ಹರಪನಹಳ್ಳಿ:
ಸ್ವಾರ್ಥಕ್ಕಾಗಿ ಗಿಡಮರಗಳ ಕಡಿದು ಪರಿಸರ ನಾಶಮಾಡುವುದು ಅಪ್ರಾಪ್ತೆಯ ಅತ್ಯಾಚಾರಕ್ಕೆ ಸಮ ಎಂದು ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್‍ನ ಅಧ್ಯಕ್ಷೆ ಎಂ.ಪಿ.ವೀಣಾ ಮಹಾಂತೇಶ್ ಚರಂತಿಮಠ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಕೂಲಹಳ್ಳಿ ಕೆರೆ ಅಂಗಳದಲ್ಲಿ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಸಮಾನಮನಸ್ಕರ ವೇದಿಕೆ ಆಯೋಜಿಸಿದ್ದ ಗಿಡನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು. ಗಿಡಮರಗಳನ್ನು ಕಡಿವ ಮುನ್ನ ಬೆಳೆಸುವ ಸಂಪ್ರದಾಯಗಳನ್ನು ರೂಢಿಸಿಕೊಳ್ಳಬೇಕು, ಇಲ್ಲವಾದರೆ ಮುಂದಿನ ಪೀಳಿಗೆಗೆ ನಾವು ಕಾಂಕ್ರೇಟ್ ನಾಡು ಬರಡು ಭೂಮಿಯನ್ನು ಮಾತ್ರ ಬಳುವಳಿಯಾಗಿ ನೀಡಬೇಕಾಗುತ್ತದೆ. ಜಲಕ್ಷಾಮವನ್ನು ಎದುರಿಸಿ ನಮಗೆ ಶಾಪ ಹಾಕುವಂತಾ ಪರಿಸ್ಥಿತಿಗೆ ನಾವೇ ಮುನ್ನುಡಿ ಬರೆದಂತಾಗುತ್ತದೆ ಎಂದು ಅರಿತು ಪರಿಸರ ಸಂರಕ್ಷಣೆ ಜವಾಬ್ದಾರಿ ಹೊರಬೇಕಿದೆ ಎಂದರು.
ಪ್ರತಿಯೊಬ್ಬರೂ ಕನಿಷ್ಟ 150 ಗಿಡಗಳನ್ನು ನೆಟ್ಟು ಬೆಳೆಸಿದರೂ ಭೂಮಿಯ ಋಣ ತೀರಿಸಲು ಸಾದ್ಯವಿಲ್ಲ. ಮಣ್ಣಿನ ಸವಕಳಿ ತಡೆಯಲು ಅಂತರ್ಜಲ ವೃದ್ದಿಯಾಗಲು, ಗ್ರಾಮಗಳ ಸ್ವರ್ಗವಾಗಿ ಮಾರ್ಪಡಲು ಗಿಡಮರಗಳನ್ನು ಬೆಳೆಸಲು ಸಂಕಲ್ಪ ಮಾಡಿ ಎಂದರು.
ಕೂಲಹಳ್ಳಿ ಗೋಣಿಬಸವೇಶ್ವರ ಮಠದ ಪಟ್ಟಾಧ್ಯಕ್ಷರಾದ ಚಿನ್ಮಯಾನಂದಸ್ವಾಮಿಗಳು ಮಾತನಾಡಿ. ಗಿಡದ ನೆರಳು ಕಾಯಿಲೆಗಳು ದೂರ, ಗಿಡಗಳ ನಾಶ ಅನಾರೋಗ್ಯಕ್ಕೆ ನಾಂದಿ. ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಹಸಿರೇ ಉಸಿರು ಎನ್ನುವುದನ್ನು ಮನಗಾಣಬೇಕಿದೆ. ಹದಗೆಡುತ್ತಿರುವ ಪರಿಸ್ಥಿತಿ ಹತೋಟಿಗಾಗಿ ಪರಿಸರ ಉಳಿಸಬೇಕು, ಗಿಡನೆಟ್ಟರಷ್ಟೇ ಸಾಲದು ಪಾಲನೆ ಪೋಷಣೆ ಮಾಡುವುದು ಕರ್ತವ್ಯವಾಗಲಿ ಎಂದರು.
ಪರಿಸರ ದಿನಾಚರಣೆ ವರ್ಷದ ಒಂದು ದಿನಕ್ಕೆ ಮೀಸಲಾಗದೆ ವರ್ಷವಿಡೀ ವಿಶ್ವ ಪರಿಸರ ದಿನಾಚರಣೆಯಾಗಿ ಆಚರಿಸಬೇಕು. ಪರಿಸರವಿಲ್ಲದೆ ನಾವಿಲ್ಲ ಎನ್ನುವ ನಿತ್ಯ ಸತ್ಯವನ್ನು ಅರಿತು ಪರಿಸರ ಸಂರಕ್ಷಣೆ ನಮ್ಮ ಜನ್ಮದ ಮುಖ್ಯಗುರಿಯಾಗಿಸಿಕೊಂಡು ಸಾಗಬೇಕು ಎಂದರು.
ಶ್ರೀಗಳು ಹಾಗೂ ವೀಣಾ ಮಹಾಂತೇಶ್ ರವರು 100 ಕ್ಕೂ ಹೆಚ್ಚು ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಯಲ್ಲಿ ಪರಿಸರದ ಕಾಳಜಿ ಮೆರೆದರು.ಕಾರ್ಯಕ್ರಮದಲ್ಲಿ ಮಾಜಿ ಪುರಸಭೆ ಅಧ್ಯಕ್ಷೆ ಕವಿತಾ ವಾಗೀಶ್, ಗ್ರಾಪಂ ಸದಸ್ಯ ಶಿವಕುಮಾರನಾಯ್ಕ್, ಸಿದ್ದಲಿಂಗನಗೌಡ, ಕೂಲಹಳ್ಳಿ ಮಾರ್ಕಾಂಡೇಶ, ಶ್ರೀಕಾಂತ್, ಮಹಾಂತೇಶ್ ಹಾಗೂ ಸಮಾನಮನಸ್ಕ ವೇದಿಕೆ ಸದಸ್ಯರು ಸೇರಿದಂತೆ ಗ್ರಾಮಸ್ಥರೂ ಭಾಗವಹಿಸಿದ್ದರು.