ಫುಡ್‍ಪಾರ್ಕ್: ಸ್ಥಳೀಯರು ಬೆಳೆದ ಹಣ್ಣು-ತರಕಾರಿಗಳನ್ನು ಖರೀದಿಸುವುದರ ಜೊತೆಗೆ ನಿರುದ್ಯೋಗಿಗಳಿಗೆ ಕೆಲಸ ನೀಡಿ : ಜಿ ಎಸ್ ಬಿ

ತುಮಕೂರು

     ಕೇಂದ್ರ ಸರ್ಕಾರದ 48.05ಕೋಟಿ ರೂ.ಗಳ ಸಬ್ಸಿಡಿ ಪಡೆದು ಸ್ಥಾಪನೆಗೊಂಡಿರುವ ಫುಡ್‍ಪಾರ್ಕ್ ವತಿಯಿಂದ ಜಿಲ್ಲೆಯ ರೈತರು ಬೆಳೆಯುವ ಹಣ್ಣು, ತರಕಾರಿ, ಕಡಲೆಕಾಯಿ ಮತ್ತು ಸಿರಿಧಾನ್ಯಗಳನ್ನು ಖರೀದಿಸಿ ರೈತರ ಆರ್ಥಿಕಾಭಿವೃದ್ಧಿಯ ಜೊತೆಗೆ ನಿರುದ್ಯೋಗಿ ಯುವಕರಿಗೆ ಕೆಲಸ ಕೊಡುವ ಕೆಲಸ ಮಾಡಬೇಕಾಗಿದೆ ಎಂದು ಸಂಸದ ಜಿ.ಎಸ್. ಬಸವರಾಜು ಕರೆ ನೀಡಿದ್ದಾರೆ.

     ಅವರು ಇಂದು ತುಮಕೂರು ವಸಂತನರಸಾಪುರದ ಟೆಕ್ನೋ ಸ್ಪಾರ್ಕ್ ಇಂಡಸ್ಟ್ರೀಸ್ ಇಂಡಿಯಾ ಲಿಮಿಟೆಡ್‍ನಲ್ಲಿ ಕೈಗಾರಿಕಾ ಪ್ರದೇಶಾಭಿವೃದ್ಧಿ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡುತ್ತಿದ್ದರು.ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ 3ನೇ ಹಂತದಲ್ಲಿ 3500 ಎಕರೆ ಪ್ರದೇಶವನ್ನು ಅಭಿವೃದ್ಧಿಪಡಿಸಿ ಜಪಾನೀಸ್ ಕಂಪನಿಗೆ 500 ಎಕರೆ, ತುಮಕೂರು ಮಿಷಿನ್ ಟೂಲ್ಸ್ ಕಂಪನಿಗೆ 530 ಎಕರೆ, ಪವರ್‍ಗ್ರಿಡ್‍ಗೆ 110 ಎಕರೆ, ಫುಡ್‍ಪಾರ್ಕ್‍ಗೆ 102 ಎಕರೆ, ಹಾವೆಲ್ಸ್ ಕಂಪನಿಗೆ 60 ಎಕರೆ, ಹಿಮಾಲಯ ಡ್ರಗ್ಸ್‍ಗೆ 40 ಎಕರೆ, ವೆಕ್ಟಸ್ ಕಂಪನಿಗೆ 10 ಎಕರೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ನೀಡಲಾಗಿದೆ.

    ಈ ಕೈಗಾರಿಕೆಗಳಿಂದ ಸ್ಥಳೀಯ ಜನರ ಆರ್ಥಿಕ ಮಟ್ಟ ಸುಧಾರಿಸಲು ನೇರವಾಗಿ ರೈತರಿಂದ ಟಮೋಟೋ, ಆಲೂಗಡ್ಡೆ, ಮಾವಿನಹಣ್ಣು, ಹಲಸಿನ ಹಣ್ಣು ಮತ್ತು ಇತರೆ ತರಕಾರಿಗಳನ್ನು ಖರೀದಿಸಿ ಅವುಗಳ ಮೌಲ್ಯವರ್ಧನೆ ಮಾಡಿ ಗ್ರಾಹಕರಿಗೆ ತಲುಪಿಸುವ ಕೆಲಸ ಫುಡ್‍ಪಾರ್ಕ್‍ನಿಂದ ಆಗಬೇಕಿದೆ ಎಂದು ಅವರು ಹೇಳಿದರು.

