ಅವೈಜ್ಞಾನಿಕ ಪರೀಕ್ಷಾ ನೀತಿ ರದ್ಧತಿಗೆ ಆಗ್ರಹ

0
18

ದಾವಣಗೆರೆ : 

    ಅವೈಜ್ಞಾನಿಕ ಪರೀಕ್ಷಾ ನೀತಿಯನ್ನು ತಕ್ಷಣವೇ ಕೈಬಿಡಬೇಕೆಂದು ಆಗ್ರಹಿಸಿ, ಎಐಡಿಎಸ್‍ಓ ನೇತೃತ್ವದಲ್ಲಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ, ದಾವಣಗೆರೆ ವಿಶ್ವವಿದ್ಯಾನಿಲಯದ ಶಿವಗಂಗೋತ್ರಿ ಕ್ಯಾಂಪಸ್‍ನಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.ಶಿವಗಂಗೋತ್ರಿ ಕ್ಯಾಂಪಸನಲ್ಲಿ ಎಐಡಿಎಸ್‍ಓ ನೇತೃತ್ವದಲ್ಲಿ ತರಗತಿ ಬಹಿಷ್ಕರಿಸಿ, ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ದಾವಣಗೆರೆಯ ವಿವಿಯ ಅವೈಜ್ಞಾನಿಕ ಕ್ರಮ ಖಂಡಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

      ಈ ಸಂದರ್ಭದಲ್ಲಿ ಮಾತನಾಡಿದ ಎಐಡಿಎಸ್‍ಓ ನಗರ ಘಟಕದ ಅಧ್ಯಕ್ಷೆ ಸೌಮ್ಯ, ದಾವಣಗೆರೆ ವಿಶ್ವವಿದ್ಯಾನಿಲಯವು ಪ್ರತಿಬಾರಿಯೂ ಅವೈಜ್ಞಾನಿಕ ನೀತಿಗಳನ್ನು ಜಾರಿಗೆ ತರುವ ಮೂಲಕ, ವಿದ್ಯಾರ್ಥಿಗಳ ಮೇಲೆ ಮಾನಸಿಕ ಒತ್ತಡ ಹೇರುತ್ತಿದೆ. 2017ರಲ್ಲೂ ಪರೀಕ್ಷಾ ನೀತಿ ವಿರುದ್ಧ ಜಿಲ್ಲಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸಿದ್ದರೂ ಸಹ ದಾವಿವಿ ಸ್ಪಂದಿಸಲಿಲ್ಲ.

        ಇದೀಗ ಮತ್ತೆ ವಿದ್ಯಾರ್ಥಿಗಳಿಗೆ ಮಾರಕವಾಗುವ ರೀತಿಯಲ್ಲಿ ಅವೈಜ್ಞಾನಿಕ ಪರೀಕ್ಷಾ ನೀತಿ ಜಾರಿಗೆ ತಂದಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿ ವಿಶ್ವ ವಿದ್ಯಾನಿಲಯಗಳು ವಿದ್ಯಾರ್ಥಿಗಳ ಪರವಾಗಿ, ವಿದ್ಯಾರ್ಥಿ ಕಲಿಕಾ ಕ್ರಮ ಅನುಕೂಲಕರವಾಗಿಸುವ ನೀತಿ, ನಿಯಮ ಜಾರಿಗೊಳಿಸಿದರೆ, ನ್ಯಾಯ ಸಮ್ಮತವಾಗಿರುತ್ತದೆ. ಆದರೆ, ದಾವಿವಿಯು ಜಾರಿಗೊಳಿಸುತ್ತಿರುವ ಪರೀಕ್ಷಾ ನೀತಿ, ಪಠ್ಯ ಪುಸ್ತಕ ವಿತರಣೆ, ಪುಸ್ತಕಗಳ ಬೆಲೆ ಹಾಗೂ ಪರೀಕ್ಷಾ ಶುಲ್ಕ ಹೆಚ್ಚಳದಂತಹ ಕ್ರಮಗಳು ಅತ್ಯಂತ ವಿದ್ಯಾರ್ಥಿ ವಿರೋಧಿಯಾಗಿವೆ ಎಂದು ಕಿಡಿಕಾರಿದರು.

