ಹಣದ ಬದಲಿಗೆ ಭೂಮಿಗೆ ಭೂಮಿ ಕೊಡಿ

ತುಮಕೂರು

       ಬೈರಗೊಂಡ್ಲು ಬಫರ್ ಡ್ಯಾಂ ಯೋಜನೆಗೆ ಸಂಬಂಧಿಸಿದಂತೆ ರೈತರ ಜಮೀನು ವಶಪಡಿಸಿಕೊಳ್ಳಬೇಕಾದರೆ ಹಣದ ಬದಲಾಗಿ ಭೂಮಿಗೆ ಭೂಮಿ ನೀಡಿ ಎಂದು ರೈತರು ಒಕ್ಕೊರಲಿನಿಂದ ಒತ್ತಾಯಿಸಿದ ಘಟನೆ ನಡೆದಿದೆ.

     ತುಮಕೂರು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಎತ್ತಿನಹೊಳೆ ಇಲಾಖಾ ಅಧಿಕಾರಿಗಳು ಹಾಗೂ ರೈತರ ಸಭೆಯಲ್ಲಿ ಕೊರಟಗೆರೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರು ಬಫರ್ ಡ್ಯಾಂ ಯೋಜನೆಗೆ ನಮ್ಮ ಜಮೀನುಗಳನ್ನು ನೀಡುವುದಿಲ್ಲ. ಹಾಗೇನಾದರೂ ಬಲವಂತವಾಗಿ ಜಮೀನುಗಳನ್ನು ಪಡೆಯುವುದಾದರೆ ಹಣದ ಬದಲಿಗೆ ಪರ್ಯಾಯವಾಗಿ ಭೂಮಿ ನೀಡಿ ಎಂದು ಉಪಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.

       ಸಭೆಯ ಆರಂಭದಲ್ಲಿ ವಿಶ್ವೇಶ್ವರಯ್ಯ ಜಲ ನಿಗಮದ ನೀರಾವರಿ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್ ಬಫರ್ ಡ್ಯಾಂ ಯೋಜನೆಯನ್ನು ಮಾಡುವಲ್ಲಿ ತಾಂತ್ರಿಕವಾಗಿ ಎದುರಾಗುವ ಸಮಸ್ಯೆಗಳ ಬಗ್ಗೆ ನೇರವಾಗಿ ತಿಳಿಸಿದರು.

ಬಫರ್ ಡ್ಯಾಂ ಯೋಜನೆ :     ಕೊರಟಗೆರೆಯ ಭೈರಗೊಂಡ್ಲು ಬಳಿ ಬಫರ್ ಡ್ಯಾಂ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೊರಟಗೆರೆ ತಾಲ್ಲೂಕಿನ 5 ಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ 2 ಹಳ್ಳಿಗಳು ಸಂಪೂರ್ಣ ಮುಳುಗಡೆಯಾಗಲಿವೆ. ಕೊರಟಗೆರೆ ತಾಲ್ಲೂಕಿನಲ್ಲಿ 2893 ಎಕರೆ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 2834 ಎಕರೆ ಭೂಮಿ ಈ ಯೋಜನೆಗೆ ಬೇಕಾಗುತ್ತದೆ. ನೋಂದಣಿ ಮೌಲ್ಯದಂತೆ ಕೊರಟಗೆರೆ ತಾಲ್ಲೂಕಿನಲ್ಲಿ 6 ಲಕ್ಷ ರೂ. ದೊಡ್ಡ ಬಳ್ಳಾಪುರ ಜಿಲ್ಲೆಯ ಜಮೀನುಗಳಿಗೆ 32 ಲಕ್ಷ ರೂಪಾಯಿಯಂತೆ ನಿಗಧಿ ಮಾಡಲಾಗಿದೆ. ಆದರೆ ಈ ಬಗ್ಗೆ ವಿವಿಧ ರೀತಿಯಲ್ಲಿ ಪರಿಶೀಲನೆ ನಡೆಸಿ ಏಕರೂಪ ದರ ನಿಗಧಿಗೆ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