    ತುಮಕೂರಿನ ಕೈಗಾರಿಕಾ ಪ್ರದೇಶಾಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಅನುದಾನ ಪಡೆಯಲು ಅವಕಾಶವಿದ್ದು, ಈ ಅನುದಾನವನ್ನು ಪಡೆಯುವಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಾಳಜಿವಹಿಸಿ ಯೋಜನೆಗಳ ರೂಪುರೇಷೆಗಳನ್ನು ಸಿದ್ಧಪಡಿಸಬೇಕಾಗಿದೆ ಎಂದು ಸಂಸದರು ಸಲಹೆ ಮಾಡಿದರು.

    ಕೈಗಾರಿಕಾ ಪ್ರದೇಶದಲ್ಲಿ ನಿರಂತರ ವಿದ್ಯುತ್, ಸಾಕಷ್ಟು ನೀರು ಸರಬರಾಜು ಮತ್ತು ರಸ್ತೆಗಳ ಅಭಿವೃದ್ಧಿಯ ಜೊತೆಗೆ ರೈಲ್ವೆ ಕಾರಿಡಾರ್, ಗೂಡ್ಸ್‍ಶೆಡ್ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ ಸಂಪರ್ಕಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಇದರ ಜೊತೆಗೆ ಮೆಟ್ರೋ ರೈಲ್ವೇ ಯೋಜನೆಯನ್ನು ಸಹ ಜಾರಿಗೊಳಿಸಲು ಅವಕಾಶವಿದೆ, ಇಲ್ಲಿಯ ಸ್ಥಳೀಯ ವಾಣಿಜ್ಯ ಮಂಡಳಿ ಪದಾಧಿಕಾರಿಗಳ ಬೇಡಿಕೆಯಂತೆ ಇಎಸ್‍ಐ ಆಸ್ಪತ್ರೆ, ಅಗ್ನಿಶಾಮಕದಳ ಠಾಣೆ, ಮಾಡ್ರನ್ ಡೈರಿ, ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪಿಸಲು ಕ್ರಮ ಜರುಗಿಸುವುದಾಗಿ ಅವರು ಹೇಳಿದರು.

    ಜಿಲ್ಲೆಯ ನೀರಿನ ಸಮಸ್ಯೆ ಬಗೆಹರಿಸಲು ಎತ್ತಿನಹೊಳೆ ಯೋಜನೆ, ಕುಮಾರಧಾರ ಯೋಜನೆಯಡಿಯಲ್ಲಿ ಜಿಲ್ಲೆಯ ಎಲ್ಲಾ ಕೆರೆಗಳನ್ನು ನೀರು ತುಂಬಿಸುವ ಮೂಲಕ ಅಂತರ್ಜಲ ಹೆಚ್ಚಿಸುವ ಕೆಲಸ ಮಾಡಲಾಗುವುದು ಎಂದರಲ್ಲದೆ, ಕೈಗಾರಿಕಾ ಪ್ರದೇಶಾಭಿವೃದ್ಧಿ ಪ್ರದೇಶದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಸ್ಥಾಪಿಸಲು ಜಾಗ ಕಾಯ್ದಿರಿಸುವಂತೆ ಮತ್ತು ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪಿಸಲು ಸರ್ಕಾರ ಅನುದಾನ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.

