ಚಿತ್ರದುರ್ಗ:
ಗ್ರಾಮ ಪಂಚಾಯತ್‍ಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿರಿಸಲಾದ ಶೇ. 22.75 ರ ಅನುದಾನದಲ್ಲಿ 2016-17 ರಿಂದ 2018-19 ರವರೆಗೆ ಮೂರು ವರ್ಷಗಳ ಅವಧಿಯಲ್ಲಿ ಇದುವರೆಗೂ ಬಳಕೆಯಾಗದೆ ಬಾಕಿ ಉಳಿದಿರುವ ಅನುದಾನವನ್ನು ಇನ್ನೆರಡು ತಿಂಗಳ ಒಳಗಾಗಿ ಖರ್ಚು ಮಾಡಬೇಕು. ತಪ್ಪಿದಲ್ಲಿ ಕಾಯ್ದೆಯನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್ ಅವರು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾದ ಜಿ.ಪಂ. ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ಮೂರು ವರ್ಷಗಳ ಅವಧಿಯಲ್ಲಿ ಗ್ರಾಮ ಪಂಚಾಯತ್‍ಗಳಲ್ಲಿ ಪರಿಶಿಷ್ಟರಿಗೆ ಮೀಸಲಿರಿಸಿದ ಅನುದಾನ ಹಾಗೂ ವೆಚ್ಚವಾದ ಅನುದಾನದ ಕುರಿತು ಇದುವರೆಗೂ ಸ್ಪಷ್ಟ ಮಾಹಿತಿ ನೀಡಿಲ್ಲ. ಪರಿಶಿಷ್ಟರ ಕಲ್ಯಾಣಕ್ಕಾಗಿಯೇ ಮೀಸಲಿರಿಸಿದ ಅನುದಾನವನ್ನು ವೆಚ್ಚ ಮಾಡದಿರುವುದು, ಪರಿಶಿಷ್ಟರ ಬಗ್ಗೆ ಈ ಅಧಿಕಾರಿಗಳಿಗೆ ಕಾಳಜಿ ಇಲ್ಲ, ಇಚ್ಛಾಶಕ್ತಿಯೂ ಇಲ್ಲ ಎಂಬುದನ್ನು ಎತ್ತಿ ತೋರಿಸುತ್ತದೆ ಎಂದು ಗರಂ ಆದರು
ಪರಿಶಿಷ್ಟರ ಕಲ್ಯಾಣಕ್ಕಾಗಿ ಅನುದಾನ ಮೀಸಲಿಡುವುದು ಹಾಗೂ ನಿಗದಿತ ಅವಧಿಯೊಳಗೆ ಖರ್ಚು ಮಾಡುವುದು ಕಡ್ಡಾಯವಾಗಿದ್ದು, ಅಧಿಕಾರಿಗಳು ಪ.ಜಾತಿ, ಪ.ಪಂಗಡ ಉಪಸಮಿತಿ ಯೋಜನೆ ಅಧಿನಿಯಮ ಕಾಯ್ದೆಯ ಉಲ್ಲಂಘನೆ ಮಾಡಿದ್ದಾರೆ. ಸಂಬಂಧಪಟ್ಟ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾ.ಪಂ. ಪಿಡಿಒ ಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮುಂಡರಗಿ ನಾಗರಾಜ್ ಹಾಗೂ ನರಸಿಂಹರಾಜು ಅವರು ಸಭೆಗೆ ಒತ್ತಾಯಿಸಿದರು.