 ಬಫರ್ ಡ್ಯಾಂ ಯೋಜನೆಯ ಅನುಕೂಲಗಳು       ಬಫರ್ ಡ್ಯಾಂ ಯೋಜನೆ ಜಾರಿಯಾದಲ್ಲಿ ತುಮಕೂರು ಜಿಲ್ಲೆಯ ಕೊರಟಗೆರೆ, ಮಧುಗಿರಿ, ಪಾವಗಡ ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಕುಡಿಯಲು ನೀರು ಲಭ್ಯವಾಗುತ್ತದೆ. ಅಲ್ಲದೆ ಕೃಷಿಗೆ ಬೇಕಾದಷ್ಟು ನೀರಾವರಿ ಸೌಲಭ್ಯ ದೊರೆಯುತ್ತದೆ. ಪಕ್ಕ ಜಿಲ್ಲೆಗಳಾದ ದೊಡ್ಡ ಬಳ್ಳಾಪುರ ಹಾಗೂ ಕೋಲಾರಕ್ಕೂ ನೀರುಣಿಸಬಹುದಾಗಿದೆ.

     ಪರ್ಯಾಯ ಮಾರ್ಗಗಳ ಬಗ್ಗೆ ಚರ್ಚೆ     ಡ್ಯಾಂ ಬದಲಾಗಿ ಪರ್ಯಾಯ ಮಾರ್ಗಗಳ ಮೂಲಕ ನೀರನ್ನು ಹರಿಸಲು ಚರ್ಚಿಸಲಾಯಿತು. ಇದರಲ್ಲಿ ದೇವರಾಯನದುರ್ಗದ ಟ್ಯಾಂಕ್, ಕೊಳಾಲ ಹೋಬಳಿಯ ತೀಥಾ ಕೆರೆ, ಕಾರೋನಹಳ್ಳಿ ಕೆರೆ, ಇರಕಸಂದ್ರ ಕೆರೆ, ಮಾವತ್ತೂರು ಕೆರೆಗಳನ್ನು ಅಭಿವೃದ್ಧಿ ಪಡಿಸಿ ನೀರನ್ನು ಅಲ್ಲಿಂದ ಪಂಪ್ ಮಾಡಿಕೊಳ್ಳಲು ರೈತರು ಸೂಚಿಸಿದರು. ಇನ್ನೂ ಕೆಲವರು ಪೈಪ್ ಲೈನ್ ಬಳಕೆ ಮಾಡಿ ಅಥವಾ ಚಾನಲ್‍ಗಳನ್ನು ಮಾಡುವ ಮೂಲಕ ನೀರನ್ನು ಹರಿಸಲು ಸೂಚಿಸಿದರು. ಇದಕ್ಕೆ ಉತ್ತರಿಸಿದ ಜಯಪ್ರಕಾಶ್ ರವರು, ದೇವರಾಯನ ದುರ್ಗದಲ್ಲಿ 600 ಎಕರೆ ಅರಣ್ಯ ಭೂಮಿ ಇದೆ.

       ಅಲ್ಲಿ ಪ್ರಾಣಿಗಳು ವಾಸ ಇವೆ. ಅಲ್ಲಿ ನೀರನ್ನು ಸ್ಟೋರ್ ಮಾಡಿ ಪಂಪ್ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರದಿಂದ ಸರ್ವೇ ಮಾಡಿದ ಅಧಿಕಾರಿಗಳು ಇದು ಕಾರ್ಯಸಾಧುವಲ್ಲ ಎಂದು ವರದಿ ನೀಡಿದ್ದಾರೆ ಎಂದರು. ಚಾನಲ್ ಮಾಡುವ ಬಗ್ಗೆ ಮಾತನಾಡಿದ ಅವರು, ಚಾನಲ್ ಮಾಡಿ ನೀರು ಹರಿಸಬೇಕಾದರೆ ಲಿಫ್ಟ್ ಇರಿಗೇಶನ್ ಮಾಡಿ 800 ಮೀಟರ್ ಎತ್ತರಕ್ಕೆ ನೀರನ್ನು ಪಂಪ್ ಮಾಡಬೇಕಾಗುತ್ತದೆ.

