ಮುದ್ರಣಮಾಧ್ಯಮದ ವರದಿ ವಾಸ್ತವಕ್ಕೆ ಹತ್ತಿರ : ಪಿಟಿಪಿ

ಹೂವಿನಹಡಗಲಿ :

    ದೃಶ್ಯಮಾಧ್ಯಮ ಮತ್ತು ಮುದ್ರಣ ಮಾಧ್ಯಮಕ್ಕೆ ಹೋಲಿಕೆ ಮಾಡಿ ನೋಡಿದಾಗ ಮುದ್ರಣ ಮಾಧ್ಯಮದವರದಿ ಬಹುತೇಕ ವಾಸ್ತವಾಂಶಕ್ಕೆ ಹತ್ತಿರವಿರುತ್ತದೆ ಎಂದು ಮುಜರಾಯಿ ಹಾಗೂ ಕೌಶಲ್ಯಾಭಿವೃದ್ದಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.

     ಅವರು ಪಟ್ಟಣದ ತಾ.ಪಂ. ರಾಜೀವಗಾಂಧಿ ಸಭಾಂಗಣದಲ್ಲಿ ಕರ್ನಾಟಕ ಪ್ರೆಸ್‍ಕ್ಲಬ್ ತಾಲೂಕು ಘಟಕದಿಂದ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುದ್ರಣ ಮಾಧ್ಯಮವು ಆಧುನಿಕ ಭರಾಟೆಯ ಯುಗದಲ್ಲಿಯೂ ಕೂಡಾ ಓದುಗರನ್ನು ಹಿಡಿದಿಟ್ಟುಕೊಂಡು ತನ್ನ ಅಸ್ಥಿತ್ವವನ್ನು ಕಾಪಾಡಿಕೊಂಡಿರುವುದು ಅತ್ಯಂತ ಪ್ರಶಂಸನೀಯ ವಿಷಯವಾಗಿದೆ ಎಂದರು.

     ಅದರಲ್ಲೂ ಕೂಡಾ ವಿಶೇಷ ಎನ್ನುವಂತೆ ಹೂವಿನಹಡಗಲಿ ಮಾಧ್ಯಮ ಮಿತ್ರರು ಕೇವಲ ವರದಿಗೆ ಸೀಮಿತವಾಗದೇ ಸಾರ್ವಜನಿಕ ಹಿತದೃಷ್ಟಿಯಿಂದ ಹೋರಾಟವನ್ನು ನಡೆಸುವುದರ ಮೂಲಕ ಅನೇಕ ಸಮಸ್ಯೆಗಳಿಗೆ ಹರಿಹಾರ ಕಂಡುಕೊಂಡಿದ್ದಾರೆ ಎಂದ ಅವರು, ಉದಾಹರಣೆಯಾಗಿ 2008ರಲ್ಲಿ ಸರ್ಕಾರಿ ಇಂಜಿನೀಯರಿಂಗ್ ಕಾಲೇಜ್ ಹೂವಿನಹಡಗಲಿಯಿಂದ ಬಳ್ಳಾರಿಯ ಹಗರಿಗೆ ಸ್ಥಳಾಂತರ ಗೊಂಡಾಗ ನಿರಂತರ ಧರಣಿ ಸತ್ಯಾಗ್ರಹ ಹಾಗೂ ಬೆಳಗಾಂ ಚಲೋ, ಬೈಕ್ ರ್ಯಾಲಿ, ಬೆಂಗಳೂರು ಚಲೋ ನಡೆಸುವುದರ ಮೂಲಕ ಮಾಜಿ ಉಪಮುಖ್ಯಮಂತ್ರಿಗಳಾದ ದಿವಂಗತ ಎಂ.ಪಿ.ಪ್ರಕಾಶ್‍ರವರ ನೇತೃತ್ವದಲ್ಲಿ ಹೋರಾಟ ನಡೆಸಿ ಕಾಲೇಜನ್ನು ಸ್ಥಳಾಂತರಗೊಳ್ಳದಂತೆ ನೋಡಿಕೊಂಡರು ಎಂದರು.

