ಹರಿಹರ
ತಾಲೂಕಿನ ಬೆಳ್ಳೂಡಿ ಬಳಿ ಇರುವ ಕಾರ್ಗಿಲ್ ಪ್ರೈವೇಟ್ ಇಂಡಿಯಾ ಲಿಮಿಟೆಡ್ ಕಂಪನಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ಲಕ್ಷ್ಮಣ ಅವರು ಭೇಟಿ ನೀಡಿ, ದುರ್ವಾಸನೆ ಮತ್ತು ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿದ ನಂತರ ಕಂಪನಿಯ ಪಕ್ಕದಲ್ಲಿರುವ ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠ ಬೆಳ್ಳೂಡಿ ಶಾಖಾ ಮಠದ ಆಶ್ರಯದಲ್ಲಿರುವ ಚಂದ್ರಗುಪ್ತ ಮೌರ್ಯ ಪಬ್ಲಿಕ್ ಶಾಲೆ ಹಾಗೂ ಕನಕ ಗುರುಪೀಠ ಶಾಖಾ ಮಠಕ್ಕೆ ಭೇಟಿ ನೀಡಿದರು.
ಈ ವೇಳೆ ಗುರು ಪೀಠದ ಜಗದ್ಗುರುಗಳಾದ ಶ್ರೀ ನಿರಂಜನಾನಂದ ಪುರಿ ಶ್ರೀಗಳು ಮಾತನಾಡಿ, ಕೆಲ ತಿಂಗಳುಗಳ ಹಿಂದೆಯೂ ಸಹ ಕಂಪನಿಯಿಂದ ಇದೇ ರೀತಿಯ ದುರ್ವಾಸನೆ ಬರುತ್ತಿತ್ತು, ಆಗ ಕಂಪನಿಯ ಮುಂಭಾಗದಲ್ಲಿ ನಮ್ಮ ಶ್ರೀಮಠದ ಮೂವರು ಶ್ರೀಗಳೊಂದಿಗೆ ಧರಣಿ ನಡೆಸಿದ್ದ ವೇಳೆ, ಮಾನ್ಯ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಾಸನೆ ನಿಯಂತ್ರಿಸಲು ಸೂಚಿಸಿದ್ದರು. ಜಿಲ್ಲಾಧಿಕಾರಿಗಳ ಸೂಚನೆ ಯಂತೆ ಕೆಲವು ತಿಂಗಳು ದುರ್ವಾಸನೆ ಕಡಿಮೆಯಾಗಿತ್ತು. ಕಂಪನಿಯ ಆಡಳಿತ ಮಂಡಳಿಯವರು ನ್ಯಾಯಾಲಯದಲ್ಲಿ ತಡೆ ತಂದು, ಮತ್ತೆ ಕಂಪನಿಯ ಕೆಲಸ ಮುಂದುವರೆಸುತ್ತಿದ್ದಾರೆ ಎಂದು ಹೇಳಿದರು.
ಕಂಪನಿಯಿಂದ ಹೊರಬರುತ್ತಿರುವ ದುರ್ವಾಸನೆ ನಿಲ್ಲದಿದ್ದರೆ, ಉಗ್ರ ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ಶ್ರೀಗಳು ತಿಳಿಸಿದರು.
ಕೆಲವು ದಿನಗಳಿಂದ ಮತ್ತೆ ದುರ್ವಾಸನೆ ಹೊರ ಸೂಸಲು ಪ್ರಾರಂಭವಾಗಿದೆ. ಎಂದಾಗ, ಪ್ರತಿಕ್ರಿಯಿಸಿದ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾದ ಲಕ್ಷ್ಮಣ್ ರವರು ನಮ್ಮ ಮಂಡಳಿಯ ವತಿಯಿಂದ ದುರ್ವಾಸನೆ ತಪಾಸಿಸುವ ಯಂತ್ರವನ್ನು ಕಂಪನಿಯ ಹಾಗೂ ಮಠದ ಸುತ್ತಮುತ್ತ ಅಳವಡಿಸಿ ಪರೀಕ್ಷಿಸಿ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಈ ವೇಳೆ ಮಂಡಳಿಯ ಕೆಲ ಸಿಬ್ಬಂದಿಗಳು ಶ್ರೀಮಠದ ಸದ್ಭಕ್ತರು ಹಾಗೂ ಶಾಲೆಯ ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
