ಗುಬ್ಬಿ
ದೇಶದಾಧ್ಯಂತ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ವೈರಸ್ ಮಹಾಮಾರಿ ಸೋಂಕು ತಡೆಗಟ್ಟುವ ಹಿತದೃಷ್ಠಿಯಿಂದ ಪ್ರಧಾನ ಮಂತ್ರಿಯವರು ಘೋಷಿಸಿರುವ ಭಾರತ ಲಾಕ್ ಡೌನ್‍ಗೆ ತಾಲ್ಲೂಕಿನಾಧ್ಯಂತ ಇಂದು ಮತ್ತಷ್ಟು ಬಿಗಿ ಬಂದೋಬಸ್ತ್ ಮಾಡಲಾಗಿದ್ದು ರಾಷ್ಟ್ರೀಯ ಹೆದ್ದಾರಿಗೆ ಬ್ಯಾರಿಕೇಡ್‍ಗಳನ್ನು ಹಾಕುವ ಮೂಲಕ ಪಟ್ಟಣದ ಮೂಲಕ ಹಾದು ಹೋಗುವ ಎಲ್ಲಾ ಖಾಸಗಿ ವಾಹನಗಳನ್ನು ಪೋಲೀಸರು ತಪಾಸಣೆ ನಡೆಸಿದರು.
ಮಾಸ್ಕ್ ಇಲ್ಲದೆ ದ್ವಿಚಕ್ರವಾಹನಗಳಲ್ಲಿ ಬಿಸಿ ಮುಟ್ಟಿಸುವುದರ ಜೊತೆಗೆ ಮಾಸ್ಕ್ ಗಳನ್ನು ವಿತರಿಸಿ ಅನಗತ್ಯವಾಗಿ ಮನೆಯಿಂದ ಹರಬಾರದಂತೆ ಎಚ್ಚರಿಕೆಯನ್ನು ನೀಡಿದರು. ಪದೆ ಪದೆ ಅಡ್ಡಾಡುತ್ತಿದ್ದ ದ್ವಿಚಕ್ರವಾಹನ ಸವಾರರಿಗೆ ಕೈಮುಗಿದ ಪೋಲೀಸರು ಅನಗ್ತಯವಾಗಿ ಓಡಾಡದಂತೆ ಮನವಿಯನ್ನು ಮಾಡಿದರು.
ಪಟ್ಟಣದಲ್ಲಿ ಸಣ್ಣ ಪುಟ್ಟ ಪೆಟ್ಟಿಗೆ ಅಂಗಡಿಗಳಿಂದ ಹಿಡಿದು ಚಿತ್ರಮಂದಿರ, ಬಟ್ಟೆ ಅಂಗಡಿಗಳು ಸೇರಿದಂತೆ ಬಹುತೇಕ ಎಲ್ಲಾ ಅಂಗಡಿ ಮಂಗಟ್ಟುಗಳು ಮತ್ತು ಹೋಟೆಲ್ ಉಪಹಾರ ಮಂದಿರಗಳು ಸಂಪೂರ್ಣವಾಗಿ ಬಂದ್ ಮಾಡುವ ಮೂಲಕ ಮನೆಯಲ್ಲಿ ಉಳಿದು ಉತ್ತಮ ಪ್ರತಿಕ್ರಿಯೆ ಸೂಚಿಸಿದರು. ಕೊರೊನಾ ಹಿನ್ನೆಲೆಯಲ್ಲಿ ತಾಲೂಕಿನ ಹಲವು ಗ್ರಾಮಗಳಲ್ಲಿ ಸ್ವಯಂ ಜಾಗೃತರಾಗಿ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿರುವುದು ಕಂಡು ಬಂದಿದೆ.
ತಾಲೂಕಿನ ಕೋಣನಕಲ್ಲು, ಕಕ್ಕೇನಹಳ್ಳಿ, ಬಾಗೂರು, ಸಿಂಗೋನಹಳ್ಳಿ, ಸಿ.ಎಸ್.ಪುರ ಹೋಬಳಿಯ ಹಲವು ಗ್ರಾಮಗಳಲ್ಲಿ ಯುವಕರು ಮತ್ತು ಮುಖಂಡರುಗಳು ಸೇರಿಕೊಂಡು ಮನೆಮನೆಗೆ ಹೋಗಿ ಬೇರೆ ಊರುಗಳಿಂದ ನಿಮ್ಮ ಸಂಬಂಧಿಕರನ್ನು ಯಾವುದೇ ಕಾರಣಕ್ಕೂ ಇಲ್ಲಿಗೆ ಕರೆಸಿಕೊಳ್ಳಬೇಡಿ ಎಂದು ಹೇಳುವ ಜತೆಗೆ ನೀವು ಸಹ ಪಟ್ಟಣಕ್ಕೆ ಸಂಬಂಧಿಕರ ಮನೆಗಳಿಗೆ ಯಾವುದೇ ಕಾರಣಕ್ಕೂ ಹೋಗಬೇಡಿ ಎಂದು ಮನವರಿಕೆ ಮಾಡುತ್ತಿದ್ದಾರೆ. ಪಟ್ಟಣ ಸೇರಿದಂತೆ ತಾಲ್ಲೂಕಿನ ಎಲ್ಲಾ ಹೋಬಳಿ ಕೇಂದ್ರಗಳು ಮತ್ತು ಗ್ರಾಮಗಳಲ್ಲಿಯೂ ಸಾರ್ವಜನಿಕರು ಮನೆಯಲ್ಲಿ ಉಳಿಯುವ ಮೂಲಕ ಉತ್ತಮ ಬೆಂಬಲ ಸೂಚಿಸಿದರು. ತಾಲ್ಲೂಕು ಅಢಳಿತ ಮತ್ತು ಪಟ್ಟಣ ಪಂಚಾಯ್ತಿಯಿಂದ ತ್ಯಾಜ್ಯ ವಿಲೇವಾರಿ ಸೇರಿದಂತೆ ಚರಂಡಿಗಳಿಗೆ ಕ್ರಿಮಿನಾಶಕ ಸಿಂಪರಣೆ ಮಾಡುವ ಮೂಲಕ ಸ್ವಚ್ಚತೆಗೆ ಕ್ರಮಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








