ಕಾನೂನು ಅರಿವು ಕಾರ್ಯಕ್ರಮ

0
17

ಹರಪನಹಳ್ಳಿ:

        ರೋಗದ ಗುಣ ಲಕ್ಷಣಗಳೇ ಗೋಚರವಾಗದಂತಹ ಮಾರಣಾಂತಿಕ ಕಾಯಿಲೆ ಏಡ್ಸ್‍ಗೆ ತುತ್ತಾದವರನ್ನು ತಾತ್ಸಾರ ಮಾಡದೆ, ಸಹಾನುಭೂತಿಯಿಂದ ಸಹಕರಿಸಿ ಎಂದು ಹಿರಿಯ ಸಿವಿಲ್ ನ್ಯಾಯಾದೀಶೆ ಉಂಡಿ ಮಂಜುಳಾ ಶಿವಪ್ಪ ಹೇಳಿದರು.

        ಪಟ್ಟಣದ ತಾಲೂಕು ಪಂಚಾಯಿತಿ ರಾಜೀವ್ ಗಾಂಧೀ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಸಾಂತ್ವನ ಮಹಿಳಾ ಸಹಾಯವಾಣಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

          ಗಡಿ ಕಾಯುವ ಯೋಧರಂತೆ ದೇಹದಲ್ಲಿನ ಬಿಳಿರಕ್ತಕಣಗಳ ಕಾರ್ಯನಿರ್ವಹಿಸುತ್ತವೆ. ಏಡ್ಸ್ ಕಾಯಿಲೆ ಬಿಳಿರಕ್ತಕಣದ ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ. ಅಂಟು ಜಾಡ್ಯವಲ್ಲದ ರೋಗದಿಂದ ಬಳಲುವವರೆಲ್ಲಾ ಗುಣಹೀನರಲ್ಲ, ಅನ್ಯಮಾರ್ಗದಿಂದಲೂ ಕಾಯಿಲೆಗೆ ತುತ್ತಾಗಿರಬಹುದಾದ್ದರಿಂದ ಅಂತವರನ್ನು ನಿರ್ಲಕ್ಷಿಸದೆ ಪ್ರೀತಿಯಿಂದ ಕಾಣುವ ಅಗತ್ಯವಿದೆ. ಏಡ್ಸ್ ರೋಗಿಗಳನ್ನು ನೋಡುವ ದೃಷ್ಟಿಕೋನ ಬದಲಿಸಿಕೊಳ್ಳಿ ಇದರ ಬಗ್ಗೆ ತಪ್ಪು ತಿಳುವಳಿಕೆ ಬೇಡ. ತಪಾಸಣೆ ಮಾಡಿಸಲು ವೈದ್ಯರ ಸಲಹೆಯನ್ನು ಅನ್ಯತಾ ಭಾವಿಸುವ ಅಗತ್ಯವಿಲ್ಲ ಎಂದರು.

        ಆಪ್ತಸಮಾಲೋಚಕ ಜಿ.ಎ.ಮಲ್ಲಿಕಾರ್ಜುನ ಉಪನ್ಯಾಸ ನೀಡಿ ಮಾತನಾಡಿ. ದುಡಿಮೆ ಕಲಿಸುವ ವಿಶ್ವವಿದ್ಯಾಲಯಗಳು ದಾಂಪತ್ಯ ಜೀವನದ ಹಾದಿಗಳನ್ನು ಕಲಿಸಲಿ, ಆಗ ಏಡ್ಸ್ ನಂತಹ ಮಾರಕ ಕಾಯಿಲೆಯಿಂದ ಸಂಸಾರಿಗಳು ದೂರ ಉಳಿಯಲು ಸಾದ್ಯ. ಪೋಷಕರು ಹರೆಯದಲ್ಲಿ ಜಾಗೃತಿ ವಹಿಸಿ ಮಕ್ಕಳಿಗೆ ಸಂವೇದನಾಶೀಲತೆ ಕಲಿಸಿ ಏಡ್ಸ್‍ನಿಂದ ದೂರವಿರಿ ಎಂದರು.

       ದೇಶದಲ್ಲಿ ಲೈಂಗಿಕ ಮಡಿವಂತಿಕೆ ಹೆಚ್ಚಾಗಿದೆ. 14 ರಿಂದ 24 ರ ಹರೆಯದವರೆ ಇಂತಹ ಮಾರಣಾಂತಿಕ ಕಾಯಿಲೆ ಪತ್ತೆಯಾಗಿದೆ. ದಾವಣಗೆರೆ ಜಿಲ್ಲೆ ಕಳೆದ ವರ್ಷ 5 ನೇ ಸ್ಥಾನದಲ್ಲಿತ್ತು, ಪ್ರಸಕ್ತವರ್ಷದಲ್ಲಿ 15 ನೇ ಸ್ಥಾನಕ್ಕೆ ಬಂದಿದೆ. ಹರಪನಹಳ್ಳಿ ತಾಲೂಕು ಜಿಲ್ಲೆಯಲ್ಲಿಯೇ ಮುಂಚೂಣಿಯಲ್ಲಿರುವುದು ವಿಷಾಧನೀಯ ಎಂದರು.

       ಜಿಲ್ಲೆಯಲ್ಲಿ ಆಂಟಿ ರಿಕ್ರೋವೈರಲ್ ಟ್ರೀಟ್‍ಮೆಂಟ್ ಆರಂಭವಾಗಿದೆ. ರೋಗಪತ್ತೆಗೆ ಸಹಕರಿಸಿ, ಸಂಕೋಚ ಬಿಟ್ಟು ಅನುಮಾನ ಕಂಡಲ್ಲಿ ಮಾಹಿತಿ ನೀಡಿ ಆಗುವ ಅನಾಹುತ ತಪ್ಪಿಸಬಹುದು, ತಾಯಿಯಿಂದ ಮಕ್ಕಳಿಗೆ ಬರುವ ಕಾಯಿಲೆ ದೂರಮಾಡಲು ಔಷಧಿ ಲಭ್ಯವಿದ್ದು, ಇಲ್ಲಿವರೆಗೂ 10 ಜನ ಮಕ್ಕಳನ್ನು ರೋಗ ಮುಕ್ತ ಮಾಡುವಲ್ಲಿ ಆರೋಗ್ಯ ಇಲಾಖೆ ಯಶಸ್ವಿಯಾಗಿದೆ ಎಂದರು.

         ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾದೀಶೆ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ಬಿ.ಜಿ.ಶೋಭಾ, ವಕೀಲ ಸಂಘದ ಅಧ್ಯಕ್ಷ ಎ.ಕೆ.ಅಜ್ಜಪ್ಪ, ಅಪರ ಸರ್ಕಾರಿ ವಕೀಲ ಕಣಿವಿಹಳ್ಳಿ ಮಂಜುನಾಥ್, ಮಹಿಳಾ ಸಾಂತ್ವನ ಕೇಂದ್ರದ ಸಮಾಲೋಚಕಿ ಲೀಲಾ ಲಿಂಗರಾಜ್, ಡಾ.ಮಂಜುನಾಥ್, ಇಓ ಮಮತಾಗೌಡ, ಅಂಗನವಾಡಿ ಕಾರ್ಯಕರ್ತತೆಯರು, ಆಶಾಕಾರ್ಯಕರ್ತೆಯರು, ಮಹಿಳಾ ಸಂಘಟನಾ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here