ತುಮಕೂರು 
ನಗರದ ಸಿದ್ಧಗಂಗಾ ಬಡಾವಣೆ ಬಳಿ ರಾಯಗಾಲುವೆಯನ್ನು ಆಕ್ರಮಿಸಿ ಮಾಡಿದ್ದ ಒತ್ತುವರಿಯನ್ನು ನಗರಪಾಲಿಕೆಯಿಂದ ಶುಕ್ರವಾರ ತೆರವುಗೊಳಿಸಲಾಯಿತು. ಹಲವೆಡೆ ಕಾಲುವೆ ನೀರು ಹರಿಯಲು ತೊಂದರೆಯಾಗಿದ್ದ ಅಡಚಣೆಗಳನ್ನು ತರವು ಮಾಡಿದರು.
ಗುರುವಾರ ರಾತ್ರಿ ಭಾರಿ ಮಳೆ ಸುರಿದು ಕಾಲುವೆ ಉಕ್ಕಿ ಹರಿದು, ಮನೆಗಳಿಗೆ ನೀರು ನುಗ್ಗಿ ಅವಾಂತರವಾಗಿತ್ತು, ಈ ಹಿನ್ನೆಲೆಯಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ನಗರಪಾಲಿಕೆ ಅಧಿಕಾರಿಗಳೊಂದಿಗೆ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿ ಪರಿಶೀಲಿಸಿದರು. ಕೂಡಲೇ ಒತ್ತುವರಿ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಎಸ್‍ಐಟಿ, ಸಿದ್ಧಗಂಗಾ ಬಡಾವಣೆ, ಭದ್ರಮ್ಮ ಕಲ್ಯಾಣ ಮಂಟಪ, ಆರ್.ಟಿ.ನಗರ ಮೂಲಕ ಸಾಗುವ ಈ ರಾಯಗಾಲುವೆಯ ರಗಳೆ ಇತ್ತೀಚಿನದಲ್ಲ. ಕಾಲುವೆಯ ನೈಸರ್ಗಿಕ ಮಾರ್ಗ ಬದಲಾಯಿಸಿ, ಮಾರ್ಗದುದ್ದಕ್ಕೂ ಒತ್ತುವರಿ ಮಾಡಿಕೊಂಡು, ಹರಿಯುವ ನೀರಿನ ಸರಾಗತೆಗೆ ಅಡ್ಡಿಯಾಗಿರುವುದರಿಂದ ಪ್ರತಿ ಮಳೆಗಾಲದಲ್ಲೂ ಕಾಲುವೆ ತುಂಬಿ ಹೊರಳಿ ಮನೆಗಳಿಗೆ ನೀರು ನುಗ್ಗಿ ಅವಾಂತ ಸೃಸ್ಟಿಯಾಗುತ್ತದೆ. 30-40 ವರ್ಷಗಳ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯವಾಗಿಲ್ಲ.
ಗುರುವಾರ ಸುರಿದ ಭಾರಿ ಮಳೆಯ ನೀರು ರಾಯಗಾಲುವೆ ಕಡೆಗೆ ಪ್ರವಾಹದಂತೆ ಹರಿದುಬಂದಿತು. ಕಾಲುವೆಯಲ್ಲಿ ನೀರು ಪೂರ್ಣ ಪ್ರಮಾಣದಲ್ಲಿ ಸರಾಗವಾಗಿ ಹರಿದುಹೋಗಲು ಅವಕಾಶವಿಲ್ಲದೆ, ರಸ್ತೆಗಳಿಗೆ, ಮನೆಗಳಿಗೆ ನುಗ್ಗಿ ಅವಾಂತರ ಮಾಡಿತ್ತು. ಮನೆ, ರಸ್ತೆ, ಚರಂಡಿ ಏಕವಾಗಿ ಫಜೀತಿಯಾಗಿತ್ತು.
27ನೇ ವಾರ್ಡಿನ ಮುಸ್ಲೀಂ ಹಾಸ್ಟೆಲ್ ಹಿಂಭಾಗದ ಭಾಗದಿಂದ ಆರಂಭವಾಗುವ ಈ ರಾಯಗಾಲುವೆ 25, 27, 16 ಹಾಗೂ 19ನೇ ವಾರ್ಡ್‍ವರೆಗೆ ಎಸ್‍ಐಟಿ, ಎಸ್‍ಎಸ್ ಪುರಂ, ಸಿದ್ಧಗಂಗಾ ಬಡಾವಣೆ, ತೋಟಗಾರಿಕೆ ಇಲಾಖೆ ಪ್ರದೇಶ, ಭದ್ರಮ್ಮ ಕಲ್ಯಾಣ ಮಂಟಪ ಎದುರು ಸಾಗಿ, ಆರ್‍ಟಿ ನಗರ, ಕೋತಿ ತೋಪು ಮಾರ್ಗವಾಗಿ ಅಮಾನಿಕೆರೆವರೆಗೂ ಮುಂದುವರೆಯುತ್ತದೆ. ಸುಮಾರು ಮೂರು ಕಿಲೋಮೀಟರ್ ಉದ್ದದ ಈ ರಾಯಗಾಲುವೆಯ ನೈಸರ್ಗಿಕ ಮಾರ್ಗವೇ ಬದಲಾಗಿದೆ.
