ಜೈಪುರ್:
ವಿಧಾನಸಭೆ ಅಧಿವೇಶನ ಕರೆಯುವ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಮೂರನೇ ಬಾರಿಗೆ ಹಿಂದಿರುಗಿಸಿರುವ ರಾಜಸ್ಥಾನ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರನ್ನು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ರಾಜಭವನದಲ್ಲಿ ಭೇಟಿಯಾಗಿದ್ದಾರೆ.ರಾಜಭವನಕ್ಕೆ ತೆರಳುವ ಮುನ್ನ ರಾಜ್ಯ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಗೆಹ್ಲೋಟ್ ಅವರು “ಲವ್ ಲೆಟರ್ ಈಗಾಗಲೇ ಬಂದಿದೆ. ಈಗ ನಾನು ಅವರೊಂದಿಗೆ ಚಹಾ ಮಾತ್ರ ಸೇವಿಸುತ್ತೇನೆ” ಎಂದು ಹೇಳಿದ್ದಾರೆ.
ಅಧಿವೇಶನ ನಡೆಸಲು ಜುಲೈ 31ಕ್ಕೆ ದಿನನಿಗದಿ ಮಾಡಿ ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸುವುದಾಗಿ ನಮೂದಿಸಲು ನಿರಾಕರಿಸಿದ್ದ ರಾಜ್ಯ ಸಚಿವ ಸಂಪುಟದ ಪ್ರಸ್ತಾವನೆ ರಾಜ್ಯಪಾಲರ ಅಸಮಾಧಾನಕ್ಕೆ ಕಾರಣವಾಗಿತ್ತು. ಪ್ರಸ್ತಾವನೆಯ ಹಿಂದಿನ ಆವೃತ್ತಿಯನ್ನು ಹಿಂದಿರುಗಿಸುವಾಗ ರಾಜ್ಯಪಾಲರು ವಿಶ್ವಾಸಮತ ಕೋರುವುದು ಕಾರ್ಯಸೂಚಿಯಲ್ಲಿದೆ ಎಂದು ಸರ್ಕಾರ ಹೇಳಿದರೆ ಅಧಿವೇಶನವನ್ನು ಶಾರ್ಟ್ ನೋಟೀಸ್ ನೊಂದಿಗೆ ಕರೆಯಬಹುದು ಎಂದು ಸೂಚಿಸಿದ್ದರು.
“ನೀವು ಮೂರನೇ ಬಾರಿಗೆ ಪತ್ರವನ್ನುಹಿಂದಕ್ಕೆ ಕಳುಹಿಸಿದ್ದೀರಿ. ನಿಮಗೆ ಬೇಕಾಗಿರುವುದು ಏನು? ಸ್ಪಷ್ಟವಾಗಿ ಹೇಳಿರಿ. ನಾವು ಹಾಗೆಯೇ ಕೆಲಸ ಮಾಡುತ್ತೇವೆ. ” ಗೆಹ್ಲೋಟ್ ಹೇಳಿದ್ದಾರೆ.ಏತನ್ಮಧ್ಯೆ ಗೋವಿಂದ್ ಸಿಂಗ್ ದೋತಾಸರ್ ರಾಜಸ್ಥಾನ ಕಾಂಗ್ರೆಸ್ ಘಟಕದ ಹೊಸ ಮುಖ್ಯಸ್ಥರಾಗಿ ಔಪಚಾರಿಕವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕಾಂಗ್ರೆಸ್ ನ ಉನ್ನತ ನಾಯಕತ್ವ ಅವರೊಂದಿಗೆ ಇದೆಯಾದ ಕಾರಣ ಚಿಂತಿಸಬೇಕಾಗಿಲ್ಲ ಎಂದು ಮುಖ್ಯಮಂತ್ರಿ ಪಕ್ಷದ ಕಾರ್ಯಕರ್ತರಿಗೆ ತಿಳಿಸಿದರು.
ರಾಜ್ಯಪಾಲರೊಂದಿಗಿನ ಅವರ ಸಭೆ ಸುಮಾರು 15 ನಿಮಿಷಗಳ ಕಾಲ ನಡೆದಿದ್ದು ಇತ್ತೀಚಿನ ದಿನಗಳಲ್ಲಿ ಸಿಎಂ ಗೆಹ್ಲೋಟ್ ರಾಜ್ಯಪಾಲರ ನಡುವೆ ನಡೆದ ಎರಡನೇ ಭೇಟಿ ಇದಾಗಿದೆ.
