ತುಮಕೂರು
ಗುಬ್ಬಿ ತಾಲ್ಲೂಕು ಕಡಬ ಬಳಿಯಿಂದ ಪೈಪ್ ಲೈನ್ ಮೂಲಕ ಕುಣಿಗಲ್ ತಾಲ್ಲೂಕು ಕೊತ್ತಗೆರೆ ಮಾರ್ಗವಾಗಿ ಚನ್ನಪಟ್ಟಣ, ರಾಮನಗರಕ್ಕೆ ಹೇಮಾವತಿ ನೀರು ತೆಗೆದುಕೊಂಡು ಹೋಗುವ ಯೋಜನೆ ಸಿದ್ದಪಡಿಸಿ ಸರ್ಕಾರ ಜಿಲ್ಲೆಯ ಕುಡಿಯುವ ನೀರಿನ ಯೋಜನೆಗೆ ಮರಣ ಶಾಸನ ಬರೆಯಲು ಹೊರಟಿದೆ ಎಂದು ಮಾಜಿ ಸಂಸದ ಜಿ ಎಸ್ ಬಸವರಾಜು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಜಿಲ್ಲೆಗೆ ಹರಿಸಬೇಕಾದ ಹೇಮಾವತಿ ನೀರು ಹರಿಸಲಿಲ್ಲ, ಕೆರೆಗಳು ಬತ್ತಿಹೋಗಿವೆ, ಕುಡಿಯುವ ನೀರಿಗೂ ಹಾಹಾಕಾರವಾಗಿದೆ. ಈ ಪರಿಸ್ಥಿತಿಯಲ್ಲಿ ಚನ್ನಪಟ್ಟಣ, ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗುವ ತೀರ್ಮಾನ ಮಾಡಿ ಸರ್ಕಾರ ಜಿಲ್ಲೆಯ ಜನರಿಗೆ ಮೋಸ ಮಾಡಿದೆ ಎಂದರು.
ಉಪ ಮುಖ್ಯಮಂತ್ರಿ ಡಾ. ಪರಮೇಶ್ವರ್, ಜಿಲ್ಲೆಯ ಸಚಿವರಾದ ಎಸ್ ಆರ್ ಶ್ರೀನಿವಾಸ್, ವೆಂಕಟರವಣಪ್ಪ ಅವರು ವಿಧಾನ ಸಭೆಯಲ್ಲಿ ವಿರೋಧ ಮಾಡಿ, ಉದ್ದೇಶಿತ ಯೋಜನೆ ವಜಾ ಮಾಡಿಸಲಿ ಎಂದು ಒತ್ತಾಯಿಸಿದ ಅವರು, ಹಾಲಿ ಸಂಸದರು ಹೇಮಾವತಿ ನೀರಿನ ಬಗ್ಗೆ ಅಳಲು ತೋಡಿಕೊಂಡಿದ್ದಾರೆ, ನೀರು ಉಳಿಸಲು ಈಗ ಪುರುಷತ್ವ ತೋರಿಸಬೇಕು ಎಂದರು.
ಕಡಬ ಬಳಿ ಹೇಮಾವತಿ ನಾಲೆಯಿಂದ ಕೊತ್ತಗೆರೆವರೆವರೆಗೆ ಪೈಪ್‍ಲೈನ್ ಮೂಲಕ ನೀರು ತೆಗೆದುಕೊಂಡು ಹೋಗಿ, ಅಲ್ಲಿಂದ ಹಳ್ಳಕ್ಕೆ ಹರಿಸಿ, ಚನ್ನಪಟ್ಟಣಕ್ಕೆ ನಂತರ ರಾಮನಗರಕ್ಕೆ ತೆಗೆದುಕೊಂಡು ಹೋಗುವ ಯೋಜನೆಗೆ ಸರ್ಕಾರ ತರಾತುರಿಯ ಸಿದ್ದತೆ ನಡೆಸಿದೆ. ಇದಕ್ಕಾಗಿ ಸರ್ಕಾರ 425 ಕೋಟಿ ರೂ ಮೀಸಲಿಟ್ಟಿದೆ. ಇದರ ಹಿಂದೆ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್, ಸಂಸದ ಡಿ ಕೆ ಸುರೇಶ್ ಹಾಗೂ ಕುಣಿಗಲ್ ಶಾಸಕ ಡಾ. ರಂಗನಾಥ್ ಅವರ ಹುನ್ನಾರವಿದೆ ಎಂದು ಜಿ ಎಸ್ ಬಸವರಾಜು ಆರೋಪಿಸಿದರು.