       ಇದು ಸರ್ಕಾರಕ್ಕೆ ಆರ್ಥಿಕವಾಗಿಯೂ ಹೊರೆಯಾಗುತ್ತದೆ. ಕಾರ್ಯರೂಪಕ್ಕೆ ತರಲೂ ಇದು ಸಮಸ್ಯೆ ಆಗುತ್ತದೆ ಎಂದರು. ಜೊತೆಗೆ ಚಾನಲ್ ಮೂಲಕ ನೀರು ಕೆರೆಗಳಿಗೆ ಹರಿಸಬೇಕಾದರೂ ಕೊರಟಗೆರೆ ತಾಲ್ಲೂಕಿನ ಸುಮಾರು 27 ಗ್ರಾಮಗಳು ಮುಳುಗುಡೆಯಾಗುತ್ತವೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ದೀರ್ಘವಾಗಿ ಚರ್ಚೆ ಮಾಡಿದ ನಂತರ ಡ್ಯಾಂ ನಿರ್ಮಾಣದ ತೀರ್ಮಾನಕ್ಕೆ ಬಂದಿದ್ದೇವೆ ಎಂದು ತಿಳಿಸಿದರು.

 ಸಭೆಯಲ್ಲಿ ರೈತರ ವಿರೋಧ

      ಎತ್ತಿನಹೊಳೆ ಯೋಜನೆಗೆ ನಮ್ಮ ವಿರೋಧವಿಲ್ಲ. ಇದರಿಂದ ಎಲ್ಲಾ ರೈತರಿಗೆ ಅನುಕೂಲವಾಗುತ್ತದೆ ಎಂದಾಗ ಅದಕ್ಕೆ ನಮ್ಮ ಅಡ್ಡಿಯೂ ಇಲ್ಲ. ಆದರೆ ಕೊರಟಗೆರೆ ಭಾಗದಲ್ಲಿ ಈ ಯೋಜನೆ ಮಾಡುವ ಪ್ರಸ್ತಾವನೆ ಬಂದಾಗಿನಿಂದಲೂ ರೈತರ ಜಮೀನುಗಳು ಮುಳುಗಡೆಯಾಗುತ್ತವೆ. ರೈತರಿಗೆ ಜಮೀನು ಇಲ್ಲದಂತಾಗುತ್ತದೆ ಎಂದು ತಿಳಿದು ಹೋರಾಟ ಮಾಡುತ್ತಿದ್ದೇವೆ. ಈ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಕಾರ್ಯ ಮಾಡಬೇಕಾದರೆ ರೈತರ ಅಭಿಪ್ರಾಯಗಳನ್ನು ತಿಳಿದು ಮಾಡುತ್ತೇವೆ ಎಂದು ಹೇಳಿದ್ದ ಇಲಾಖೆಯವರು ಇಲ್ಲಿಯವರೆಗೂ ಯಾವೊಂದು ಸಭೆಗೂ ನಮ್ಮನ್ನು ಕರೆದಿಲ್ಲ. ಇದರ ಬಗ್ಗೆ ನಮಗೆ ಸ್ವಲ್ಪನೂ ಮಾಹಿತಿ ನೀಡಿಲ್ಲ.

