ತುಮಕೂರು:
ರಾತ್ರಿವೇಳೆಯಲ್ಲಿ ಎಲ್ಲಿಂದಲೋ ಕುಡುಕರು ಬರುತ್ತಾರೆ. ಶಾಲೆಯ ಆವರಣದಲ್ಲಿಯೇ ಕುಡಿದು ಬಾಟೆಲ್‍ಗಳನ್ನು ಬಿಸಾಡಿ ಹೋಗುತ್ತಾರೆ. ಅದರೊಂದಿಗೆ ಕಡ್ಲೇಪುರಿ, ಕಡ್ಲೇಬೀಜ, ಚಿಪ್ಸ್, ಪ್ಲಾಸ್ಟಿಕ್ ಕವರ್ಸ್ ಇವೆಲ್ಲವೂ ಚೆಲ್ಲಾಡಿರುತ್ತಾರೆ. ನಾವು ಶಾಲೆಗೆಂದು ಬಂದಾಗ ಬಹಳಷ್ಟು ಬಾರಿ ಇಂತಹ ದೃಶ್ಯಗಳು ಕಣ್ಣಿಗೆ ಬೀಳುತ್ತವೆ. ಇವುಗಳಿಗೆ ಮುಕ್ತಿ ಕಾಣಿಸಲು ಸಾಧ್ಯವಿಲ್ಲವೇ…?
ಇಂತಹ ಹಲವು ಹತ್ತು ಪ್ರಶ್ನೆಗಳು ಗ್ರಾಮ ಪಂಚಾಯತಿ ಅಧ್ಯಕ್ಷರಾದಿಯಾಗಿ ಸಭೆಯಲ್ಲಿದ್ದ ಗಣ್ಯರಿಗೆ ಎದುರಾದವು. ತುಮಕೂರು ತಾಲ್ಲೂಕು ಕೆ.ಪಾಲಸಂದ್ರ ಗ್ರಾಮ ಪಂಚಾಯತಿ ವತಿಯಿಂದ ಆಯೋಜಿಸಲಾಗಿದ್ದ ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಮಕ್ಕಳು ಎಸೆದ ಇಂತಹ ಪ್ರಶ್ನೆಗಳಿಗೆ ವೇದಿಕೆಯಲ್ಲಿದ್ದವರು ಕೆಲಕಾಲ ಕಕ್ಕಾಬಿಕ್ಕಿಯಾಗಿದರು.
ಶಾಲೆಯಲ್ಲಿ ಶೌಚಾಲಯವಿದೆ. ಆದರೆ ಅದು ತುಂಬಿ ಹೋಗಿ ಬಳಕೆ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ನೀರಿನ ತೊಟ್ಟಿಯ ಸಮಸ್ಯೆಯೂ ಇಲ್ಲಿದೆ ಎಂಬ ಅಂಶವನ್ನು ಅನಿಲ್ ಎಂಬ ವಿದ್ಯಾರ್ಥಿ ಗಮನ ಸೆಳೆದರು. ನಮ್ಮ ಊರಿಗೆ ಸರಿಯಾದ ಸಮಯಕ್ಕೆ ಬಸ್ಸು ಬರುತ್ತಿಲ್ಲ. ಇದರ ಬಗ್ಗೆ ಗಮನ ಹರಿಸಿ. ಜೊತೆಗೆ ನಮ್ಮೂರ ರಸ್ತೆಯನ್ನು ಸರಿಪಡಿಸಿ ಎಂಬ ಮನವಿಯನ್ನು ನಿಖಿಲ್ ಎಂಬ ವಿದ್ಯಾರ್ಥಿ ಮುಂದಿಟ್ಟ.
ಮುಖ್ಯ ರಸ್ತೆಯಲ್ಲಿಯೇ ಶಾಲೆ ಇರುವುದರಿಂದ ಶಾಲೆಯ ಮುಂಭಾಗ ಒಂದು ಬೋರ್ಡ್ ಹಾಕಿಸಬೇಕು. ಸಾಧ್ಯವಾದರೆ ಹಂಪ್ಸ್ ನಿರ್ಮಾಣ ಮಾಡುವುದು ಒಳ್ಳೆಯದು ಎಂಬ ಅಹವಾಲನ್ನು ವಿದ್ಯಾರ್ಥಿನಿ ಜ್ಯೋತಿ ಮುಂದಿಟ್ಟರೆ, ನಮ್ಮ ಸೈಕಲ್‍ಗಳು ಬಿಸಿಲು ಮಳೆಗೆ ಹಾಳಾಗುತ್ತವೆ. ಆದ್ದರಿಂದ ಒಂದು ಮೇಲ್ಚಾವಣಿ ನಿರ್ಮಿಸಿಕೊಡಿ ಎಂದು ಕುಸುಮ ಮನವಿ ಮಾಡಿಕೊಂಡರು.
