ಮಂಡ್ಯ:
ಬಿಜೆಪಿ-ಜೆಡಿಎಸ್ ನಾಯಕರು ಜಂಟಿಯಾಗಿ ಮೈಸೂರು ಚಲೋ ಪಾದಯಾತ್ರೆ ನಡೆಸುತ್ತಿದ್ದಾರೆ. ಐದನೇ ದಿನದ ಪಾದಯಾತ್ರೆ ಮಂಡ್ಯದಿಂದ ಆರಂಭವಾಗಿ, ಮೈಸೂರಿನತ್ತ ಸಾಗುತ್ತಿದೆ. ಇಂದಿನ ಪಾದಯಾತ್ರೆಯಲ್ಲಿ ಹಾಸನದ ಮಾಜಿ ಶಾಸಕ, ಬಿಜೆಪಿ ನಾಯಕ ಪ್ರೀತಂ ಗೌಡ ಭಾಗಿಯಾಗಿದ್ದರು. ಈ ವೇಳೆ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಗಲಾಟೆ ಮಾಡಿಕೊಂಡಿದ್ದಾರೆ.
ಇಂದು ಪಾದಯಾತ್ರೆಯಲ್ಲಿ ಪ್ರೀತಂಗೌಡ ಪಾಲ್ಗೋಂಡಿದ್ದರು. ಈ ವೇಳೆ ಪ್ರೀತಂ ಗೌಡ ಬೆಂಬಲಿಗರು, ಗೌಡರ ಗೌಡ ಪ್ರೀತಂ ಗೌಡ ಎಂದು ಘೋಷಣೆಗಳನ್ನು ಕೂಗುತ್ತಿದ್ದರು. ಇದಕ್ಕೆ ಕೌಂಟರ್ ಕೊಡಲು ಜೆಡಿಎಸ್ ಕಾರ್ಯಕರ್ತರು ದೇವೇಗೌಡರ ಪರ ಘೋಷಣೆ ಕೂಗಿದ್ದಾರೆ.
ನಂತರ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ವಾಗ್ವಾದ ತಾರಕಕ್ಕೆ ಏರಿ ರಸ್ತೆಯಲ್ಲಿ ಪರಸ್ಪರ ಕೈ ಕೈ ಮಿಲಾಯಿಸಿದರು. ಈ ವೇಳೆ ಜೆಡಿಎಸ್ ಕಾರ್ಯಕರ್ತನಿಗೆ ಪ್ರೀತಂ ಗೌಡ ಬೆಂಬಲಿಗರು ಏಟು ನೀಡಿದರು. ಇದರಿಂದ ಕೆಲ ಹೊತ್ತು ತಳ್ಳಾಟ, ನೂಕಾಟವಾಯಿತು. ಉದ್ವಿಗ್ನ ಪರಿಸ್ಥಿತಿಗೆ ತಿರುಗಿದರೂ ಪ್ರೀತಂ ಗೌಡ ಮಾತ್ರ ಬೆಂಬಲಿಗರನ್ನು ನಿಯಂತ್ರಿಸಲಿಲ್ಲ. ಮಧ್ಯೆ ಪ್ರವೇಶಿಸಿದ ಪೊಲೀಸರು ಪ್ರೀತಂ ಗೌಡ ಮತ್ತು ಅವರ ಬೆಂಬಲಿಗರನ್ನು ಸ್ಥಳದಿಂದ ಕಳಿಸಿದರು.