ಮಾರ್ಗದುದ್ದಕ್ಕೂ ಎಲ್ಲಾ ಕಡೆಯೂ ಒತ್ತುವರಿಯಾಗಿ ಮೂಲಸ್ವರೂಪ ಬದಲಾಗಿ ಕಿರಿದಾಗಿದೆ. ಕೆಲವು ಕಡೆ 4-5 ಅಡಿ ಅಗಲವೂ ಕಂಡುಬರುತ್ತಿಲ್ಲ. ಕಾಲುವೆ ಒತ್ತುವರಿ ಮಾಡಿಕೊಂಡು ಮನೆ, ಕಾಂಪೌಂಡ್ ನಿರ್ಮಿಸಿಕೊಳ್ಳಲಾಗಿದೆ. ಕಾಲುವೆ ಒತ್ತುವರಿ ಮಾಡಿಕೊಂಡರೆ ಮಳೆಗಾಲದಲ್ಲಿ ಆಗಬಹುದಾದ ಅನಾಹುತ, ಅವಾಂತರಗಳ ಬಗ್ಗೆ ತಿಳಿದವರೇ, ಈಗ ಸಮಸ್ಯೆಯಾದ ನಂತರ ನಗರಪಾಲಿಕೆ ವಿರುದ್ಧ ದೂರುತ್ತಿದ್ದಾರೆ. ದೂರಿನಲ್ಲಿ ಸತ್ಯಾಂಶವೂ ಇದೆ, ಕಾಲುವೆ ಒತ್ತುವರಿ ಮಾಡಿಕೊಂಡು ಮನೆ, ಕಾಂಪೌಂಡು ಕಟ್ಟುವುದಕ್ಕೆ ಅನುಮತಿ ನೀಡದೆ ಆಗಿನ ಸ್ಥಳೀಯ ಆಡಳಿತಗಾರರು ತಡೆದಿದ್ದರೆ ಇಂದು ಈ ಅವ್ಯವಸ್ಥೆ ಆಗುತ್ತಿರಲಿಲ್ಲ ಎಂದು ಅಲ್ಲಿನ ನಿವಾಸಿಗಳೇ ಹೇಳುತ್ತಾರೆ.
ಕಾಲುವೆ ಸ್ಥಿತಿಗತಿ ಪರಿಶೀಲನೆ ಮಾಡಿದ ಶಾಸಕರು, ಹೆಚ್ಚಿನ ಪ್ರಮಾಣದಲ್ಲಿ ಒತ್ತುವರಿ ಮಾಡಿ, ನೀರುಹರಿಯಲು ಅಡ್ಡಿಯಾಗಿರುವ ಒತ್ತುವರಿಯನ್ನು ಇಂದೇ ತೆರವು ಮಾಡಬೇಕು ಎಂದು ಸ್ಥಳದಲ್ಲಿದ್ದ ನಗರ ಪಾಲಿಕೆ ಆಯುಕ್ತರಾದ ರೇಣುಕಾ ಅವರಿಗೆ ಸೂಚಿಸಿದರು. ತುರ್ತಾಗಿ ಎರಡು ಮೂರು ಕಡೆ ಕಾಲುವೆ ಒತ್ತುವರಿ ತೆರವು ಮಾಡಿ ನೀರು ಹರಿಯಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ಆಯುಕ್ತರು ಹೇಳಿದರು.