    ಹೂವಿನಹಡಗಲಿಗೆ ನನ್ನದೇ ಇಲಾಖೆಯ ಜಿ.ಡಿ.ಟಿ.ಸಿ. ಸೆಂಟರ್ ಮಂಜೂರಾಗಿದ್ದು, ಇದರ ಅಂದಾಜು ಮೊತ್ತ 25 ಕೋಟಿ ರೂ ಹಾಗೂ ಲಂಬಾಣಿ ಮಹಿಳೆಯರಿಗೆ ಕಸೂತಿ ಕೇಂದ್ರ ಪ್ರಾರಂಭಿಸಿ, 10 ಜನರ ತಂಡದಂತೆ 5 ತಂಡಗಳಿಗೆ ತರಬೇತಿ ನೀಡಲಾಗುವುದು ಎಂದರು.
ಕನ್ನಡಪ್ರಭಾ ಪತ್ರಿಕೆಯ ಹುಬ್ಬಳ್ಳಿ ಆವೃತ್ತಿಯ ಮುಖ್ಯಸ್ಥರಾದ ಮಲ್ಲಿಕಾರ್ಜುನ ಸಿದ್ದಣ್ಣನವರ್ ಉಪನ್ಯಾಸನೀಡಿ ಮಾತನಾಡಿ ಪತ್ರಿಕಾ ದಿನಾಚರಣೆಯ ಮುಖ್ಯ ಉದ್ದೇಶ ಪತ್ರಕರ್ತರ ಆತ್ಮವಿಮರ್ಷೆಗಾಗಿ ಎಂದು ಹೇಳಿದರು. ಪತ್ರಕರ್ತರನ್ನೂ ಕೂಡಾ ಸಮಾಜ ಪ್ರಶ್ನೆ ಮಾಡಬೇಕು, ಅಧಿಕಾರಿಗಳು, ರಾಜಕಾರಣಿಗಳ ಭ್ರಷ್ಟಾಚಾರದ ಬಗ್ಗೆ ಬರೆಯುವ ಪತ್ರಕರ್ತರು ಭ್ರಷ್ಟರಾದರೆ ಸಾರ್ವಜನಿಕರೂ ಕೂಡಾ ಅವರನ್ನು ಪ್ರಶ್ನಿಸಬೇಕು ಎಂದು ಹೇಳಿದರು.

     ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗದಂತೆ ನಾಲ್ಕನೇ ಅಂಗವಾಗಿ ಪತ್ರಿಕಾರಂಗ ಜನತೆಯ ಧ್ವನಿಯಾಗಿ ಕಾರ್ಯನಿರ್ವಸಬೇಕು ಎಂದ ಅವರು, ನಮಗೆ ಸ್ವಾತಂತ್ರ ಸಿಕ್ಕು 70 ವರ್ಷ ಕಳೆದರು ಕೂಡಾ ಈಗಲೂಕೂಡಾ ಜಾತಿ ವ್ಯವಸ್ಥೆ, ಮೂಢನಂಬಿಕೆ, ಬಾಲ್ಯವಿವಾಹ, ದೇವದಾಸಿ ಪದ್ಧತಿ, ಮತ್ತು ದಲಿತರಿಗೆ ಗರ್ಭಗುಡಿ ನಿಷೇದದಂತಹ ಅನಿಷ್ಠತೆ ತಾಂಡವವಾಡುತ್ತಿದೆ. ಇದೆಲ್ಲವನ್ನು ಕಂಡೂ ಕಾಣದಂತಿರುವ ನಾವುಗಳು ನಿಜಕ್ಕೂ ಸೋಲನ್ನು ಅನುಭವಿಸಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.

     ಸಾಹಿತಿ ಮೇಟಿ ಕೊಟ್ರಪ್ಪನವರ ನನ್ನೆದೆಯ ಹಾಡು ಕವನ ಸಂಕಲನವನ್ನು ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಐಗೋಳ್ ಚಿದಾನಂದ ಬಿಡುಗಡೆಗೊಳಿಸಿ ಮಾತನಾಡಿದರು. ಸಂದರ್ಭದಲ್ಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ತಾ.ಪಂ. ಅಧ್ಯಕ್ಷೆ ಶಾರದಮ್ಮ, ತಹಶೀಲ್ದಾರ ರಾಘವೇಂದ್ರರಾವ್, ಇ.ಓ. ಸೋಮಶೇಖರ್, ಇದ್ದರು. ಕರ್ನಾಟಕ ಪ್ರೆಸ್‍ಕ್ಲಬ್‍ನ ಅಧ್ಯಕ್ಷ ಕೆ.ಅಯ್ಯನಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪತ್ರಕರ್ತ ಹೆಚ್.ವಿಶ್ವನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಪತ್ರಕರ್ತರ ಕಾಲೋನಿಯಲ್ಲಿ ಸಸಿ ನೆಡುವ ಕಾರ್ಯಕ್ರಮ ನೆರವೇರಿಸಿದರು.

      ಇದೇ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಹೆಚ್.ಹಾಲಪ್ಪ, ಶಿವಕುಮಾರ್, ಯು.ಹೆಚ್.ಸೋಮಶೇಖರ್, ಅಳವುಂಡಿ ಭರ್ಮಪ್ಪ, ಶಶಿಕಲಾ ಕೊಪ್ಪದ್ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಪತ್ರಕರ್ತ ಶಿವಕುಮಾರ ಪತ್ರಿಮಠ ಸ್ವಾಗತಿಸಿ, ಹೆಚ್.ಎಂ.ಗುರುಬಸವರಾಜ ಕಾರ್ಯಕ್ರಮ ನಿರೂಪಿಸಿದರು. ಹೆಚ್.ಚಂದ್ರಪ್ಪ ವಂದನಾರ್ಪಣೆ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link