ಹೇಮಾವತಿ ನಾಲೆ ಆಧುನೀಕರಣಕ್ಕೆ ಸಕಾರ ಬಜೆಟ್‍ನಲ್ಲಿ 200 ಕೋಟಿ ರೂ ನೀಡಿದೆ, ಅದರ ಜೊತೆ ಈ ಯೋಜನೆಯ 425 ಕೋಟಿ ರೂ ಬಳಸಿಕೊಂಡರೆ ಹೇಮಾವತಿ ನಾಲೆ ಆಧುನೀಕರಣಗೊಳಿಸಿದರೆ ಜಲಾಶಯದಿಂದ ಹೆಚ್ಚು ನೀರು ಪಡೆಯಲು ಸಾಧ್ಯವಾಗುತ್ತದೆ. ಆದರೆ, ಈಗ ನಾಲೆಯಲ್ಲಿ ಹರಿಯಬಹುದಾಗ 750 ಕ್ಯೂಸೆಕ್ಸ್‍ನಲ್ಲಿ 350 ಕ್ಯೂಸೆಕ್ಸ್ ನೀರನ್ನು ಚನ್ನಪಟ್ಟಣ ಕಡೆ ಆರು ತಿಂಗಳು ಹರಿಸಿದರೆ ಸುಮಾರು 6.4 ಟಿ ಎಂಸಿ ನೀರು ತೆಗೆದುಕೊಂಡಂತಾಗುತ್ತದೆ. ಉಳಿಯುವ ನೀರಿನಲ್ಲಿ ತುಮಕೂರು ಜಿಲ್ಲೆ ಒಂದೆರಡೂ ಕೆರೆಗಳನ್ನು ತುಂಬಿಸಲು ಸಾಧ್ಯವಾಗುವುದಿಲ್ಲ ಎಂದರು.
ಈ ಬಗ್ಗೆ ವಿರೋಧ ಮಾಡಿ ಶಾಸಕ ಜೆ ಸಿ ಮಾಧುಸ್ವಾಮಿಯರು ಅಧಿವೇಶನದಲ್ಲಿ ಪ್ರಶ್ನೆ ಮಾಡಿದಾಗ, ಈ ರೀತಿ ಅನ್ಯಾಯ ಮಾಡುವುದಿಲ್ಲ ಎಂದು ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದರು. ಆದರೆ, ತೆರೆಮರೆಯಲ್ಲಿ ಹೇಮಾವತಿ ನೀರು ಕಸಿಯುವ ಹುನ್ನಾರ ನಡೆದಿದ್ದು ಜಿಲ್ಲೆಯ ಸಚಿವರು ಇದನ್ನು ತಡೆಯಬೇಕು ಎಂದು ಒತ್ತಾಯಿಸಿದರು.
ಹೇಮಾವತಿ ನೀರು ತುಮಕೂರು ಜಿಲ್ಲೆಗೆ ಪೂರ್ಣ ಪ್ರಮಾಣದಲ್ಲಿ ಪಡೆಯಲು ಸಾಧ್ಯವಾಗುತ್ತಿಲ್ಲ, ವಿವಿಧ ಕಾರಣಗಳಿಂದ ಜಿಲ್ಲೆಗೆ ಅನ್ಯಾಯವಾಗುತ್ತಲೇ ಇದೆ. ಈ ಬಾರಿ ಜಲಾಶಯದಲ್ಲಿ ಸಾಕಷ್ಟು ನೀರಿದ್ದು ಹೆಚ್ಚಿ ನೀರು ಸಮುದ್ರಕ್ಕೆ ಹರಿದು ಹೋದರೂ ನಮ್ಮ ಪಾಲಿನ ನೀರು ಪಡೆಯಲು ಆಗಲಿಲ್ಲ. ಯಾವ ಕೆರೆಗಳಲ್ಲೂ ನೀರಿಲ್ಲ. ಅಂತರ್ಜಲ ಕುಸಿದುಹೋಗಿದೆ. ತೆಂಗು, ಅಡಿಕೆ ಬೆಳೆ ಒಣಗಿ ರೈತರು ಕಂಗಾಲಾಗಿದ್ದಾರೆ.
ಇಂತಹ ಭೀಕರ ಪರಿಸ್ಥಿತಿಯಲ್ಲೂ ಜಿಲ್ಲೆಯ ರಾಜಕಾರಣಿಗಳು ನಿದ್ರೆ ಹೊಡೆಯುತ್ತಿದ್ದಾರೆ. ಮುಖ್ಯಮಂತ್ರಿಗಳು ಕೂಡಲೇ ಹೇಮಾವತಿ ನಾಲಾವ್ಯಾಪ್ತಿಯ ಜಿಲ್ಲೆಗಳ ಶಾಸಕರು, ಮಾಜಿ ಶಾಸಕರು, ಸಂಸದರು, ಮುಖಂಡರ ಸಭೆ ನಡೆಸಿ ನೀರು ವಿತರಣೆಗೆ ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದು ಜಿ ಎಸ್ ಬಸವರಾಜು ಒತ್ತಾಯ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