ಹೀಗೆ ಹಲವು ಹತ್ತು ಸಮಸ್ಯೆಗಳನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮುಂದೆ ವಿದ್ಯಾರ್ಥಿಗಳು ತೋಡಿಕೊಂಡರು. ಕೆಲವು ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ ಸಿಗುವ ಉತ್ತರವನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ನೀಡಿದರು. ಮತ್ತೆ ಕೆಲವು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇರುವುದರಿಂದ ಅವುಗಳನ್ನು ಬಗೆಹರಿಸುವ ಬಗ್ಗೆ ಗ್ರಾಮ ಪಂಚಾಯತಿ ಸದಸ್ಯರು ತಿಳಿಸಿದರು.
ಬೆಳಗ್ಗೆ 11.30ಕ್ಕೆ ಆರಂಭವಾದ ಮಕ್ಕಳ ವಿಶೇಷ ಗ್ರಾಮ ಸಭೆ ಮಧ್ಯಾಹ್ನ 1.30ರವರೆಗೂ ನಡೆಯಿತು. ಹೆಚ್ಚಿನ ಭಾಷಣಕ್ಕೆ ಬದಲಾಗಿ ಮಕ್ಕಳ ಸಮಸ್ಯೆಗಳು ಮತ್ತು ಅಹವಾಲುಗಳಿಗೆ ಸಮಯವನ್ನು ಮೀಸಲಿಡಲಾಗಿತ್ತು. ಇದೇ ಕಾರಣಕ್ಕೆ ವೇದಿಕೆ ಮೇಲಿದ್ದ ಗಣ್ಯರು ಹೆಚ್ಚು ಭಾಷಣ ಮಾಡಲು ಹೋಗಲಿಲ್ಲ. ಕೆಲವು ಸಮಸ್ಯೆಗಳು ಗಂಭೀರವಾಗಿದ್ದರೆ ಮತ್ತೆ ಕೆಲವು ಸಮಸ್ಯೆಗಳು ಸಮಸ್ಯಾತ್ಮಕವಾಗಿಯೇ ಇದ್ದವು.
ಆದರೂ ಮಕ್ಕಳ ವಿಶೇಷ ಗ್ರಾಮ ಸಭೆ ನಡೆಸುವ ಔಚಿತ್ಯ ಏನೆಂಬುದನ್ನು ಸಭೆಯಲ್ಲಿ ತಿಳಿಸಿಕೊಡಲಾಯಿತು. ಮುಂದಿನ ವರ್ಷಗಳಲ್ಲಿ ಇಂತಹ ಸಭೆಗಳು ಹೆಚ್ಚು ಅರ್ಥಪೂರ್ಣವಾಗಿ ನಡೆಯಲು ಈ ಸಭೆ ಪ್ರೇರಣೆಯಾಗಲಿ ಎಂದು ವೇದಿಕೆಯಲ್ಲಿದ್ದವರು ಆಶಯ ವ್ಯಕ್ತಪಡಿಸಿದರು.
ಶಿಕ್ಷಣ ಇಲಾಖೆ ಮತ್ತು ಪಂಚಾಯತಿ ಸದಸ್ಯರು, ಅಧಿಕಾರಿಗಳು ಆಸಕ್ತಿಯಿಂದ ಭಾಗವಹಿಸಿದ್ದರು. ಆದರೆ ಮಹಿಳಾ ಇಲಾಖೆ, ಪೊಲೀಸ್ಇ ಲಾಖೆ ಸೇರಿದಂತೆ ಕೆಲವು ಇಲಾಖೆಗಳ ಪ್ರತಿನಿಧಿಗಳು ಗೈರು ಹಾಜರಾಗಿದ್ದರು.
ಮಕ್ಕಳ ಗ್ರಾಮ ಸಭೆಯ ಔಚಿತ್ಯ ಮತ್ತು ಅದರ ಮಹತ್ವದ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿ ಮಾಜಿ ಸದಸ್ಯರು, ವಕೀಲರಾದ ಸಾ.ಚಿ.ರಾಜಕುಮಾರ ಮತ್ತು ಪಿಡಿಓ ಚಂದ್ರಕಲಾ ವಿವರಿಸಿದರು. ಗ್ರಾ.ಪಂ.ಅಧ್ಯಕ್ಷೆ ರುಕ್ಮಿಣಿ ವೆಂಕಟೇಶ್, ಉಪಾಧ್ಯಕ್ಷೆ ಪುಷ್ಪಲತ ಕೃಷ್ಣಪ್ಪ, ಗ್ರಾ.ಪಂ.ಕಾರ್ಯದರ್ಶಿ ಭಾಸ್ಕರ್, ಸಿಆರ್‍ಪಿ ಪುಟ್ಟರಾಜು, ಬಿಆರ್‍ಸಿ ಗಂಗಹನುಮಯ್ಯ, ಮುಖ್ಯೋಪಾಧ್ಯಾಯ ಹರೀಶ್, ಶಿಕ್ಷಕಿ ಆಶಾಲತಾ, ಎಸ್.ಡಿ.ಎಂ.ಸಿ.ಅಧ್ಯಕ್ಷೆ ಲತಾಮಣಿ, ಗ್ರಾ.ಪಂ.ಸದಸ್ಯರು, ಶಿಕ್ಷಕರು ಈ ಸಭೆಯಲ್ಲಿ ಉಪಸ್ಥಿತರಿದ್ದರು. ಮಕ್ಕಳ ಪ್ರತಿನಿಧಿ ಮನೋಜ್ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