ಈ ಕಾಲುವೆಗೆ ಅನೇಕ ಮನೆಗಳ ಶೌಚಾಲಯದ ಸಂಪರ್ಕ ನೀಡಿದ್ದಾರೆ. ಹೀಗಾಗಿ ಕಾಲುವೆಯಲ್ಲಿ ಕೊಳಚೆ ಬೆರೆತು ದುವಾರ್ಸನೆ ಬೀರುತ್ತದೆ. ಇಂತಹ ಸಂಪರ್ಕಗಳನ್ನು ತೆಗೆಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ಪ್ರತಿ ಬಾರಿ ಮಳೆ ಬಂದಾಗಲೂ ಫಕೀರ ಪಾಳ್ಯ, ಸಿದ್ಧಗಂಗಾ ಬಡಾವಣೆ, ತೋಟಗಾರಿಕೆ ಇಲಾಖೆ ಸಮೀಪ, ಆರ್.ಟಿ. ನಗರ ಪ್ರದೇಶದಲ್ಲಿ ಕಾಲುವೆ ತುಂಬಿ ಅಕ್ಕಪಕ್ಕದ ಮನೆಗಳಿಗೆ ನುಗ್ಗುತ್ತದೆ. ಕೊಳಚೆ ನೀರು ಮನೆ ಸೇರಿ ಗಬ್ಬು ನಾರುತ್ತದೆ, ಇಲ್ಲಿನ ಜನರಿಗೆ ಮಳೆಗಾಲದಲ್ಲಿ ಇಂತಹ ವನವಾಸ ತಪಿದ್ದಲ್ಲ.
ಕಾಲುವೆ ಒತ್ತುವರಿಯಲ್ಲದೆ, ಎಲ್ಲಾ ಕಡೆ ಕಸಕಡ್ಡಿ, ಪ್ಲಾಸ್ಟಿಕ್ ಬಾಟೆಲ್, ಮನೆ ತ್ಯಾಜ್ಯ ಹಾಕಿ, ಅವು ಕಾಲುವೆಯಲ್ಲಿ ತುಂಬಿಕೊಂಡು ನೀರು ಸರಗವಾಗಿ ಹರಿಯದೆ, ಹೊರಳಲೂ ಕಾರಣವಾಗುತ್ತದೆ. ಕೋತಿತೋಪು ವೃತ್ತದ ಬಳಿಯಿಂದ ಅಮಾನಿಕೆರೆ ಒಳಭಾಗದ ಕಾಲುವೆಗೆ ಹರಿಯುವ ಮಾರ್ಗದಲ್ಲಿ ಕುಡಿಯುವ ನೀರಿನ ದೊಡ್ಡ ಪೈಪ್‍ಗಳು ಅಡ್ಡಲಾಗಿರುವುದರಿಂದಲೂ ನೀರು ಸರಾಗವಾಗಿ ಹರಿದುಹೋಗಲಾಗುತ್ತಿಲ್ಲ. ಇಲ್ಲಿ ನೀರು ಸಂಗ್ರಹಗೊಂಡು ಹಿಮ್ಮುಖವಾಗಿ ಹರಿಯಲು ಆರಂಭವಾಗಿ ಸಮಸ್ಯೆ ಉಲ್ಬಣವಾಗುತ್ತದೆ.
ಮೂಲ ನೈಸರ್ಗಿಕ ಕಾಲುವೆ ಮಾರ್ಗವನ್ನು ಉಳಿಸಬೇಕೆಂದರೆ ಇಲ್ಲಿ ನಿರ್ಮಣವಾಗಿರುವ ಸುಮಾರು 400 ಮನೆಗಳನ್ನು ತೆರವು ಮಾಡಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಅಂತಹ ಪ್ರಯತ್ನ ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದರು. ಅಮೃತ್ ಯೋಜನೆಯಡಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಈ ಕಾಲುವೆ ದುರಸ್ತಿ ಕಾಮಗಾರಿ ನಡೆದಿದೆ. ಹೂಳು ತೆಗೆಯುವುದು, ತಡೆಗೋಡೆ ನಿಮಾಣ, ಅಗತ್ಯವಿರುವ ಕಡೆ ಸ್ಲ್ಯಾಬ್ ಹಾಕುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸಾಧ್ಯವಾದಷ್ಟು ಸುಸ್ಥಿತಿಗೆ ತರುವ ಪ್ರಯತ್ನ ಮಾಡಲಾಗುತ್ತದೆ ಎಂದು ಶಾಸಕ ಜ್ಯೋತಿಗಣೇಶ್ ಹೇಳಿದರು.
ನಗರಪಾಲಿಕೆ ಆಯುಕ್ತರಾದ ರೇಣುಕಾ, 25ನೇ ವಾರ್ಡ್ ಪಾಲಿಕೆ ಸದಸ್ಯೆ ಮಂಜುಳಾ ಆದರ್ಶ್, 15ನೇ ವಾರ್ಡ್‍ನ ಗಿರಿಜಾ ಧನಿಯಾಕುಮಾರ್, ಮುಖ್ಯ ಇಂಜಿನಿಯರ್ ಮಹೇಶ್, ಕಾರ್ಯಪಾಲಕ ಇಂಜಿನಿಯರ್ ಆಶಾ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