    ಅಲ್ಲದೆ ರೈತರ ಜಮೀನುಗಳಿಗೆ ನಿಗಧಿ ಮಾಡಲಾದ ಮೊತ್ತದಲ್ಲೂ ತಾರತಮ್ಯ ಮಾಡುತ್ತಿದ್ದಾರೆ. ಜಮೀನುಗಳಿಗೂ ನಮಗೂ ಉತ್ತಮ ಸಂಬಂಧವಿದೆ. ಅದನ್ನು ಕೆಡಿಸಬೇಡಿ ಎಂದರು.ಇದಕ್ಕೆ ಉತ್ತರಿಸಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಈಗ ನಿಗಧಿ ಮಾಡಿರುವುದು ನೋಂದಣಿ ಮೌಲ್ಯದ ಆಧಾರದಲ್ಲಿ ಮಾಡಿದ್ದಾರೆ. ಅದೇ ಕೊನೆಯಲ್ಲ. ಈಗ ಮಾಡಿದ ನಿಗಧೀಯೇ ಅಂತಿಮವಲ್ಲ. ದೊಡ್ಡಬಳ್ಳಾಪುರ ತಾಲ್ಲೂಕು ಹಾಗೂ ಕೊರಟಗೆರೆ ತಾಲ್ಲೂಕಿನಲ್ಲಿ ಜಮೀನಿಗೆ ಸರ್ಕಾರದಲ್ಲಿ ತೀರ್ಮಾನವಾಗಬೇಕು. ಯಾವುದೇ ಕಾರ್ಯಕ್ಕೂ ವ್ಯತ್ಯಾಸವಾಗಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.

  ಮುಳುಗಡೆಯಾಗುವ ಸ್ಥಳದಲ್ಲೇ ಸಭೆ ನಡೆಸಲು ತೀರ್ಮಾನ

        ಈ ಯೋಜನೆಯಲ್ಲಿ ಮುಳುಗಡೆಯಾಗುವ ಸ್ಥಳದಲ್ಲಿಯೇ ರೈತರೊಂದಿಗೆ ಸಾರ್ವಜನಿಕ ಸಭೆ ನಡೆಸಿ ಎಂದು ರೈತರು ಒತ್ತಾಯಿಸಿದರು. ಆಗ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಜಿಲ್ಲಾಧಿಕಾರಿಗಳಿಗೆ ಒಂದು ದಿನ ಸಮಯ ನಿಗಧಿ ಮಾಡಿ ಎಲ್ಲಾ ರೈತರಿಗೂ ಮಾಹಿತಿ ನೀಡಿ. ಎಲ್ಲರನ್ನು ಸಭೆಗೆ ಕರೆಯಿಸಿ. ಅಲ್ಲಿ ನೇರವಾಗಿ ರೈತರ ಅಭಿಪ್ರಾಯಗಳನ್ನು ಪಡೆಯೋಣ. ಅಂದು ಜಲಮಂಡಳಿಯವರು ಬಂದು ಡ್ಯಾಂ ಬಗ್ಗೆ ಅದರಿಂದಾಗುವ ಉಪಯೋಗ ಮತ್ತು ಪರ್ಯಾಯ ಮಾರ್ಗಗಳಿಂದ ಆಗುವ ಅನಾಹುತದ ಬಗ್ಗೆ ತಿಳಿಸುವ ಮೂಲಕ ಜನರನ್ನು ಮನವೊಲಿಸಬೇಕು. ಅವರ ಅಭಿಪ್ರಾಯಗಳನ್ನು ಪಡೆದು ಅನಂತರ ಸರ್ಕಾರಕ್ಕೆ ನಿಮ್ಮ ಅಭಿಪ್ರಾಯವನ್ನು ಕ್ರೋಢೀಕರಿಸಿ ವರದಿ ಸಲ್ಲಿಸಲಾಗುವುದು ಎಂದರು.

       ಸಭೆಯಲ್ಲಿ ಸಂಸದ ಎಸ್.ಪಿ. ಮುದ್ದಹನುಮೇಗೌಡ, ಶಾಸಕ ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ದಿವ್ಯಾ ಗೋಪಿನಾಥ್, ವಿಶ್ವೇಶ್ವರಯ್ಯ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಕೆ. ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap