ತುಮಕೂರು
ನಗರದ ಸಿದ್ದಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿಗಳಿಗೆ ಗೌರವಾರ್ಥವಾಗಿ ಮಠದ ಮಕ್ಕಳು ಸಾಮೂಹಿಕವಾಗಿ ಕೇಶ ಮುಂಡನೆ ಮಾಡಿಸಿಕೊಂಡಿದ್ದು ಅಖಿಲ ಕರ್ನಾಟಕ ಸವಿತಾ ಸಮಾಜದ ಯುವಕರ ಸಂಘದ ವತಿಯಿಂದ ಉಚಿತವಾಗಿ ಮಾಡಲಾಯಿತು.
ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳು ಲಿಂಗೈಕ್ಯರಾದ ಬಳಿಕ ವಿದ್ಯಾರ್ಥಿಗಳು ಅನಾಥ ಭಾವದಿಂದ ನೊಂದಿಕೊಂಡಿದ್ದರು. ಅದಕ್ಕಾಗಿ ಶ್ರೀಗಳಿಗೆ ನಮನ ಸಲ್ಲಿಸಲು ಸಾಮೂಹಿಕ ಕೇಶಮುಂಡನೆ ಕಾರ್ಯಕ್ಕೆ ಮುಂದಾಗಿದ್ದರು. ಇದಕ್ಕೆ ಕಳೆದ ಜ.29ರಂದೇ ಸಮಯ ನಿಗದಿಯಾಗಿತ್ತಾದರೂ ನಂತರ ಕಾರಣಾಂತರಗಳಿಂದ ಅದನ್ನು ಮುಂದೂಡಲಾಗಿತ್ತು. ಈ ಸೇವೆ ಮಾಡಲು ಫೆ.5ರಂದು ಅವಕಾಶ ಸಿಕ್ಕಿದ್ದು, ಮಂಗಳವಾರ ಬೆಳಗ್ಗೆಯಿಂದಲೇ ಮಕ್ಕಳಿಗೆ ಕೇಶ ಮುಂಡನೆ ಕಾರ್ಯ ಪ್ರಾರಂಭ ಮಾಡಲಾಗಿತ್ತು.
ಕರ್ನಾಟಕ ಸವಿತಾ ಸಮಾಜದ ರಾಜ್ಯಾಧ್ಯಕ್ಷ ಲಕ್ಷ್ಮೀಪ್ರಸನ್ನ ನೇತೃತ್ವದಲ್ಲಿ ನಡೆದ ಕೇಶಮುಂಡನೆ ಕಾರ್ಯದಲ್ಲಿ ಕರ್ನಾಟಕ ರಾಜ್ಯಾದಾದ್ಯಂತ ವಿವಿಧ ಜಿಲ್ಲೆಗಳಿಂದ ಸವಿತಾ ಸಮಾಜದ ಬಂಧುಗಳು ಆಗಮಿಸಿದ್ದರು. ಸಿದ್ದಗಂಗಾ ಮಠದಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತವಾಗಿ ಕೇಶ ಮುಂಡನೆ ಮಾಡಲಾಗಿದೆ. ಮಠದ ವಿದ್ಯಾರ್ಥಿಗಳು ತಮಗೆ ತಿಳಿದಹಾಗೇ ಕೇಶ ಮುಂಡನೆ ಮಾಡಿಸಿ ಶ್ರೀಗಳಿಗೆ ಗೌರವ ಸಲ್ಲಿಸಿದರೆ, ಮಠದ ಮಕ್ಕಳಿಗೆ ಕೇಶ ಮುಂಡನೆ ಮಾಡಲು ನಮಗೆ ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯವೆಂದೇ ಭಾವಿಸುತ್ತಿದ್ದೇವೆ. ಶ್ರೀಗಳಿಗೆ ನಮನ ಸಲ್ಲಿಸಲು ನಮಗೆ ಸಿಕ್ಕ ಅವಕಾಶ ಇದಾಗಿದೆ ಎಂದು ಸ್ಪಿನ್ ಸೆಲೂನ್ ಸಂಸ್ಥಾಪಕ ನಾಗರಾಜ್ ತಿಳಿಸಿದ್ದಾರೆ.
ತುಮಕೂರು ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಮಂಜೇಶ್ ಮಾತನಾಡಿ, ಮಕ್ಕಳಿಗೆ ಕೇಶ ಮುಂಡನೆ ಮಾಡುತ್ತಿರುವುದು ನಮ್ಮ ಪುಣ್ಯ. ಶ್ರೀಗಳಿಗೆ ನಮನ ಸಲ್ಲಿಸುವ ನಿಟ್ಟಿನಲ್ಲಿ ಉಚಿತವಾಗಿ ಕೇಶ ಮುಂಡನೆ ಮಾಡಿದ್ದೇವೆ. ಈ ಕಾರ್ಯಕ್ಕಾಗಿ ನಮ್ಮ ಕರೆಗೆ ಬೆಲೆಕೊಟ್ಟು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿ ಮಕ್ಕಳಿಗೆ ಕೇಶ ಮುಂಡನೆ ಮಾಡಿರುವುದು ಶ್ಲಾಘನೀಯ ಎಂದರು.
ಬೆಳಗ್ಗೆ 7 ಗಂಟೆಗೆ ಪ್ರಾರಂಭ ಮಾಡಲಾದ ಕೇಶ ಮುಂಡನೆ ಕಾರ್ಯ ಸಂಜೆ 5 ಗಂಟೆಯವರೆಗೆ ನಡೆದಿದ್ದು ಸುಮಾರು 1000ಕ್ಕೂ ಹೆಚ್ಚು ಸಮಾಜದ ಬಂಧುಗಳಿಂದ 7000 ಮಂದಿ ಮಕ್ಕಳಿಗೆ ಕೇಶ ಮುಂಡನೆ ಮಾಡಲಾಗಿದೆ. ಈ ಕಾರ್ಯದಲ್ಲಿ ಸಮಾಜದ ಮುಖಂಡರಾದ ಪಾರ್ಥಸಾರಧಿ, ಹರೀಶ್, ಕಟ್ವೆಲ್ ರಂಗನಾಥ್, ಮೇಲಾಕ್ಷಪ್ಪ, ಸುಪ್ರೀಂ ಸುಬ್ಬಣ್ಣ, ನಾಗೇಂದ್ರ ಸೇರಿದಂತೆ ಇತರರು ಭಾಗಿಯಾಗಿದ್ದರು.