ಬೆಂಗಳೂರ
ದೇಶದಲ್ಲಿ ಕರೋನಾ ಸೋಂಕು ತೀವ್ರವಾಗಿ ಬಾಧಿಸುತ್ತಿರುವ ಮುಂದಿನ 8 ತಿಂಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಗರ್ಭೀಣಿಯರು ನವಜಾಥ ಶಿಶುಗಳಿಗೆ ಜನ್ಮ ನೀಡುತ್ತಿದ್ದು, ಗರ್ಭೀಣಿಯರು ಮತ್ತು ಶಿಶುಗಳ ಆರೋಗ್ಯ ರಕ್ಷಣೆ ದೇಶಕ್ಕೆ ಬಹುದೊಡ್ಡ ಸವಾಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಂತ್ರಿಕ ಸಲಹೆಗಾರರಾದ ಡಾ. ಹೇಮಾದಿವಾಕರ್ ಹೇಳಿದ್ದಾರೆ.
ಮುಂದಿನ 8 ರಿಂದ 10 ತಿಂಗಳ ಅವಧಿಯಲ್ಲಿ ಮೂರರಿಂದ 8 ತಿಂಗಳು ತುಂಬಿರುವ ಗರ್ಭೀಣಿಯರು ಮಕ್ಕಳಿಗೆ ಜನ್ಮ ನೀಡುತ್ತಿದ್ದು, ಬೇರೆ ದೇಶಗಳಿಗೆ ಹೋಲಿಸಿದರೆ ಇದು ಅತಿದೊಡ್ಡ ಸಂಖ್ಯೆಯಾಗಿದೆ. ಕೊರೋನಾ ಸಂಕಷ್ಟದಲ್ಲಿ ಇವರಿಗೆ ಸೋಂಕು ಬಾಧಿಸದಂತೆ ನೋಡಿಕೊಳ್ಳಬೇಕು. ಎಲ್ಲಾ ಕಡೆ ಲಾಕ್ ಡೌನ್ ಮಾಡಬಹುದು. ಆದರೆ ಗರ್ಭೀಣಿಯರ ಹೆರಿಗೆಯನ್ನು ಲಾಕ್ ಡೌನ್ ಮಾಡಲು ಸಾಧ್ಯವಿಲ್ಲ. ಗರ್ಭೀಣಿಯರು ಜನ್ಮ ನೀಡುವುದು ಸಹಜ ಪ್ರಕ್ರಿಯೆ. ಅವರನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದು ಎಲ್ಲರ ಕರ್ತವ್ಯ ಎಂದಿದ್ದಾರೆ.
ಗರ್ಭೀಣಿಯರು ಆರೋಗ್ಯವಾಗಿದ್ದರೆ ಯಾವುದೇ ಸಮಸ್ಯೆ ಇಲ್ಲ. ಕಾಂಪ್ಲೀಕೇಷನ್ ಇಲ್ಲದಿದ್ದರೆ ವೈದ್ಯರ ಬಳಿಗೆ ಹೋಗುವುದು ಕಡಿಮೆ ಮಾಡಬೇಕು. ಸಾಮಾನ್ಯವಾಗಿ ಗರ್ಭೀಣಿಯರು ಎಂಟು ಬಾರಿ ರಕ್ತ ಮತ್ತಿತರ ತಪಾಸಣೆಗೆ ಹೋಗಬೇಕಾಗುತ್ತದೆ. ಸಮಸ್ಯ ಇಲ್ಲದವರು ಮೂರು ಬಾರಿ ಹೋದರೂ ಸಹ ಸಾಕು. ಇಂತಹ ಸಂಕಷ್ಟ ಸಂದರ್ಭದಲ್ಲಿ ಪದೇ ಪದೇ ವೈದ್ಯರ ಬಳಿ ಹೋಗುವ ಅಗತ್ಯವಿಲ್ಲ. ಅನಗತ್ಯ ಅಲೆದಾಟ ಸರಿಯಲ್ಲ ಎಂದರು.
ಹಾಗೆಂದು ಹುಟ್ಟುವ ಮಕ್ಕಳಿಗೆ ಕೊರೋನಾದಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ. ಇದಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಬೇರೆ ಯಾವುದೇ ಔಷಧೋಪಚಾರದ ಅಗತ್ಯವೂ ಇಲ್ಲ. ಕೊರೋನಾದಿಂದ ಮಕ್ಕಳು ವಿಕಲಾಂಗರಾಗುವುದಿಲ್ಲ ಎಂದು ಡಾ. ಹೇಮಾದಿವಾಕರ್ ಸ್ಪಷ್ಟಪಡಿಸಿದರು.
ಸಾಮಾನ್ಯವಾಗಿ ಗರ್ಭೀಣಿಯರು 40 ವರ್ಷಕ್ಕಿಂತ ಕಡಿಮೆ ವಯೋಮಾನದವರಿದ್ದು, ವಯಸ್ಸು ಕಡಿಮೆ ಇರುವುದರಿಂದ ಸೋಂಕು ತಗುಲಿದರೂ ಸಹ ಬೇಗ ಗೆದ್ದು ಬರುತ್ತಾರೆ. ಹಾಗೆಂದು ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದೆ ಎಂದಲ್ಲ. ಗರ್ಭೀಣಿಯರಿಗೆ ರೋಗವನ್ನು ನಿಯಂತ್ರಿಸುವ ಸಾಮರ್ಥ್ಯ ಕಡಿಮೆ ಇರುತ್ತದೆ. ಹೀಗಾಗಿ ಗರ್ಭೀಣಿಯರು, ಮಕ್ಕಳು, ಹಿರಿಯ ನಾಗರಿಕರನ್ನು ಜಾಗರೂಕತೆಯಿಂದ ನೋಡಿಕೊಳ್ಳಬೇಕು. ಪೌಷ್ಠಿಕ ಆಹಾರ, ಸುರಕ್ಷಿತ ವಾತಾವರಣದಲ್ಲಿಟ್ಟು ಆರೈಕೆ ಮಾಡಬೇಕು ಎಂದು ಸಲಹೆ ಮಾಡಿದರು.
