ಪಾವಗಡ :
ನಿಡಗಲ್ ದುರ್ಗವನ್ನು ಪ್ರವಾಸೋದ್ಯಮ ಸ್ಥಳವಾಗಿ ಘೋಷಣೆ ಮಾಡಿ, ಸರ್ಕಾರವು ಪ್ರತಿವರ್ಷ ನಿಡಗಲ್ ಉತ್ಸವವನ್ನು ಆಚರಿಸ ಬೇಕು ಎಂದು ಮಹರ್ಷಿ ವಾಲ್ಮೀಕಿ ಗುರುಪೀಠಾಧ್ಯಕ್ಷರಾದ ಸಂಜಯ ಕುಮಾರ ಸ್ವಾಮೀಜಿ ಒತ್ತಾಯಿಸಿದರು.
ಅವರು ಸೆ. 6ರಂದು ದಕ್ಷಿಣ ಭಾರತದ ಎರಡನೆ ಹಂಪೆ ಎಂದೇ ಖ್ಯಾತಿ ಪಡೆದಿರುವ ನಿಡಗಲ್ ದುರ್ಗದ ನಿಡಗಲ್ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ವೀರ ಪರಂಪರೆ, ಶೌರ್ಯ, ಕಲೆ, ಸಾಹಿತ್ಯ, ಸಂಗೀತದ ತವರೂರಾಗಿರುವ ನಿಡಗಲ್ ದುರ್ಗದ ಅಭಿವೃದ್ಧಿಯನ್ನು ಸರಕಾರವು ಮಾಡಬೇಕಾಗಿದೆ. ಪ್ರತಿವರ್ಷ ನಿಡಗಲ್ ಉತ್ಸವವನ್ನು ವಾಲ್ಮೀಕಿ ಆಶ್ರಮದಿಂದ ಮಾಡಲಾಗುತ್ತಿದೆ. ಇನ್ನು ಮುಂದೆ ಸರ್ಕಾರದ ವತಿಯಿಂದ ಉತ್ಸವ ಮಾಡಲಿ ಎಂದರು.
ಕಡೆಯ ಶ್ರಾವಣ ಸೋಮವಾರದಂದು ತಾಲ್ಲೂಕಿನ ಐತಿಹಾಸಿಕ ನಿಡಗಲ್ ಗ್ರಾಮದ ರಾಮತೀರ್ಥದ ಕಲ್ಯಾಣಿಯಲ್ಲಿ ನೂರಾರು ಮಹಿಳೆಯರು ಗಂಗಾ ಪೂಜೆಯನ್ನು ನೆರವೇರಿಸಿ, ತಮ್ಮ ಹರಕೆಗಳನ್ನು ತೀರಿಸುವಂತೆ ಗಂಗಾ ಮಾತೆಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ರಾಜ್ಯದ ಮೂಲೆಮೂಲೆಗಳಿಂದ ಆಗಮಿಸಿದ್ದ ಭಕ್ತರು ನಿಡಗಲ್ ಬೆಟ್ಟದಲ್ಲಿರುವ ಶ್ರೀ ವೀರಭದ್ರಸ್ವಾಮಿ, ಲಕ್ಷ್ಮೀ ನರಸಿಂಹ ಸ್ವಾಮಿ, ತಿಪ್ಪೇರುದ್ರಸ್ವಾಮಿ, ನಗರೇಶ್ವರ, ದುರ್ಗಮ್ಮ, ರಂಗಯೋಗಿ ಮಂಟಪ ಸಮಾಧಿ ದೇವಸ್ಥಾನಗಳಿಗೆ ಹಾಗೂ ಜೈನ ಬಸದಿಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಶ್ರೀರಾಮನಿಗೆ ನೀರಿನ ದಾಹವುಂಟಾದಾಗ ತನ್ನ ಬಿಲ್ಲಿನಿಂದ ಬಾಣ ಹೂಡಿ ನಿರು ಬರಿಸಿದ ಸ್ಥಳವಾದ ರಾಮತೀರ್ಥ ಕಲ್ಯಾಣಿಯಲ್ಲಿ ಗಂಗಾ ಪೂಜೆ ಸಲ್ಲಿಸಿದರೆ ವಿವಾಹ ಭಾಗ್ಯ, ಮಕ್ಕಳ ಫಲ ಪ್ರಾಪ್ತಿ ಯಲ್ಲದೆ, ರೋಗ-ರುಜಿನಗಳು ವಾಸಿಯಾಗುತ್ತವೆ ಎಂದು ಪುರಾತನ ನಂಬಿಕೆಯಿದೆ. ಆಂಧ್ರÀ್ರದ ಮಡಕಶಿರಾ, ಕಲ್ಯಾಣದುರ್ಗ, ಚಳ್ಳಕೆರೆ, ಶಿರಾ ತಾಲ್ಲೂಕುಗಳಿಂದ ಅನೇಕ ದೇವರುಗಳನ್ನು ಕರೆತಂದು ಕಲ್ಯಾಣಿಯಲ್ಲಿ ಗಂಗಾ ಪೂಜೆ ನೆರವೇರಿಸಲಾಯಿತು.