ಇದಕ್ಕೆ ಇತರೆ ಸದಸ್ಯರು ಕೂಡ ದನಿಗೂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಅಧ್ಯಕ್ಷರು, ಅಧಿಕಾರಿಗಳಿಗೆ ಎರಡು ತಿಂಗಳ ಕಾಲಾವಕಾಶ ನೀಡಲಾಗುವುದು. ಎರಡು ತಿಂಗಳ ಒಳಗಾಗಿ ಪರಿಶಿಷ್ಠರ ಕಲ್ಯಾಣಕ್ಕಾಗಿ ಮೀಸಲಿರಿಸಿದ ಅನುದಾನವನ್ನು ಅದೇ ಉದ್ದೇಶಕ್ಕೆ ಖರ್ಚು ಮಾಡಲು ವಿಫಲರಾಗುವ ಅಧಿಕಾರಿಗಳ ವಿರುದ್ಧ ಕಾಯ್ದೆಯನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಶಿಸ್ತು ಕ್ರಮಕ್ಕೆ ಶಿಫಾರಸು :
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಕಳೆದ ವರ್ಷ 1062 ಬೋರ್‍ವೆಲ್‍ಗಳಿಗೆ ಕ್ರಿಯಾ ಯೋಜನೆ ಅನುಮೋದನೆ ಪಡೆಯದೆ ಬೊರ್‍ವೆಲ್ ಕೊರೆಯಿಸಿ, ನಿಯಮ ಉಲ್ಲಂಘಿಸಿದ್ದಕ್ಕಾಗಿ ಜಿಲ್ಲೆಯ ಆರೂ ತಾಲ್ಲೂಕುಗಳ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಈಗಾಗಲೆ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದು ಕೋರಲಾಗಿದೆ ಎಂದು ಜಿ.ಪಂ. ಸಿಇಒ ಸತ್ಯಭಾಮ ಅವರು ಸಭೆಗೆ ಮಾಹಿತಿ ನೀಡಿದರು
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಿ.ಪಂ. ಸದಸ್ಯ ಕೃಷ್ಣಮೂರ್ತಿ ಅವರು, ಈ ಅಧಿಕಾರಿಗಳು ಬೇಸಿಗೆಯಲ್ಲಿ ಕುಡಿಯುವ ನೀರಿನ ತುರ್ತು ಅಗತ್ಯಗಳಿಗೆ ಅನುಗುಣವಾಗಿ ಶಾಸಕರು, ತಾ.ಪಂ., ಜಿ.ಪಂ. ಸದಸ್ಯರ ಶಿಫಾರಸ್ಸಿನ ಮೇರೆಗೆ ಬೋರ್‍ವೆಲ್ ಕೊರೆಯಿಸಿ, ಕುಡಿಯುವ ನೀರು ಪೂರೈಸಿ ಸಮಸ್ಯೆ ಬಗೆಹರಿಸಿದ್ದಾರೆ ಇವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಆದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಿರುವುದಕ್ಕೆ ವಿಷಾದವಿದೆ ಎಂದರು.
ಜಿ.ಪಂ. ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಜನಪ್ರತಿನಿಧಿಗಳ ಶಿಫಾರಸ್ಸಿನ ಮೇರೆಗೆ 600-1000 ಅಡಿಗಳ ವರೆಗೆ ಬೋರ್‍ವೆಲ್ ಕೊರೆಯಿಸಲಾಗಿದೆ ಎಂದು ತಿಳಿಸಿದ್ದು, ಯಾವ ತಾಲ್ಲೂಕುಗಳಲ್ಲಿ ಎಷ್ಟು ಬೋರ್‍ವೆಲ್‍ಗಳನ್ನು ಎಷ್ಟು ಅಡಿ ಆಳ ಕೊರೆಯಿಸಲಾಗಿದೆ ಎಂಬ ವಿವರವನ್ನು ನೀಡುವಂತೆ ಕಳೆದ ಸಭೆಯಲ್ಲಿ ಕೋರಲಾಗಿತ್ತು. ಆದರೆ ಸಭೆ ನಡೆದು ಮೂರು ತಿಂಗಳಾದರೂ ಇನ್ನೂ ವಿವರ ನೀಡಿಲ್ಲ ಎಂದು ಆರೋಪಿಸಿದರು.
ಮಹಿಳೆಯರಿಗೆ ನೀರಿನ ಘಟಕ ಹೊಣೆ
ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಸರ್ಕಾರದಿಂದ ಸ್ಥಾಪಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ವಹಣೆ ಮಾಡಲು ಆಯಾ ಗ್ರಾಮದ ಮಹಿಳೆಯೋರ್ವರಿಗೆ ನೀಡಬೇಕು. ಇದರಿಂದಾಗಿ ಮಹಿಳೆಗೂ ಉದ್ಯೋಗ ದೊರೆತಂತಾಗಲಿದ್ದು, ಶುದ್ಧ ಕುಡಿಯುವ ನೀರಿನ ಘಟಕವೂ ಸುಸ್ಥಿತಿಯಲ್ಲಿರಲು ಅನುಕೂಲವಾಗಲಿದೆ ಎಂದು ಜಿ.ಪಂ.ಸದಸ್ಯರು ಸಭೆಯಲ್ಲಿ ಮನವಿ ಮಾಡಿದರು. ಇದಕ್ಕೆ ಜಿ.ಪಂ. ಅಧ್ಯಕ್ಷರೂ ಸಮ್ಮತಿಸಿ, ಆರ್‍ಒ ಘಟಕ ನಿರ್ವಹಣೆಗೆ ಆಯಾ ಗ್ರಾಮದಲ್ಲಿ ಮಹಿಳೆಯರಿಗೆ ನೀಡಲಾಗುವುದು ಎಂದರು.
ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಸುಶೀಲಮ್ಮ, ಜಿ.ಪಂ. ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಅನಂತ್, ಮುಂಡರಗಿ ನಾಗರಾಜ್, ಶಿವಮೂರ್ತಿ ಸೇರಿದಂತೆ ಜಿ.ಪಂ. ಸದಸ್ಯರುಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