿಜೆಪಿ ಬದ್ಧ ಇದೆ. ಆದರೆ, ಕಾಂಗ್ರೆಸ್ ಮುಸ್ಲಿಂ ಬಹುಪಾಲು, ಇತರರಿಗೆ ಅಲ್ಪ ಪಾಲು ಎಂಬ ನೀತಿ ಅನುಸರಿಸುತ್ತಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆಗೆ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ತಿರುಗೇಟು ಕೊಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ, ಕ್ರೈಸ್ತ, ಸಿಖ್ ಹಾಗೂ ಬೌದ್ಧರು ನಮ್ಮ ದೇಶದ ಕರ್ನಾಟಕ ಪ್ರಜೆಗಳು. ನಾವು ಅಲ್ಪ ಸಂಖ್ಯಾತರಿಗೆ ಹಿಂದುಳಿದವರ ಬಗ್ಗೆ ಚಿಂತೆ ಮಾಡುತ್ತೇವೆ. ಸಮ ಬಾಳು, ಸಮಪಾಲು ಅನ್ನುವರು ತಮ್ಮ ಪಕ್ಷದಲ್ಲಿ ಪರಿಷತ್ ಸದಸ್ಯ, ರಾಜ್ಯಸಭಾ ಸದಸ್ಯ, ಕೇಂದ್ರದಲ್ಲಿ ಮಂತ್ರಿ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಇಬ್ಬರು ಕ್ರಿಶ್ಚಿಯನ್, ಮೂರು ಜನ ಮುಸ್ಲಿಮರಿಗೆ ಅಧಿಕಾರ ಕೊಡಿ ನೋಡೋಣ. ಆಗ ವಿಜಯೇಂದ್ರಗೆ ಸಮಬಾಳು, ಸಮಪಾಲು ಅಂತ ಮಾತನಾಡೋದು ಯೋಗ್ಯ ಎನಿಸುತ್ತದೆ ಎಂದು ಹೇಳಿದರು.
ಸಮ ಬಾಳು-ಸಮಪಾಲು ಎನ್ನುವವರು ಕುವೆಂಪು ನಾಡಗೀತೆ ಸರಿಯಾಗಿ ಓದಲಿ. ಯಾರು ಸೇರಿದರೆ ಶಾಂತಿ ತೋಟ ಆಗುತ್ತೆ ಎಂಬುದನ್ನು ಸರಿಯಾಗಿ ಓದಲಿ ಎಂದು ತಿರುಗೇಟು ನೀಡಿದರು. ಕೆಪಿಸಿಸಿ ಅಧ್ಯಕ್ಷ ಸ್ಥಾನ ಇಳಿಯುವ ಮೊದಲು ಶಕ್ತಿ ಪ್ರದರ್ಶನ ಕುರಿತು ಮಾತನಾಡಿ ಈ ಬಗ್ಗೆ ಅನೇಕ ಜನರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ ವಿಧಾನಸಭಾ ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಸುವಂತೆ ಸಚಿವರಿಗೆ ಸೂಚಿಸಲಾಗಿದೆ. ಇದನ್ನು ಮೊದಲು ಮಾಡಬೇಕು. ನಂತರ, ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗಿವೆ ಇದರ ಆಚರಣೆಯನ್ನೂಮಾಡಬೇಕು. ಇದನ್ನು ಸಹ ಮಾಡುತ್ತೇವೆಂದು ಹೇಳಿದರು.
ಅಲ್ಪಸಂಖ್ಯಾತ ಮೀಸಲಾತಿಯ ಮೂಲಕ ಕಾಂಗ್ರೆಸ್ ಸಂವಿಧಾನವನ್ನು ಉಲ್ಲಂಘಿಸಿದೆ ಎಂಬ ಬಿಜೆಪಿಯ ರವಿಶಂಕರ್ ಪ್ರಸಾದ್ ಅವರ ಟೀಕೆ ಕುರಿತು ಮಾತನಾಡಿ, ಮಾಧ್ಯಮಗಳು ಏನು ಹೇಳುತ್ತವೆಯೋ ಅದನ್ನು ನಾನು ಅನುಸರಿಸುವುದಿಲ್ಲ. ಅವರು ಏನು ಹೇಳಿದ್ದಾರೆಂದು ತಿಳಿದ ನಂತರ ಪ್ರತಿಕ್ರಿಯೆ ನೀಡುತ್ತೇನೆಂದು ಹೇಳಿದರು.