ಭೇಟಿ ನೀಡಿದ ಭಕ್ತರ ದಂಡು :
ಅರಮನೆ ಅವಶೇಷ, ರಾಣಿಯರ ಈಜು ಕೊಳ, ಆನೆ ಹೊಂಡ, ಅರಮನೆ ಮುಂಭಾಗದ ಕಾಲಭೈರವೇಶ್ವರ ದೇವಸ್ಥಾನಗಳು, ಬೆಟ್ಟದ ತುದಿಯಲ್ಲಿರುವ ಶಿಖರ ಬಸವಣ್ಣ, ಫಿರಂಗಿ, ಮೇಲ್ ದುರ್ಗದ ಅರಮನೆ ಬಳಿ ಇರುವ ಸೋಮನಾಥ ಇತರೆ ದೇವಸ್ಥಾನಗಳಿಗೆ ಭಕ್ತರ ದಂಡೆ ಭೇಟಿ ನೀಡಿ ಕಣ್ತುಂಬಿಕೊಂಡಿತು. ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಅರಸೀಕೆರೆ ಪೋಲೀಸ್ ಠಾಣೆಯಿಂದ ಬಿಗಿ ಪೋಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು.
ಇದೇ ಸಂದರ್ಭದಲ್ಲಿ ನಿಡಗಲ್ ಉತ್ಸವದ ಅಂಗವಾಗಿ ಸಮಾಜ ಸೇವಕ ನೇರಳೆಕುಂಟೆ ನಾಗೇಂದ್ರಕುಮಾರ್, ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್, ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಕಿರಣ್, ತಾ. ಸರಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಎಂಜಿನಿಯರ್ ಅನಿಲ್‍ಕುಮಾರ್‍ರವರುಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪಿಡಿಓ ಮಂಜುನಾಥ್, ದೈಹಿಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಎಸ್.ಆರ್. ಪಾಳ್ಯದ ಹನುಮಂತರಾಯ, ಜಾನಪದ ಕಲಾ ಪರಿಷತ್ ಅಧ್ಯಕ್ಷ ಸತ್ಯಲೋಕೇಶ್, ಜಾನಪದ ಕಲಾವಿದ ಕರಿಯಮ್ಮನಪಾಳ್ಯದ ಆರ್.ಎನ್.ಲಿಂಗಪ್ಪ, ರಂಗಭೂಮಿ ಕಲಾವಿದ ಕೆ.ಟಿ.ಹಳ್ಳಿ ನಾಗರಾಜ್, ಎಪಿಎಂಸಿ ಅಧ್ಯಕ್ಷ ಮಾರಪ್ಪ, ವಾಲ್ಮೀಕಿ ಆಶ್ರಮದ ಪಾಳ್ಳೆಗಾರ ಲೋಕೇಶ್, ಓಂಕಾರ್ ನಾಯಕ, ಚಿತ್ತಗಾನಹಳ್ಳಿ ಚಂದ್ರು, ಜಗದೀಶ್, ತಿಮ್ಮಯ್ಯ, ಮಹಾರಾಜ್, ಪಾಲಾಕ್ಷ, ರಾಮಪ್ಪ, ಬೆಳ್ಳಿಬಟ್ಟಲು ಬಲರಾಮ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