    ಯಾವುದೇ ಕೈಗಾರಿಕೆ ಕೇವಲ ಸಬ್ಸಿಡಿ ಹಣ ಪಡೆಯುವುದಕ್ಕೋಸ್ಕರವಾಗಿ ಸ್ಥಾಪನೆಯಾಗದೆ ಈ ಭಾಗದ ಜನರ ಆಶೋತ್ತರಗಳನ್ನು ಈಡೇರಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಅದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುದಾನ ತರಲು ಸದಾ ಸಿದ್ಧರಾಗಿದ್ದೇವೆ ಎಂದು ಅವರು ಭರವಸೆ ನೀಡಿದರು. ಕ್ಷೇತ್ರಾಭಿವೃದ್ಧಿಗೆ ಅಧಿಕಾರಿಗಳು ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕಾಗಿದೆ. ಯಾವುದೇ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದು ಅಧಿಕಾರಿಗಳ ಆಧ್ಯಕರ್ತವ್ಯವಾಗಬೇಕೆಂದು ಅವರು ಮನವಿ ಮಾಡಿದರು.

     ಕೈಗಾರಿಕಾ ಪ್ರದೇಶಾಭಿವೃದ್ಧಿಯ 4ನೇ ಹಂತ ಟೆಂಡರ್ ಪ್ರಕ್ರಿಯೆಯಲ್ಲಿದ್ದು, 5 ಮತ್ತು 6ನೇ ಹಂತ ಜಾಯಿಂಟ್ ಮೆಜರ್‍ಮೆಂಟ್ ಹಂತದಲ್ಲಿದೆ ಎಂದು ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಅಧಿಕಾರಿ ಸುನೀಲ್ ಸಭೆಗೆ ಮಾಹಿತಿ ನೀಡಿದರು. ಸಂಸದರು ಸಭೆಯಲ್ಲಿ ಎಲ್ಲಾ ಅಧಿಕಾರಿ ಹಾಗೂ ಸಂಘದ ಪದಾಧಿಕಾರಿಗಳಿಂದ ಕೈಗಾರಿಕಾ ಪ್ರದೇಶಾಭಿವೃದ್ಧಿ ಕುರಿತು ಮಾಹಿತಿ ಪಡೆದರು ಮತ್ತು ಕುಂದುಕೊರತೆಗಳ ಬಗ್ಗೆ ಗಮನಹರಿಸಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗುವಂತೆ ಅವರು ಸೂಚನೆ ನೀಡಿದರು.

     ಸಭೆಯಲ್ಲಿ ಕೈಗಾರಿಕಾ ಪ್ರದೇಶಾಭಿವೃದ್ಧಿ ಅಧಿಕಾರಿ ಸುನೀಲ್, ಬೆಸ್ಕಾಂ ಇಂಜಿನಿಯರ್ ಗೋವಿಂದಪ್ಪ, ವಾಣಿಜ್ಯ ಮಂಡಳಿ ಅಧ್ಯಕ್ಷ ಚಂದ್ರಶೇಖರ್, ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಸುಜ್ಞಾನಹಿರೇಮಠ, ವಸಂತನರಸಾಪುರ ಕೈಗಾರಿಕಾ ಉದ್ಯಮಿಗಳ ಸಂಘದ ಅಧ್ಯಕ್ಷ ಕೆ.ಎನ್.ಶಿವಶಂಕರ್, ಶಿವಕುಮಾರ್, ದಿಶಾ ಸಮಿತಿ ಸದಸ್ಯರಾದ ಕುಂದರನಹಳ್ಳಿ ರಮೇಶ್, ಪ್ರೇಮ ಹೆಗಡೆ, ಎನ್.ಹನುಮಂತಪ್ಪ, ರಘೋತ್ತಮ ರಾವ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಪಿ.ನಾಗೇಶ್, ಕೃಷಿ, ತೋಟಗಾರಿಕೆ, ಮೀನುಗಾರಿಕೆ ಇಲಾಖೆಗಳ ಅಧಿಕಾರಿಗಳು, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link