ಬೆಂಗಳೂರು
ಸುಬ್ರಹ್ಮಣ್ಯಪುರ ಉಪ ವಿಭಾಗದ ಸುಬ್ರಹ್ಮಣ್ಯಪುರ,ತಲಘಟ್ಟಪುರ, ಕೋಣನಕುಂಟೆ, ಪುಟ್ಟೇನಹಳ್ಳಿ, ಕೆ.ಎಸ್. ಲೇಔಟ್ ಸೇರಿ ಐದು ಪೊಲೀಸ್ ಠಾಣೆಗಳ ವ್ಯಾಪ್ತಿಯ ಸುಮಾರು 206 ಮಂದಿ ರೌಡಿಗಳ ಮನೆ ಮೇಲೆ ದಕ್ಷಿಣ ವಿಭಾಗದ ಪೊಲೀಸರು ದಾಳಿ ನಡೆಸಿದ್ದಾರೆ.
ಅಪರಾಧ ಕೃತ್ಯಗಳನ್ನು ಹತ್ತಿಕ್ಕಿ ರೌಡಿ ಚಟುವಟಿಕೆಗಳನ್ನು ಮಟ್ಟ ಹಾಕಲು ಐದು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮಂಗಳವಾರ ದಿಢೀರ್ ದಾಳಿ ನಡೆಸಿ 266 ಮಂದಿ ರೌಡಿಗಳನ್ನು ಕರೆತಂದು ವಿಚಾರಣೆ ನಡೆಸಿ ಎಚ್ಚರಿಕೆ ನೀಡಲಾಗಿದೆ ಎಂದು ಡಿಸಿಪಿ ಡಾ. ರೋಹಿಣಿ ಕಟೋಚ್ ತಿಳಿಸಿದ್ದಾರೆ.
ಕುಮಾರಸ್ವಾಮಿ ಲೇಔಟ್‍ನ ಆಟದ ಮೈದಾನದಲ್ಲಿ ಎಲ್ಲ ರೌಡಿಗಳ ಪರೇಡ್ ನಡೆಸಿ ಅವರ ಚಟುವಟಿಕೆಗಳು, ಉದ್ಯೋಗ, ಸಂಬಂಧಿಕರು, ಮೊಬೈಲ್ ಸಂಖ್ಯೆ ಇನ್ನಿತರ ಮಾಹಿತಿ ಪಡೆದುಕೊಳ್ಳಲಾಗಿದೆ.ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಟ್ಯಾಬ್ಲೆಟ್ ಮಂಜ, ಕೂಲಿ ಸೀನಾ, ಮಂಜೇಶ ಮತ್ತವರ ಗ್ಯಾಂಗ್ ಸೇರಿದಂತೆ 206 ಮಂದಿ ರೌಡಿಗಳಿಗೆ ಇನ್ನು ಮುಂದೆ ರೌಡಿ ಚಟುವಟಿಕೆಗಳಲ್ಲಿ ತೊಡಗುವುದು, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದು ಕಂಡು ಬಂದರೆ ಗೂಂಡಾಕಾಯ್ದೆ ದಾಖಲಿಸುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದರು.
ಸ್ಥಳೀಯರಲ್ಲಿ ಭಯಭೀತಿ ಉಂಟು ಮಾಡುವುದು, ಮಾರಕಾಸ್ತ್ರಗಳನ್ನಿಡಿದು ಓಡಾಡುವುದು, ಬೆದರಿಕೆ, ಸುಲಿಗೆ ಕೃತ್ಯಗಳಿಗೆ ಕೈಹಾಕಿದರೆ ಮುಲಾಜಿಲ್ಲದೆ ಬಂಧಿಸಿ ಜೈಲಿಗೆ ಕಳುಹಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಪರೇಡ್‍ನಲ್ಲಿದ್ದ ಕೆಲವು ರೌಡಿಗಳು ಇತ್ತೀಚಿನ ದಿನಗಳಿಂದ ಅಪರಾಧ ಕೃತ್ಯಗಳಿಂದ ದೂರ ಉಳಿದಿರುವುದು ಕಂಡು ಬಂದಿದ್ದು, ಅವರನ್ನು ರೌಡಿ ಪಟ್ಟಿಯಿಂದ ಕೈಬಿಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗು ವುದು ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