ಕೊರೋನಾ ಅಲ್ಪ ಕಾಲದ ಸಮಸ್ಯೆ ಎಂದು ಭಾವಿಸಲು ಸಾಧ್ಯವಿಲ್ಲ. ಸೋಂಕು ಪತ್ತೆ ಪರೀಕ್ಷೆ ಹೆಚ್ಚಿಸಿದರೆ ಸೋಂಕು ಹೆಚ್ಚಾಗಿ ಕಂಡು ಬರುತ್ತದೆ. ವಿಶ್ವದಾದ್ಯಂತ ಆವರಿಸಿರುವ ಕೊರೋನಾ ಸುಂಟರಗಾಳಿಯಂತೆ ಬಂದು ಮೂರೇ ತಿಂಗಳಲ್ಲೇ ಮಾಯವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೊರೋನಾ ಸೋಂಕು ಎಷ್ಟು ದಿನಗಳ ಕಾಲ ಇರುತ್ತದೆ ಎಂದು ಮುನ್ಸೂಚನೆ ಮಾಡಲು ಯಾವುದೇ ತಜ್ಞರಿಂದಲೂ ಆಗುತ್ತಿಲ್ಲ. ದೇಶದ ಜನತೆ ವಿಭಿನ್ನವಾಗಿದ್ದು, ನಮಗೆ ಈ ಸೋಂಕು ಬಹುದೊಡ್ಡ ಸವಾಲಾಗಿದೆ ಎಂದರು.
ಕೊರೋನಾ ಸೋಂಕು ಹಠಾತ್ ಆಗಿ ಕಡಿಮೆಯಾಗುವುದಿಲ್ಲ. ಆ ರೀತಿಯ ನಿರೀಕ್ಷೆಯೂ ಸರಿಯಲ್ಲ. ಚಿಕನ್ ಪಾಕ್ಸ್ ಒಮ್ಮೆ ಬಂದ ನಂತರ ಮತ್ತೆ ಬರುವುದಿಲ್ಲ. ಆದರೆ ಕೊರೋನಾ ವೈರಸ್ ಬೇರೆ ರೀತಿಯಲ್ಲಿರಲಿದೆ. ಬೇರೆ ಬಗೆಯಲ್ಲಿದ್ದು, ಹಲವು ವಿಧದಲ್ಲಿ ರೂಪಾಂತರ ಹೊಂದಲಿದೆ. ಸುರಕ್ಷಿತ ವಿಧಾನಗಳೇ ಇದಕ್ಕೆ ದಿವ್ಯ ಔಷಧ ಎಂದು ಕಿವಿ ಮಾತು ಹೇಳಿದರು.
ನಾವು ನಿರೀಕ್ಷಿಸಿದಂತೆ ಔಷಧಿ ಸದ್ಯಕ್ಕೆ ದೊರೆಯುವುದಿಲ್ಲ. ಈಗಾಗಲೇ ಅನ್ವೇಷಣೆ ಮಾಡಿರುವ ಔಷಧದ ಮಾನವ ಪ್ರಯೋಗ ಆಗುತ್ತಿದೆ. ಹಾಗೆಂದು ಆಗಸ್ಟ್ 15 ರ ವೇಳೆಗೆ ಔಷಧಿ ಸಿಗುತ್ತದೆ ಎಂದು ಭಾವಿಸುವುದು ಸರಿಯಲ್ಲ. ಈ ವಿಚಾರವನ್ನು ನಾನು ನಕಾರಾತ್ಮಕವಾಗಿ ಹೇಳುತ್ತಿಲ್ಲ. ಒಂದು ವೇಳೆ ಔಷಧಿ ದೊರೆತರೂ ಸಹ ಅದರಿಂದ ಏನೇನು ಪ್ರತಿಕೂಲ ಪರಿಣಾಮಗಳಾಗಬಹುದು ಎಂಬುದನ್ನು ಪತ್ತೆ ಮಾಡಲು ಸಮಯ ಹಿಡಿಯಲಿದೆ. ಹೀಗಾಗಿ ಸಾಕಷ್ಟು ಕಾಲ ಅಳೆದು ತೂಗಿ ನೋಡಿ ನಂತರ ಔಷಧಿ ಪರಿಣಾಮಕಾರಿಯಾಗಿದ್ದರೆ ಮಾರುಕಟ್ಟೆಗೆ ಬಿಡುಗಡೆ ಮಾಡಲು ಅನುಮತಿ ದೊರೆಯಲಿದೆ. ಇದಕ್ಕಾಗಿ ಇನ್ನೂ ಸಾಕಷ್ಟುಸಮಯ ಕಾಯಬೇಕಾಗುತ್ತದೆ ಎಂದು ಡಾ. ಹೇಮಾ ದಿವಾಕರ್ ಅಭಿಪ್ರಾಯಪಟ್ಟರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