         ಒಂದನೇ ಸೆಮಿಸ್ಟರ್ ಅನುತ್ತೀರ್ಣರಾದ ವಿದ್ಯಾರ್ಥಿಗಳು, 3ನೇ ಸೆಮಿಸ್ಟರ್‍ನಲ್ಲಿ ಹಾಗೂ 2ನೇ ಸೆಮಿಸ್ಟರ್‍ನಲ್ಲಿ ನಪಾಸಾಗಿರುವ ವಿದ್ಯಾರ್ಥಿಗಳು 4ನೇ ಸೆಮಿಸ್ಟರ್‍ನಲ್ಲಿ ಮಾತ್ರ ಮರು ಪರೀಕ್ಷೆ ತೆಗೆದುಕೊಳ್ಳಬೇಕೆಂಬ ವಿವಿಯ ನೀತಿಯೂ ಅತ್ಯಂತ ಅವೈಜ್ಞಾನಿಕವಾಗಿದೆ. ಆದ್ದರಿಂದ ತಕ್ಷಣವೇ ಈ ಅವೈಜ್ಞಾನಿಕ ಪರೀಕ್ಷಾ ನೀತಿಯನ್ನು ಕೈಬಿಟ್ಟು, ಎಲ್ಲಾ ಸೆಮಿಸ್ಟರ್‍ಗಳಲ್ಲೂ ಮರು ಪರೀಕ್ಷೆಗೆ ಅವಕಾಶ ಮಾಡಿಕೊಡಬೇಕು ಹಾಗೂ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಮರು ಮೌಲ್ಯಮಾಪನದ ಶುಲ್ಕಯನ್ನು ಹಿಂದಿರುಗಿಸಬೇಕೆಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆಗ್ರಹಿಸಿದರು.

         ಪದವಿ ವಿದ್ಯಾರ್ಥಿಗಳಿಗೆ ಭಾಷಾ ಪಠ್ಯ ಪುಸ್ತಕಗಳು ಪ್ರತಿ ವರ್ಷ 2 ಸೆಮಿಸ್ಟರ್ ಸೇರಿ ಒಂದೇ ಪುಸ್ತಕ ನೀಡಬೇಕು. ಪಠ್ಯ ಪುಸ್ತಕದ ಬೆಲೆಯನ್ನು 50 ರೂ,ಗಳ ಒಳಗೆಯೇ ನಿಗದಿಪಡಿಸಬೇಕು. ಅಂತಿಮ ವರ್ಷದ ಬಿ.ಎಸ್ಸಿ, ಬಿಎ ಪದವಿ ವಿದ್ಯಾರ್ಥಿಗಳಿಗೆ ವಿಭಾಗೀಯ ವಿಷಯಗಳಲ್ಲಿ ಒಂದರಲ್ಲಿ ಅನುತ್ತೀರ್ಣರಾದರೆ ಆ ಒಂದು ವಿಷಯವನ್ನು ಮಾತ್ರ ಮರು ಪರೀಕ್ಷೆಗೆ ತೆಗೆದುಕೊಳ್ಳಬೇಕೆಂಬ ನೀತಿಯನ್ನು ಜಾರಿಗೊಳಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

         ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಧಾವಿಸಿದ ವಿವಿಯ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಕುಲ ಸಚಿವ ಪ್ರೊ.ಕಣ್ಣನ್, ವಿದ್ಯಾರ್ಥಿಗಳ ಸಮಸ್ಯೆಯನ್ನು ಆಲಿಸಿ ಇನ್ನೂ 15 ದಿನಗಳಲ್ಲಿ ಬೋರ್ಡ್ ಆಫ್ ಸ್ಟಡೀಸ್ ಸಭೆ ಕರೆದು, ಆ ಸಭೆಗೆ ವಿದಾರ್ಥಿ ಸಂಘಟನೆ, ವಿದ್ಯಾರ್ಥಿ ಪ್ರತಿನಿಧಿಗಳನ್ನು ಆಹ್ವಾನಿಸಿ, ಚರ್ಚೆ ನಡೆಸಿ ಸಲಹೆ ಪಡೆದು ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ವಾಪಾಸ್ ಪಡೆದರು.

         ಪ್ರತಿಭಟನೆಯ ನೇತೃತ್ವವನ್ನು ಸಂಘಟನೆ ಮುಖಂಡರಾದ ನಾಗಜ್ಯೋತಿ, ಪೂಜಾ, ಸತೀಶ, ಗಣೇಶ, ಪ್ರಹ್ಲಾದ, ಕಾವ್ಯ, ಗುರು, ಪರಶುರಾಮ, ರೇಣುಕಾ ಪ್ರಸನ್ನ, ಅರ್ಪಣಾ, ವಿದ್ಯಾ, ಸೌಮ್ಯ, ಅನಿತಾ, ಸೋನು, ಅಂಜು, ವಿನುತಾ, ರಾಜೇಶ, ರುದ್ರೇಶ, ಬಸವರಾಜ, ಪ್ರಸನ್ನ ಮತ್ತಿತರರು ವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here